ವಿಶ್ವವಿಖ್ಯಾತ ಮೈಸೂರು ದಸರೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಮೈಸೂರು: ಐತಿಹಾಸಿಕ ಮೈಸೂರು ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಬೆಳಿಗ್ಗೆ ವಿಧ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಬೆಳಿಗ್ಗೆ 9.45 ರಿಂದ‌10.05ರ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕ, ವೈಭವಯುತವಾದ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಸ್ತುವಾರಿ ಸಚಿವ ಎಸ್‌ಟಿ.ಸೋಮಶೇಖರ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲಕುಮಾರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ ಮೊದಲಾದವರು ಪಾಲ್ಗೊಂಡಿದ್ದರು. ಇಂದಿನಿಂದ 9 ದಿನಗಳ ಕಾಲ ದಸರಾ ಸಮಾರಂಭ ನಡೆಯಲಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.

ಇದಕ್ಕೂ ಮೊದಲು ಚಾಮುಂಡಿದೇವಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ನಮನ ಸಲ್ಲಿಸಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿ ಅದಿದೇವತೆ ಶ್ರೀ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸಿದ್ದಾರೆ. ಗರ್ಭಗುಡಿಯಲ್ಲಿ ರಾಷ್ಟ್ರಪತಿ ಕೆಲ ನಿಮಿಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಂತರ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟಿಸಿದ್ದಾರೆ. ನಂತರ, ರಾಷ್ಟ್ರಪತಿ ಮುರ್ಮು ಅವರಿಗೆ ರೇಷ್ಮೆ ಪೇಟ ತೊಡಿಸಿ, ಹಾರ ಹಾಕಿ, ಬೆಳ್ಳಿಯ ಚಾಮುಂಡೇಶ್ವರಿ ವಿಗ್ರಹ ನೀಡಿ ಸನ್ಮಾನ ಮಾಡಲಾಯಿತು.

ಪ್ರಮುಖ ಸುದ್ದಿ :-   ದಾರಿತಪ್ಪಿ ಮಹಾರಾಷ್ಟ್ರ ತಲುಪಿದ್ದ ಹಾವೇರಿ ಜಿಲ್ಲೆಯ ವೃದ್ಧೆ ; ಗೂಗಲ್‌ ಸರ್ಚ್‌, ಚಾಟ್‌ಜಿಪಿಟಿ ನೆರವಿನಿಂದ ಮರಳಿ ಮನೆಗೆ

ನಂತರ ಮಾತನಾಡಿದ ರಾಷ್ಟ್ರಪತಿ ಮುರ್ಮು, ಮೈಸೂರು ದಸರಾ ಭಾರತದ ಸಂಸ್ಕೃತಿಯ ಪ್ರತೀಕ. ಈ ಹಬ್ಬ ಹಲವು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ. ಮಹಿಳಾ ಪ್ರಾಬಲ್ಯವೇ ದಸರಾ ಹಬ್ಬದ ವಿಶೇಷ ಎಂದು ಬಣ್ಣಿಸಿದರು. ಮಹಿಷಾಸುರ ಮರ್ಧನದ ಮೂಲಕ ಮಹಿಳೆಯ ಸಾಮರ್ಥ್ಯದ ಪರಿಚಯ ಮಾಡಿಕೊಡಲಾಗಿದೆ. ಮಹಿಳೆ ಶಾಂತಿ- ಶಕ್ತಿ- ಶೌರ್ಯದ ಸಂಕೇತ ಎಂಬುದನ್ನು ಬಿಂಬಿಸಲಾಗಿದೆ. ಮಹಿಳಾ ಪ್ರಾಬಲ್ಯತೆಯೇ ದಸರೆಯ ವಿಶೇಷ ಎಂದರು.
ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಒನಕೆ‌ ಓಬವ್ವ ಅವರೆಲ್ಲ ವಿದೇಶಿಗರನ್ನು ಧೈರ್ಯದಿಂದ ಎದುರಿಸಿದ ವೀರ ವನಿತೆಯರು ಎಂದು ನೆನಪಿಸಿಕೊಂಡರು. ಐತಿಹಾಸಿಕ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಿದ ಮುಖ್ಯಮಂತ್ರಿಗಳಿಗೆ ಕೃತಜ್ಞತೆಗಳು ಎಂದರು.

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement