ಲೋಕಾಯುಕ್ತ ಪೊಲೀಸ್‌ ದಾಳಿ: ಬಿಬಿಎಂಪಿ ಜಂಟಿ ಆಯುಕ್ತ, ಪಿಎ ವಿಚಾರಣೆ

ಬೆಂಗಳೂರು: ಸ್ಥಿರಾಸ್ತಿಯೊಂದರ ಖಾತೆ ಬದಲಾವಣೆಗೆ ₹ 4 ಲಕ್ಷ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಬಿಬಿಎಂಪಿ ಪಶ್ಚಿಮ ವಿಭಾಗದ (ಮಲ್ಲೇಶ್ವರ) ಜಂಟಿ ಆಯುಕ್ತ ಎಸ್‌.ಎಂ. ಶ್ರೀನಿವಾಸ ಮತ್ತು ಅವರ ಆಪ್ತ ಸಹಾಯಕ ಉಮೇಶ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.
ಬಿಬಿಎಂಪಿ ಪಶ್ಚಿಮ ವಿಭಾಗದ ಕಚೇರಿಯಲ್ಲೇ ಇಬ್ಬರನ್ನೂ ಬಂಧಿಸಲಾಗಿದ್ದು, ₹ 4 ಲಕ್ಷ ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ.  ವ್ಯಕ್ತಿಯೊಬ್ಬರು ತಮ್ಮ ಆಸ್ತಿಯ ಖಾತೆ ಬದಲಾವಣೆ ಕೋರಿ ಬಿಬಿಎಂಪಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆ ಪೂರ್ಣಗೊಳಿಸಲು ₹ 4 ಲಕ್ಷ ಲಂಚ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ದೂರು ನೀಡಿದ್ದರು.

ಆರೋಪಿಗಳ ಹೇಳಿದಂತೆ ಸೋಮವಾರ ಮಧ್ಯಾಹ್ನ ಬಿಬಿಎಂಪಿ ಪಶ್ಚಿಮ ವಲಯದ ಕಚೇರಿಗೆ ತೆರಳಿದ ಅರ್ಜಿದಾರರು ಲಂಚದ ಹಣ ತಲುಪಿಸಿದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸ್‌ ವಿಭಾಗದ ಡಿವೈಎಸ್‌ಪಿಗಳಾದ ಬಿ.ಕೆ. ಮಂಜಯ್ಯ ಮತ್ತು ಎಂ.ಜಿ. ಶಂಕರನಾರಾಯಣ ಬೆಂಗಳೂರು ಲೋಕಾಯುಕ್ತ ಎಸ್‌ಪಿ ಶ್ರೀನಾಥ್ ಜೋಶಿ ನೇತೃತ್ವದ ಲೋಕಾಯುಕ್ತ ತಂಡ ಮಲ್ಲೇಶ್ವರಂನಲ್ಲಿರುವ ಪಶ್ಚಿಮ ವಿಭಾಗ ಬಿಬಿಎಂಪಿ ಕಚೇರಿ ಮೇಲೆ ದಾಳಿ ನಡೆಸಿದ್ದು, ಬಿಬಿಎಂಪಿ ಜಂಟಿ ಆಯುಕ್ತ ಎಸ್.ಎಂ ಶ್ರೀನಿವಾಸ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಒಟ್ಟು 8 ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿತ್ತು. ಶ್ರೀನಾಥ್‌ ಜೋಶಿ ನೇತೃತ್ವದ ಪೊಲೀಸ್‌ ಅಧಿಕಾರಿಗಳ ತಂಡ ಆರೋಪಿಗಳ ವಿಚಾರಣೆ ನಡೆಸುತ್ತಿದೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.
ಎಸಿಬಿ ರದ್ದುಗೊಳಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಮರುಸ್ಥಾಪಿಸಿ ಹೈಕೋರ್ಟ್‌ ಆದೇಶ ಹೊರಡಿಸಿದ ಬಳಿಕ ರಾಜ್ಯದಲ್ಲಿ ಎಸಿಬಿ (ACB) ರದ್ದುಗೊಂಡು ಇಂದು ಎಸಿಬಿಯಿಂದ ಲೋಕಾಯುಕ್ತಕ್ಕೆ ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ಲೋಕಾಯುಕ್ತ ಪೊಲೀಸರು ನಡೆಸಿದ ಮೊದಲ ಕಾರ್ಯಾಚರಣೆ ಇದಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement