ಇರಾನ್‌: ಪ್ರತಿಭಟನೆಯಲ್ಲಿ ಹಿಜಾಬ್ ತೆಗೆದು ಕೂದಲು ಕಟ್ಟಿದ್ದ ಯುವತಿ ವೀಡಿಯೊ ವೈರಲ್ ಆದ ಬೆನ್ನಲ್ಲೇ ಗುಂಡಿಕ್ಕಿ ಹತ್ಯೆ

ತೆಹ್ರಾನ್ : ಹಿಜಾಬ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಿಂದ ಇರಾನ್ ಧಗಧಗನೆ ಹೊತ್ತಿ ಉರಿಯುತ್ತಿದೆ. ಪ್ರತಿಭಟನೆಯಲ್ಲಿ 75ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳುತ್ತವೆ. ಹಿಜಾಬ್ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನಕಾರರ ಮೇಲೆ ಗುಂಡಿನ ದಾಳಿ ನಡೆಯುತ್ತಿದೆ.  ಪ್ರತಿಭಟನೆ ನಡುವೆ ಹಿಜಾಬ್ ಕಿತ್ತೆಸೆದು ತಲೆಕೂದಲನ್ನು ಕಟ್ಟುತ್ತಾ ಧೈರ್ಯದಿಂದ ಹೆಜ್ಜೆ ಹಾಕಿದ ಇರಾನ್ ಯುವತಿಯ ವಿಡಿಯೋ ಭಾರೀ ವೈರಲ್ ಆಗಿತ್ತು. ವೀಡಿಯೊ ವೈರಲ್‌ ಆದ ಬೆನ್ನಲ್ಲೇ ಆ ಯುವತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಹದೀಸ್ ನಜಾಫಿ ಎಂಬವಳೇ ಕೊಲೆಯಾದ ಯುವತಿ. ಇಸ್ಲಾಂನಲ್ಲಿ ತಲೆಗೂದಲು ಹೊರಗಡೆ ತೋರಿಸುವಂತಿಲ್ಲ. ಆದರೆ ಮಹಿಳೆಯರು ಬಹಿರಂಗವಾಗಿ ತಲೆ ಕೂದಲು ಕತ್ತರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಸೆ.16ರಂದು ಹಿಜಾಬ್‌ ಸರಿಯಾಗಿ ಧರಿಸಿಲ್ಲ ಎಂಬ ಕಾರಣಕ್ಕೆ ಇರಾನಿನ ನೈತಿಕ ಪೊಲೀಸರಿಂದ ಬಂಧನಕ್ಕೊಳಗಾದ ಮಹ್ಸಾ ಎಂಬಾಕೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ ಭುಗಿಲೆದ್ದಿದ್ದು, ಮಹಿಳೆಯರು ಕೂದಲು ಕತ್ತರಿಸಿ, ಹಿಜಾಬ್‌ ಸುಟ್ಟು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಹದೀಸ್ ನಜಾಫಿ ಧೈರ್ಯವಾಗಿ ಹಿಜಾಬ್‌ ಇಲ್ಲದೆ ತಲೆಕೂದಲು ಕಟ್ಟುತ್ತಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಳು. ಆದರೆ ಈಗ ಈಕೆಯನ್ನು ಟಾರ್ಗೆಟ್ ಮಾಡಿ ಗುಂಡಿನ ದಾಳಿ ಮಾಡಲಾಗಿದೆ. ಯುವತಿಯ ಕುತ್ತಿಗೆ, ಎದೆ ಭಾಗ ಹಾಗೂ ಕೈಗೆ ಗುಂಡು ಹೊಕ್ಕಿದೆ.
ಯುವತಿಯ ಅಂತ್ಯಕ್ರಿಯೆಯಲ್ಲಿ ಭಾರಿ ಜನಸ್ತೋಮ ಸೇರಿದೆ. ಯುವತಿ ಪರ ಘೋಷಣೆ ಕೂಗಲಾಗಿದೆ. ಇಲ್ಲಿಗೆ ಹಿಜಾಬ್ ವಿರೋಧಿ ಪ್ರತಿಭಟನೆ ನಿಲ್ಲುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ಸರ್ಕಾರಕ್ಕೆ ನೀಡಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ದುಬೈನಲ್ಲಿ 1.5 ವರ್ಷಕ್ಕೆ ಬೀಳುವಷ್ಟು ಮಳೆ ಒಂದೇ ದಿನ ಸುರಿಯಿತು...! ಜನಜೀವನ ಅಸ್ತವ್ಯಸ್ತ; ರಸ್ತೆಗಳು ಜಲಾವೃತ, ವಿಮಾನಗಳ ಹಾರಾಟ ರದ್ದು

ಇರಾನ್‌ನಲ್ಲಿ ನಡೆದ ಹಿಜಾಬ್‌ ವಿರೋಧಿ ಭಾರೀ ಪ್ರತಿಭಟನೆ ಮೇಲೆ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ. ಒಟ್ಟು 76 ಜನರು ಈವರೆಗೆ ಮೃತಪಟ್ಟಿದ್ದು, 20 ಪತ್ರಕರ್ತರನ್ನು ಬಂಧಿಸಲಾಗಿದೆ. ವ್ಯಾಪಕ ಪ್ರತಿಭಟನೆ ಹಿನ್ನೆಲೆಯಲ್ಲಿ ತೆಹರಾನ್‌ ಹಾಗೂ ಕುರ್ದಿಸ್ತಾನ್‌ನಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ. ಈ ನಡುವೆ 20 ಪತ್ರಕರ್ತರ ಮನೆ ಮೇಲೆ ಮಧ್ಯರಾತ್ರಿ ದಾಳಿ ನಡೆಸಿ ವಾರೆಂಟ್‌ ಇಲ್ಲದೇ ಅವರನ್ನು ಬಂಧಿಸಲಾಗಿದೆ. ಅವರ ಎಲೆಕ್ಟ್ರಾನಿಕ್‌ ಸಾಧನಗಳನ್ನು ವಶಪಡಿಸಲಾಗಿದೆ. ಸರ್ಕಾರವು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಬಲಪ್ರಯೋಗಕ್ಕೆ ಮುಂದಾಗಿದೆ ಎಂದು ಪತ್ರಕರ್ತರ ರಕ್ಷಣಾ ಸಮಿತಿ ಕಿಡಿಕಾರಿದೆ.
ಮಾನವ ಹಕ್ಕುಗಳು ಮತ್ತು ಗೌರವನ್ನು ಬಯಸಿ ಇರಾನಿನ ಮಹಿಳೆಯರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ ಆದರೆ ಇದಕ್ಕೆ ಇರಾನ್‌ ಸರ್ಕಾರ ಬಂದೂಕಿನ ಗುಂಡುಗಳ ಮೂಲಕ ಉತ್ತರ ನೀಡುತ್ತಿದೆ ಎಂದು ಇರಾನ್‌ ಮಾನವ ಹಕ್ಕು ಆಯೋಗ ಆರೋಪಿಸಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement