ಎಎಪಿ ಸರ್ಕಾರ ವಿಶ್ವಾಸಮತ ಯಾಚನೆಗೆ ಕರೆದಿದ್ದ ವಿಧಾನಸಭೆ ಅಧಿವೇಶನ ರದ್ದುಗೊಳಿಸಿದ ಪಂಜಾಬ್ ರಾಜ್ಯಪಾಲ

ಚಂಡೀಗಡ: ಗುರುವಾರ ವಿಶೇಷ ವಿಧಾನಸಭೆ ಅಧಿವೇಶನ ಕರೆಯುವಂತೆ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ಹೊರಡಿಸಿದ್ದ ಆದೇಶವನ್ನು ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಬುಧವಾರ ಹಿಂಪಡೆದಿದ್ದಾರೆ. ವಿಶ್ವಾಸಮತ ಯಾಚನೆಗಾಗಿ ರಾಜ್ಯ ಸರ್ಕಾರ ಅಧಿವೇಶನ ಕರೆದಿತ್ತು.
ಹಾಗೆ ಮಾಡಲು “ನಿರ್ದಿಷ್ಟ ನಿಯಮಗಳ ಅನುಪಸ್ಥಿತಿಯಲ್ಲಿ” ರಾಜ್ಯಪಾಲರು ಆದೇಶವನ್ನು ಹಿಂತೆಗೆದುಕೊಂಡರು.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಇದು ಪ್ರಜಾಪ್ರಭುತ್ವದ ಕೊಲೆ ಎಂದು ಬಣ್ಣಿಸಿದ್ದಾರೆ.‘‘ಸಚಿವ ಸಂಪುಟ ಕರೆದಿರುವ ಅಧಿವೇಶನವನ್ನು ರಾಜ್ಯಪಾಲರು ನಿರಾಕರಿಸಿದರೆ ಹೇಗೆ?.. ಹಾಗಾದರೆ ಪ್ರಜಾಪ್ರಭುತ್ವ ಮುಗಿಯಿತು.. ಎರಡು ದಿನಗಳ ಹಿಂದೆ ರಾಜ್ಯಪಾಲರು ಅಧಿವೇಶನಕ್ಕೆ ಅನುಮತಿ ನೀಡಿದ್ದರು.

ಆಪರೇಷನ್ ಕಮಲ ವಿಫಲವಾಗಲು ಆರಂಭಿಸಿ ನಂಬರ್ ಬಾರದೆ ಇದ್ದಾಗ ಹಿಂಪಡೆಯುವಂತೆ ಮೇಲಿನಿಂದ ಕರೆ ಬಂದಿತ್ತು. ಇಂದು ದೇಶವು ಒಂದು ಕಡೆ ಸಂವಿಧಾನ ಮತ್ತು ಇನ್ನೊಂದು ಕಡೆ ಆಪರೇಷನ್ ಕಮಲವನ್ನು ಹೊಂದಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಮಂಗಳವಾರ, ಪಂಜಾಬ್ ಕ್ಯಾಬಿನೆಟ್ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಅನುಮೋದನೆ ನೀಡಿತು. ಪಂಜಾಬ್‌ನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆಡಳಿತಾರೂಢ ಎಎಪಿ ಆರೋಪಿಸಿದ ಕೆಲವು ದಿನಗಳ ನಂತರ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಾಗುವುದು ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಈ ಹಿಂದೆ ಘೋಷಿಸಿದ್ದರು.
ಆರು ತಿಂಗಳ ಹಳೆಯ ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಬಿಜೆಪಿಯು ತನ್ನ ಕನಿಷ್ಠ 10 ಶಾಸಕರಿಗೆ ತಲಾ 25 ಕೋಟಿ ರೂಪಾಯಿಗಳ ಪ್ರಸ್ತಾಪದೊಂದಿಗೆ ಸಂಪರ್ಕಿಸಿದೆ ಎಂದು ಆಡಳಿತ ಪಕ್ಷವು ಇತ್ತೀಚೆಗೆ ಹೇಳಿಕೊಂಡಿತ್ತು.
ಕೆಲವು ದಿನಗಳ ಹಿಂದೆ, ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು ಬಿಜೆಪಿಯ ‘ಆಪರೇಷನ್ ಕಮಲ’ದ ಭಾಗವಾಗಿ, ರಾಜ್ಯದ ಕೆಲವು ಎಎಪಿ ಶಾಸಕರನ್ನು ಕೇಸರಿ ಪಾಳೆಯದ ಜನರು “ಸಮೀಪಿಸಿದ್ದಾರೆ” ಎಂದು ಆರೋಪಿಸಿದ್ದರು.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement