‘ಕಾಂಗ್ರೆಸ್ ಚೋಡೋ, ಬಿಜೆಪಿ ಕೋ ಜೋಡೋ’: ಕಾಂಗ್ರೆಸ್‌ನ 11 ಶಾಸಕರಲ್ಲಿ 8 ಮಂದಿ ಬಿಜೆಪಿಗೆ ಸೇರ್ಪಡೆ

ಪಣಜಿ: ಗೋವಾ ಕಾಂಗ್ರೆಸ್‌ನ 11 ಶಾಸಕರಲ್ಲಿ ಎಂಟು ಶಾಸಕರು ಉನ್ನತ ನಾಯಕರಾದ ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೋ ನೇತೃತ್ವದಲ್ಲಿ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡರು. ಈಗ ಗೋವಾದಲ್ಲಿ ಪ್ರತಿಪಕ್ಷವಾದ ಕಾಂಗ್ರೆಸ್‌ ಶಾಸಕರ ಸಂಖ್ಯೆ ಕೇವಲ ಮೂರಕ್ಕೆ ಇಳಿದಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ನಡುವೆಯೇ ನಡೆದ ಈ ಸಾಮೂಹಿಕ ಪಕ್ಷಾಂತರವು ಕಾಂಗ್ರೆಸ್‌ಗೆ ಭಾರಿ ಮುಜುಗರವನ್ನುಂಟು ಮಾಡಿದೆ.
ಬಿಜೆಪಿಗೆ ಸೇರಿದ ಶಾಸಕರಲ್ಲಿ ದಿಗಂಬರ್ ಕಾಮತ್, ಮೈಕೆಲ್ ಲೋಬೋ, ದೇಲಿಲಾ ಲೋಬೋ, ರಾಜೇಶ್ ಫಾಲ್ದೇಸಾಯಿ, ಕೇದಾರ್ ನಾಯಕ್, ಸಂಕಲ್ಪ ಅಮೋನ್ಕರ್, ಅಲೆಕ್ಸೋ ಸಿಕ್ವೇರಾ ಮತ್ತು ರುಡಾಲ್ಫ್ ಫೆರ್ನಾಂಡಿಸ್ ಸೇರಿದ್ದಾರೆ.
ಇದು ಕಾಂಗ್ರೆಸ್ ಛೋಡೋ (ಕಾಂಗ್ರೆಸ್ ತೊರೆಯಿರಿ), ಬಿಜೆಪಿ ಕೋ ಜೋಡೋ” ಎಂದು ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆಯೇ ಮೈಕೆಲ್ ಲೋಬೋ ವ್ಯಂಗ್ಯವಾಡಿದ್ದಾರೆ.

ಎಂಟು ಶಾಸಕರು ಒಂದು ಗುಂಪಾಗಿ ಒಡೆಯುವುದರೊಂದಿಗೆ – ಅದು ಪಕ್ಷದ ಮೂರನೇ ಎರಡರಷ್ಟು ಬಲ ಹೊಂದುವುದರಿಂದ ಅವರು ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹತೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಕಾಂಗ್ರೆಸ್ ಮಿತ್ರಪಕ್ಷ, ಗೋವಾ ಫಾರ್ವರ್ಡ್ ಪಕ್ಷದ ಮುಖ್ಯಸ್ಥ ವಿಜಯ್ ಸರ್ದೇಸಾಯಿ, ಪಕ್ಷಾಂತರಿ ಶಾಸಕರು “ಸಂಪತ್ತಿನ ದುರಾಸೆ ಮತ್ತು ಅಧಿಕಾರದ ಹಸಿವಿನಿಂದ ಪಕ್ಷಾಂತರ ಮಾಡಿದ್ದಾರೆ. ಇದು ಶುದ್ಧ ದುಷ್ಟತನದ ಸಂಕೇತ” ಎಂದು ಟೀಕಿಸಿದ್ದಾರೆ.
ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೋ ಜುಲೈನಲ್ಲಿ ಪಕ್ಷಾಂತರ ಮಾಡುತ್ತಾರೆ ಎಂಬ ಊಹಾಪೋಹ ಇತ್ತು ಮತ್ತು ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಅವರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಪಕ್ಷವು ಸ್ಪೀಕರ್ ಅವರನ್ನು ಕೇಳಿತ್ತು. ಪಕ್ಷವು ಮೈಕೆಲ್ ಲೋಬೊ ಅವರನ್ನು ವಿರೋಧ ಪಕ್ಷದ ನಾಯಕನ ಸ್ಥಾನದಿಂದ ವಜಾಗೊಳಿಸಿತ್ತು. ಆದರೆ ಆದರೆ ಬದಲಿ ಹೆಸರನ್ನು ಸೂಚಿಸಿಲ್ಲ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಇಂದು ಬೆಳಗ್ಗೆ ವಿಧಾನಸಭೆ ಕಲಾಪ ನಡೆಯದ ಕಾರಣ ಸ್ಪೀಕರ್ ಜೊತೆ ಶಾಸಕರ ಸಭೆ ಊಹಾಪೋಹಗಳಿಗೆ ತೆರೆ ಎಳೆದಿದೆ. ನಂತರ ರಾಜ್ಯ ಬಿಜೆಪಿ ಮುಖ್ಯಸ್ಥ ಸದಾನಂದ ಶೇಟ್ ತಾನವಡೆ ಅವರು ಕಾಂಗ್ರೆಸ್‌ನ ಎಂಟು ಶಾಸಕರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದರು.
ಜುಲೈನಲ್ಲಿ ಕಾಂಗ್ರೆಸ್ ತನ್ನ ಕನಿಷ್ಠ ಏಳು ಶಾಸಕರನ್ನು ತನ್ನೊಂದಿಗೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ ಪಕ್ಷಾಂತರವು ಅನಿರೀಕ್ಷಿತವಾಗಿರಲಿಲ್ಲ. 40 ಶಾಸಕರನ್ನೊಳಗೊಂಡ ಗೋವಾದ ವಿಧಾನಸಭೆಯಲ್ಲಿ, ಬಿಜೆಪಿ ಸರ್ಕಾರವು ತನ್ನದೇ ಆದ 20 ಶಾಸಕರು, ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಇಬ್ಬರು ಮತ್ತು ಮೂವರು ಸ್ವತಂತ್ರರು ಸೇರಿ 25 ಶಾಸಕರ ಬೆಂಬಲ ಹೊಂದಿತ್ತು. ಈಗ ಕಾಂಗ್ರೆಸ್‌ನ ಎಂಟು ಶಾಸಕರು ಬಿಜೆಪಿಗೆ ಸೇರ್ಪಡೆಯಾದ ನಂತರ ಬಿಜೆಪಿ ಸಂಖ್ಯೆ 33ಕ್ಕೆ ಏರಲಿದೆ. ಕಾಂಗ್ರೆಸ್‌ನಲ್ಲಿ ಮೂವರು ಮಾತ್ರ ಉಳಿದಿದ್ದಾರೆ, ಜೊತೆಗೆ ಗೋವಾ ಫಾರ್ವರ್ಡ್ ಪಾರ್ಟಿಯಿಂದ ಒಬ್ಬರು ಇದ್ದಾರೆ. ಆಮ್ ಆದ್ಮಿ ಪಕ್ಷ (ಎಎಪಿ) ಇಬ್ಬರು ಶಾಸಕರನ್ನು ಹೊಂದಿದೆ ಮತ್ತು ರೆವಲ್ಯೂಷನರಿ ಗೋನ್ಸ್ ಪಕ್ಷವು ಒಬ್ಬರನ್ನು ಹೊಂದಿದೆ.

 

 

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement