ಉತ್ತರ ಕನ್ನಡ ಜಿಲ್ಲೆ ಜನರ ಹೋರಾಟಕ್ಕೆ ಮಣಿದ ಸರ್ಕಾರ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದ ತಾತ್ವಿಕ ಒಪ್ಪಿಗೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಜನರ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ  ತಾತ್ವಿಕ ಒಪ್ಪಿಗೆ ಸೂಚಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರ ಸಭೆ ನಡೆಸಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಂಗಳವಾರ ಸಚಿವ ಸುಧಾಕರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಶಾಸಕಿ ರೂಪಾಲಿ ನಾಯ್ಕ್, ದಿನಕರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಸೇರಿದಂತೆ ಆ ಭಾಗದ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವ ವಿಚಾರದಲ್ಲಿ ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಜನರ ಒತ್ತಡಕ್ಕೆ ಮಣಿದ ಸರ್ಕಾರ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ತಾತ್ವಿಕ ಒಪ್ಪಿಗೆ ನೀಡಿದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

 ಜಿಲ್ಲೆಗೆ  ಅಧಿವೇಶನದ ನಂತರ ಸಿಎಂ ಬೊಮ್ಮಾಯಿ, ಸಚಿವ ಸುಧಾಕರ ಭೇಟಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವರು ಹಾಗೂ ತಜ್ಞರ ತಂಡ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದೆ. ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ದೊಡ್ಡದಾಗಿದ್ದು, ಕರಾವಳಿ, ಘಟ್ಟ ಹಾಗೂ ಬಯಲು ಸೀಮೆಯಂತ ವೈವಿಧ್ಯ ಪ್ರದೇಶಗಳನ್ನು ಹೊಂದಿದೆ. ಅಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತಲುಪುವುದೇ ಕಷ್ಟಸಾಧ್ಯ. ಹೀಗಾಗಿ ತಂಡವು ಜಿಲ್ಲೆಯ ಯಾವ ಭಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಪರಿಶೀಲನೆ ಮಾಡಲಿದೆ. ಆ ನಂತರ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ನಿರ್ಮಾಣ ಮಾಡುವ ಬಗ್ಗೆ ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬೀಳಲಿದೆ. ಎಲ್ಲರಿಗೂ ಅನುಕೂಲವಾಗುವ ಜಿಲ್ಲೆಯ ಮಧ್ಯಭಾಗ ಹಾಗೂ ಹೆಚ್ಚು ಸುಲಭವಾಗಿ ಸಂಪರ್ಕಿಸಬಹುದಾದ ಸ್ಥಳದ ಬಗ್ಗೆ ಸಮೀಕ್ಷೆ ನಡೆಯಲಿದೆ.
ಆಸ್ಪತ್ರೆ ಯಾವ ಭಾಗದಲ್ಲಿ ನಿರ್ಮಿಸಬೇಕು ಎಂಬ ಬಗ್ಗೆಯೂ ಚಿಂತನೆ ನಡೆಯಲಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳ ಇನ್ನೂ ಅಂತಿಮ ಮಾಡಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಕಾರವಾರದಲ್ಲಿರುವ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸಾಕಾಗುವುದಿಲ್ಲ. ಅದಕ್ಕೆ ಬೇಕಾದ ಜಮೀನು ಬೇರೆ ಬೇರೆ ಇಲಾಖೆಗೆ ಸೇರಿದ್ದಾಗಿದೆ. ಹೀಗಾಗಿ ಸ್ಥಳದ ವಿಚಾರವಾಗಿ ಸ್ಪೀಕರ್ ಕಾಗೇರಿ, ಮುಖ್ಯಮಂತ್ರಿ ಬೊಮ್ಮಾಯಿ ಅವರುಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ.  ಕುಮಟಾ ಭೌಗೋಳಿಕವಾಗಿ ಮಧ್ಯೆ ಇದೆ. ಕುಮಟಾದಲ್ಲಿ ಆಸ್ಪತ್ರೆ ಮಾಡಲು ಸಲಹೆ ಬಂದಿದೆ. ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇವೆ ಕೇಳಿದ್ದಾರೆ  ಎಂದರು.ಅಧಿವೇಶನದ ಬಳಿಕ ಉತ್ತರ ಕನ್ನಡ ಜಿಲ್ಲಾ ಪ್ರವಾಸ ಮಾಡಲಾಗುವುದು. ಅಲ್ಲಿನ ಸಚಿವರು, ಶಾಸಕರ ಜೊತೆ ಪ್ರವಾಸ ಮಾಡಿ ಆಸ್ಪತ್ರೆ ಎಲ್ಲಿ ನಿರ್ಮಾಣ ಮಾಡಬೇಕು ಎಂದು ತೀರ್ಮಾನ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ನಮ್ಮ ಪ್ರಸ್ತಾವನೆಗೆ ಸರ್ಕಾರ ಒಪ್ಪಿದೆ”
ಸಭೆ ಬಳಿಕ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಈಗಿರುವ ಮೆಡಿಕಲ್ ಕಾಲೇಜಿಗೆ ಎಲ್ಲಾ ಸೌಲಭ್ಯ ಒದಗಿಸಬೇಕು, ಉತ್ತರ ಕನ್ನಡ ಜಿಲ್ಲೆಯ ಹೃದಯಭಾಗವಾದ ಕುಮಟಾದ ಆಸುಪಾಸಿನಲ್ಲಿ ಆಸ್ಪತ್ರೆ ಮಾಡಬೇಕೆಂಬ ನಮ್ಮ ಪ್ರಸ್ತಾವನೆಗೆ ಸರ್ಕಾರ ಮತ್ತು ಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಈಡೇರಿದರೆ ನಮ್ಮ ಎಲ್ಲಾ ಬೇಡಿಕೆಗಳು ಈಡೇರುತ್ತದೆ ಎಂದು ಹೇಳಿದ್ದಾರೆ.

4.5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement