ಹುಬ್ಬಳ್ಳಿ ಸೇರಿ ಬೆಂಗಳೂರಿನಿಂದ ಮೂರು ನಗರಕ್ಕೆ ವಂದೇ ಭಾರತ್‌ ರೈಲು: ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ ನೈಋುತ್ಯ ರೈಲ್ವೆ

ಬೆಂಗಳೂರು: ಸ್ಥಳೀಯ ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸಾಕಷ್ಟು ಪ್ರಚಾರ ಪಡೆಯುತ್ತಿರುವ ಸಮಯದಲ್ಲಿ, ನೈಋತ್ಯ ರೈಲ್ವೆ (SWR) ಬೆಂಗಳೂರನ್ನು ಸಂಪರ್ಕಿಸುವ ಮೂರು ಮಾರ್ಗಗಳಲ್ಲಿ ಹೊಸ ತಲೆಮಾರಿನ ರೈಲು ವಂದೇ ಭಾರತ್‌ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದೆ.
ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಕೊಯಮತ್ತೂರು ಹಾಗೂ ಬೆಂಗಳೂರು- ಚೆನ್ನೈ ಪ್ರಸ್ತಾವಿತ ಮಾರ್ಗಗಳಾಗಿವೆ. ವಂದೇ ಭಾರತಕ್ಕಾಗಿ ಪ್ರಸ್ತಾಪಿಸಲಾದ ಮಾರ್ಗಗಳು ಅವುಗಳ ಜನಪ್ರಿಯತೆ ಮತ್ತು ಕಾರ್ಯಸಾಧ್ಯತೆಯನ್ನು ಆಧರಿಸಿವೆ ಎಂದು ನೈರುತ್ವ ರೈಲ್ವೆ ಮೂಲಗಳು ತಿಳಿಸಿವೆ. “ಈ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿಗೆ ಔಪಚಾರಿಕವಾಗಿ ಸಲ್ಲಿಸಲಾಗಿದೆ. ಹೊಸ ಸೇವೆಗಳನ್ನು ಪರಿಚಯಿಸುವ ಕುರಿತು ಮಂಡಳಿಯು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
ಈ ಮಾರ್ಗಗಳಲ್ಲಿ ವಿಮಾನ ಪ್ರಯಾಣವನ್ನು ಅವಲಂಬಿಸಿರುವ ಜನರು ವಂದೇ ಭಾರತಕ್ಕೆ ಬದಲಾಗಬಹುದು ಎಂದು ನಾವು ಭಾವಿಸುತ್ತೇವೆ. ಹೊಸ ರೈಲುಗಳಲ್ಲಿ ಪ್ರಯಾಣದ ಅನುಭವವು ವೇಗ ಮತ್ತು ಪ್ರಯಾಣದ ಸೌಕರ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.

ವೇಗ, ಸುರಕ್ಷತೆ ಮತ್ತು ಸೇವೆಗಳು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವಿಶಿಷ್ಟ ಲಕ್ಷಣಗಳಾಗಿವೆ ಎಂದು ರೈಲ್ವೆ ಹೇಳಿದೆ.
ಹುಬ್ಬಳ್ಳಿ-ಬೆಂಗಳೂರು ನಡುವಿನ ಹಳಿಗಳ ದ್ವಿಗುಣಗೊಳಿಸುವಿಕೆಯು ವಂದೇ ಭಾರತ್ ರೈಲು ಓಡಿಸಲು ಹೆಚ್ಚು ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ಹುಬ್ಬಳ್ಳಿ-ಬೆಂಗಳೂರು ನಡುವೆ, ಹುಬ್ಬಳ್ಳಿ ಮತ್ತು ಹಾವೇರಿ ನಡುವೆ 45 ಕಿ.ಮೀ ದೂರ ರೈಲ್ವೆ ಹಳಿಗಳ ಜೋಡಿ ಮಾರ್ಗಗಳ ಕಾರ್ಯ ಬಾಕಿ ಇದೆ. ವರ್ಷಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. SWR ಮಾರ್ಚ್ 2023 ರ ವೇಳೆಗೆ ಮಾರ್ಗದ ವಿದ್ಯುದೀಕರಣ ಗುರಿ ಇಟ್ಟುಕೊಂಡಿದೆ. ಒಮ್ಮೆ ದ್ವಿಗುಣಗೊಳಿಸುವಿಕೆ ಪೂರ್ಣಗೊಂಡರೆ, ಕರ್ವ್‌ಗಳು ಸಮತಟ್ಟಾಗಿರುವುದರಿಂದ ಅಸ್ತಿತ್ವದಲ್ಲಿರುವ ರೈಲುಗಳ ಪ್ರಯಾಣದ ಸಮಯವನ್ನು ಒಂದು ಗಂಟೆ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ, ”ಎಂದು ಮೂಲವೊಂದು ತಿಳಿಸಿದೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

ಇದು ಗಂಟೆಗೆ 180 ಕಿ.ಮೀ. ವೇಗ ಸಂಚರಿಸಲಿದೆ ಎಂದು ಹೇಳಲಾಗಿದೆ. ಸೆಮಿ ಹೈಸ್ಪೀಡ್‌ ರೈಲು ‘ವಂದೇ ಭಾರತ್‌’ ಎಕ್ಸ್‌ಪ್ರೆಸ್‌ ತನ್ನ ಪ್ರಾಯೋಗಿಕ ಸಂಚಾರದಲ್ಲಿ ಬುಲೆಟ್‌ ರೈಲಿನ ದಾಖಲೆ ಸರಿಗಟ್ಟಿದೆ. ಕೆಲವು ದಿನಗಳ ಹಿಂದೆ, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮುಂಬೈ ಮತ್ತು ಅಹಮದಾಬಾದ್ ನಡುವೆ ಮೂರನೇ ವಂದೇ ಭಾರತ್‌ನ ಪ್ರಾಯೋಗಿಕ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಮತ್ತು ರೈಲನ್ನು ಸ್ಥಿರ ಸ್ಥಿತಿಯಲ್ಲಿ ಗರಿಷ್ಠ 180 ಕಿಮೀ ವೇಗದಲ್ಲಿ ನಿರ್ವಹಿಸಲಾಗಿದೆ ಎಂದು ಹೇಳಿದರು. ಆರಂಭದ ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ಓಡಿದೆ. ಇದರ ಮೂಲಕ ವಂದೇ ಭಾರತ್‌ ರೈಲಿನ ಮೂರನೇ ರೇಕುವಿನ ಪರೀಕ್ಷೆಯೂ ಯಶಸ್ವಿಯಾಗಿ ಪೂರ್ಣಗೊಂಡಂತಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರಿಂದ ಗ್ರೀನ್‌ ಸಿಗ್ನಲ್‌ ಕೂಡ ಸಿಕ್ಕಿದೆ. ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿರುವ ಕಾರಣ, ಆದಷ್ಟು ಬೇಗ ಉಳಿದ 72 ರೈಲುಗಳ ಸರಣಿ ಉತ್ಪಾದನೆ ಆರಂಭವಾಗಲಿದೆ ಎಂದೂ ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement