ದಿಗ್ವಿಜಯ ಸಿಂಗ್ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಹೆಸರು ಚಾಲ್ತಿಗೆ, ಇಂದು ಮಧ್ಯಾಹ್ನ 12 ಗಂಟೆ ನಂತರ ನಾಮಪತ್ರ ಸಲ್ಲಿಸುವ ಸಾಧ್ಯತೆ

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ನಿಚ್ಚಳವಾಗಿದೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಶುಕ್ರವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಿರುವುದರಿಂದ ದಿಗ್ವಿಜಯ ಸಿಂಗ್ ನಾಮಪತ್ರ ಸಲ್ಲಿಸದಿರಬಹುದು ಎಂದು ಮೂಲಗಳು ತಿಳಿಸಿವೆ. ಮಲ್ಲಿಕಾರ್ಜುನ ಖರ್ಗೆ ಇಂದು, ಶುಕ್ರವಾರ ಮಧ್ಯಾಹ್ನ 12 ಗಂಟೆಯ ನಂತರ ಯಾವುದೇ ಸಮಯದಲ್ಲಿ ನಾಮಪತ್ರ ಸಲ್ಲಿಸಬಹುದು ಎಂದು ಹೇಳಲಾಗುತ್ತಿದೆ.
82 ಶಾಸಕರ ರಾಜೀನಾಮೆಯೊಂದಿಗೆ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಭುಗಿಲೆದ್ದ ನಂತರ ಪಕ್ಷದ ವೀಕ್ಷಕರಾಗಿ ಖರ್ಗೆ ಅವರನ್ನು ನೇಮಿಸಲಾಯಿತು. ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಗೆದ್ದರೆ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗುವುದನ್ನು ಅವರು ವಿರೋಧಿಸಿದರು. ಆದಾಗ್ಯೂ, ತನ್ನ ತವರು ರಾಜ್ಯದಲ್ಲಿನ ಘಟನೆಗಳ ನಂತರ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಅಸೋಕ ಗೆಹ್ಲೋಟ್‌ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಇನ್ನು ಮುಂದೆ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ ನಂತರ ವಿಷಯಗಳು ಗುರುವಾರ ತಿರುವು ಪಡೆದುಕೊಂಡವು. ಭಾನುವಾರದಂದು ಗೆಹ್ಲೋಟ್‌ “ನಿಷ್ಠಾವಂತರ” ಅಸಾಮಾನ್ಯ ಪ್ರತಿರೋಧಕ್ಕಾಗಿ ಗುರುವಾರ ನಡೆದ ಸೋನಿಯಾ ಗಾಂಧಿಯವರ ಜೊತೆಗಿನ 90 ನಿಮಿಷಗಳ ಸಭೆಯಲ್ಲಿ ಅವರು ಈ ಬಿಕ್ಕಟ್ಟಿನ ಬಗ್ಗೆ ಕ್ಷಮೆಯಾಚಿಸಿದರು. ನಂತರ ತಾವು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದರು. ನಂತರ ಖರ್ಗೆ ಹೆಸರು ಚಾಲ್ತಿಗೆ ಬಂದಿದೆ. ಮೂಲಗಳ ಪ್ರಕಾರ, ಗಾಂಧಿ ಕುಟುಂಬದ ಆಪ್ತರಾಗಿರುವ ಕೆಸಿ ವೇಣುಗೋಪಾಲ, ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಿದ್ಧತೆ ನಡೆಸುವಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೈಕಮಾಂಡ್ ನಿರ್ಧಾರದ ಬಗ್ಗೆ ಗುರುವಾರ ರಾತ್ರಿ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಲಿರುವ ಮೂರನೇ ಅಭ್ಯರ್ಥಿಯಾಗಲಿದ್ದಾರೆ. ಈಗಾಗಲೇ ಶಶಿ ತರೂರ್ ಮತ್ತು ದಿಗ್ವಿಜಯ ಸಿಂಗ್ ಅವರು ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ, ಕೇಂದ್ರ ಸಚಿವರಾಗಿ ಕರ್ತವ್ಯ ನಿರ್ವಹಿಸಿರುವ ಖರ್ಗೆ ಅವರು ಗಾಂಧಿ ಕುಟುಂಬದ ನಿಷ್ಠರಾಗಿರುವುದರಿಂದ ಅವರ ಕಡೆಗೆ ನಾಯಕತ್ವದ ಒಲವು ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಎಂಟು ಬಾರಿ ಶಾಸಕರು, ಎರಡು ಬಾರಿ ಲೋಕಸಭಾ ಸಂಸದ ಮತ್ತು ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಖರ್ಗೆ ಅವರ ಅನುಭವ ಪಕ್ಷಕ್ಕೆ ನೆರವಾಗಲಿದೆ ಎಂದು ನಾಯಕತ್ವ ನಿರೀಕ್ಷಿಸಿದೆ.
ಮೂಲಗಳ ಪ್ರಕಾರ, ಖರ್ಗೆ ಅವರಿಗೆ ಗಾಂಧಿಯವರ ಬೆಂಬಲವಿದ್ದು, ಇಂದು ನಾಮಪತ್ರ ಸಲ್ಲಿಸುವ ಮೂಲಕ ಚುನಾವಣೆಗೆ ಇಳಿಯಲಿದ್ದಾರೆ ಎಂದು ವರದಿಯಾಗಿದೆ.ಏತನ್ಮಧ್ಯೆ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರೇಸ್‌ನಿಂದ ಹೊರಗುಳಿದ ನಂತರ ದಿಗ್ವಿಜಯ ಸಿಂಗ್ ಕೂಡ ಇಂದು ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.
ಮುಕುಲ್ ವಾಸ್ನಿಕ್, ಮೀರಾ ಕುಮಾರ್ ಅವರ ಹೆಸರುಗಳನ್ನೂ ಹೈಕಮಾಂಡ್ ಪರಿಗಣಿಸಿದೆ. ಹಿರಿಯ ನಾಯಕ ಅಜಯ್ ಮಾಕೆನ್ ಅವರ ಹೆಸರೂ ಚಾಲ್ತಿಯಲ್ಲಿದೆ. ಆದರೆ ಸೋನಿಯಾ ಗಾಂಧಿ ಅವರ ಅಂತಿಮ ಆಯ್ಕೆ ಯಾರಾಗಲಿದ್ದಾರೆ ಎನ್ನುವುದು ಶೀಘ್ರದಲ್ಲಿಯೇ ಬಹಿರಂಗವಾಗಲಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ನಾಮಪತ್ರ ಸಲ್ಲಿಕೆಗೆ ಇಂದು ಸೆಪ್ಟೆಂಬರ್ 30 ಕೊನೆಯ ದಿನ. ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಎರಡು ದಿನಗಳ ನಂತರ ಫಲಿತಾಂಶ ಪ್ರಕಟವಾಗಲಿದೆ.
ಒಂದು ವೇಳೆ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರೆ ಅವರು, ‘ಒಬ್ಬ ವ್ಯಕ್ತಿಗೆ ಒಂದು ಹುದ್ದೆ’ ನೀತಿಯಂತೆ ರಾಜ್ಯಸಭೆಯಲ್ಲಿನ ವಿಪಕ್ಷ ನಾಯಕನ ಹುದ್ದೆ ತ್ಯಜಿಸಬೇಕಾಗುತ್ತದೆ. ರಾಜ್ಯದ ಅಧಿಕಾರವನ್ನು ಬಿಟ್ಟುಬರಲು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಿಂದೇಟು ಹಾಕಿದ ಬಳಿಕ ಉದ್ಭವಿಸಿದ ರಾಜಕೀಯ ಬಿಕ್ಕಟ್ಟು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿತ್ತು. ರಾಜಸ್ಥಾನದ ಸಮಸ್ಯೆ ಕುರಿತಂತೆ ಕಾಂಗ್ರೆಸ್ ನಾಯಕತ್ವ ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನಲಾಗಿದೆ.
ಪಕ್ಷದ ಸಂಘಟನೆಯಲ್ಲಿ ಬದಲಾವಣೆಗೆ ಒತ್ತಾಯಿಸಿ 2020ರಲ್ಲಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಜಿ-23 ಗುಂಪಿನ ಭಿನ್ನಮತೀಯ ನಾಯಕರು ಸಭೆ ನಡೆಸಿದ್ದಾರೆ. ಪೃಥ್ವಿರಾಜ್ ಚವಾಣ್, ಮನೀಶ್ ತಿವಾರಿ, ಭೂಪಿಂದರ್ ಹೂಡಾ ಮುಂತಾದವರು ಆನಂದ್ ಶರ್ಮಾ ಅವರ ನಿವಾಸದಲ್ಲಿ ಚರ್ಚಿಸಿದ್ದರು. ಈಗಾಗಲೇ ಈ ಗುಂಪಿನ ಶಶಿ ತರೂರ್ ಕಣಕ್ಕಿಳಿಯುತ್ತಿದ್ದಾರೆ.

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement