ಪಿಎಸ್‌ಐ ನೇಮಕಾತಿ ಹಗರಣ: ಅಮೃತ್‌ ಪೌಲ್ ವಿರುದ್ಧ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ 1,406 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ ಸಿಐಡಿ ಪೊಲೀಸರು

ಬೆಂಗಳೂರು: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಅಮೃತ್‌ ಪೌಲ್‌ ವಿರುದ್ಧ ಸಿಐಡಿ ಪೊಲೀಸರು ಸುಮಾರು 1,406 ಪುಟಗಳ ಪ್ರತ್ಯೇಕ ಆರೋಪ ಪಟ್ಟಿಯನ್ನು ಬೆಂಗಳೂರಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಬುಧವಾರ ಸಲ್ಲಿಸಿದ್ದಾರೆ.
ತನಿಖಾಧಿಕಾರಿ ಡಿವೈಎಸ್‌ಪಿ ಬಿ. ಕೆ. ಶೇಖರ ನೇತೃತ್ವದ ತಂಡವು ಒಂದನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಾಧೀಶರಾದ ಆನಂದ್‌ ಟಿ. ಚವ್ಹಾಣ ನೇತೃತ್ವದ ಪೀಠಕ್ಕೆ ಆರೋಪ ಪಟ್ಟಿಯ ಜೊತೆಗೆ ಕೆಲವು ದಾಖಲೆಗಳನ್ನು ಸಲ್ಲಿಸಿತು.
ಕಳೆದ ಜುಲೈನ ಕೊನೆಯ ವಾರದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಪುಟಗಳ ಮೊದಲ ಆರೋಪ ಪಟ್ಟಿಯನ್ನು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಲ್ಲಿ, ಪ್ರಕರಣದ 35ನೇ ಆರೋಪಿಯಾಗಿರುವ ಅಮೃತ್‌ ಪೌಲ್‌ ಅವರ ಪಾತ್ರದ ಬಗ್ಗೆ ಪ್ರಸ್ತಾಪಿಸಿರಲಿಲ್ಲ.

ಸಿಐಡಿ ಉಪ ಪೊಲೀಸ್‌ ವರಿಷ್ಠಾಧಿಕಾರಿ ಪಿ ನರಸಿಂಹ ಮೂರ್ತಿ ಅವರ ದೂರಿನ ಮೇರೆಗೆ ಐಪಿಸಿ ಸೆಕ್ಷನ್‌ 120B (ಕ್ರಿಮಿನಲ್‌ ಪಿತೂರಿ), 420 (ವಂಚನೆ), 465 (ನಕಲು), 468 (ವಂಚನೆಗೆ ವಿದ್ಯುನ್ಮಾನ ಸಾಧನ ಬಳಕೆ), 471 (ನಕಲಿ ದಾಖಲೆಯನ್ನು ನೈಜ ಎಂದು ಬಿಂಬಿಸುವುದು) ಜೊತೆಗೆ 34ರ (ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿ) ಅಡಿ ಆರೋಪಿಗಳ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

545 ಪಿಎಸ್‌ಐ ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆಗೆ 54,287 ಅಭ್ಯರ್ಥಿಗಳು ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯು ಹಲವು ಮಂದಿಯನ್ನು ಬಂಧಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಚೌಕ್‌ ಮತ್ತು ಸ್ಟೇಷನ್‌ ಬಜಾರ್‌ ಠಾಣೆ, ಬೆಂಗಳೂರಿನ ಹೈಗ್ರೌಂಡ್ಸ್‌ ಸೇರಿದಂತೆ ಹಲವು ಕಡೆ ಆರೋಪಿಗಳ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲಾಗಿದೆ.
ಜುಲೈ 4ರಂದು ಅಮೃತ್‌ ಪೌಲ್‌ ಬಂಧನವಾಗಿದ್ದು, ಈಗ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಮತ್ತು ಸತ್ರ ನ್ಯಾಯಾಲಯಗಳು ಪೌಲ್‌ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement