ನಾಳೆ 2016ರ ನೋಟು ಅಮಾನ್ಯೀಕರಣ ಕ್ರಮದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿವಾದಾತ್ಮಕ ಕ್ರಮದ ಆರು ವರ್ಷಗಳ ನಂತರ ನೋಟು ಅಮಾನ್ಯೀಕರಣ (demonetisation)ದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಸೆಪ್ಟೆಂಬರ್‌ 28ರಂದು ವಿಚಾರಣೆ ನಡೆಸಲಿದೆ ಎಂದು ಲೈವ್‌ ಲಾ (Live Law) ವರದಿ ಮಾಡಿದೆ.
ನ್ಯಾಯಮೂರ್ತಿ ಅಬ್ದುಲ್ ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಬುಧವಾರ ಅರ್ಜಿಗಳ ವಿಚಾರಣೆ ನಡೆಸಲಿದೆ.
ಪೀಠವು ವಿವರವಾದ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸುವ ನಿರೀಕ್ಷೆಯಿದೆ. ಈ ವಿಷಯವನ್ನು ಡಿಸೆಂಬರ್ 16, 2016 ರಂದು ಸಂವಿಧಾನ ಪೀಠಕ್ಕೆ ಉಲ್ಲೇಖಿಸಲಾಗಿತ್ತು, ಆದರೆ ಇನ್ನೂ ಪೀಠವನ್ನು ರಚಿಸಲಾಗಿರಲಿಲ್ಲ.

ನವೆಂಬರ್ 8, 2016 ರಂದು ರಾಷ್ಟ್ರವನ್ನುದ್ದೇಶಿಸಿ ಹಠಾತ್ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿಯಿಂದ ಅಸ್ತಿತ್ವದಲ್ಲಿರುವ ₹ 500 ಮತ್ತು ₹ 1,000 ನೋಟುಗಳನ್ನು ಇನ್ನು ಮುಂದೆ ಯಾವುದೇ ವಹಿವಾಟುಗಳಿಗೆ ಬಳಸಲಾಗುವುದಿಲ್ಲ ಎಂದು ಘೋಷಿಸಿದ್ದರು. ಭಾರೀ ಸಾರ್ವಜನಿಕ ಆಕ್ರೋಶ ಹಾಗೂ ಚರ್ಚೆಗೆ ಕಾರಣವಾಗಿತ್ತು..
ಇದು ಅಜಾಗರೂಕ ಮತ್ತು ಭಾರತದ ಆರ್ಥಿಕತೆಯನ್ನು ಧ್ವಂಸಗೊಳಿಸಿದೆ ಎಂದು ವಿರೋಧ ಪಕ್ಷಗಳು ಈ ಕ್ರಮವನ್ನು ಟೀಕಿಸಿದ್ದವು.
ಜನರು ಹಳೆಯ ನೋಟುಗಳನ್ನು ಹಿಂದಿರುಗಿಸಲು ಅಥವಾ ಹೊಸ ₹ 500 ಮತ್ತು ₹ 2,000 ನೋಟುಗಳಿಗೆ ಬದಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರಿಂದ ಬ್ಯಾಂಕ್‌ಗಳಲ್ಲಿ ಉದ್ದನೆಯ ಸಾಲುಗಳು ಕಂಡುಬಂದಿದ್ದವು.
ನೋಟು ಅಮಾನ್ಯೀಕರಣವು ಭ್ರಷ್ಟಾಚಾರ, ಕಪ್ಪುಹಣ ಮತ್ತು ನಕಲಿ ನೋಟುಗಳ ವಿರುದ್ಧ “ಮಹಾಯಜ್ಞ” ದಲ್ಲಿ ಪ್ರತಿಯೊಬ್ಬ ಪ್ರಜೆಯೂ ಭಾಗಿಯಾಗುವ ಅವಕಾಶವಾಗಿದೆ ಎಂದು ಪ್ರಧಾನಿ ಹೇಳಿದ್ದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement