ಪ್ರಜಾಪ್ರಭುತ್ವದ ಸಂಸ್ಥೆಗಳು ವಿಪಕ್ಷಗಳಿಗೆ ಬಂದ್, ಪಾದಯಾತ್ರೆ ಬಿಟ್ಟು ಬೇರೆ ಮಾರ್ಗವೇ ಇರಲಿಲ್ಲ: ಗುಂಡ್ಲುಪೇಟೆ ಸಮಾವೇಶದಲ್ಲಿ ರಾಹುಲ್‌ ಗಾಂಧಿ

ಚಾಮರಾಜನಗರ: ಪ್ರಜಾಪ್ರಭುತ್ವದ ಹಲವು ಸಂಸ್ಥೆಗಳನ್ನು ವಿಪಕ್ಷಗಳಿಗೆ ಬಂದ್ ಮಾಡಲಾಗಿದೆ. ಎಲ್ಲವೂ ಸರ್ಕಾರ ಹಿಡಿತದಲ್ಲಿಟ್ಟುಕೊಂಡು ತನಗೆ ಬೇಕಾದಂತೆ ಕುಣಿಸುತ್ತಿದೆ. ಸಂಸತ್ತಿನಲ್ಲಿ ನಮಗೆ ಮಾತನಾಡಲು ಬಿಡುತ್ತಿಲ್ಲ ಹೀಗಾಗಿ ಯಾತ್ರೆಯೊಂದೇ ಮಾರ್ಗವಾಗಿದೆ. ಅದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ರಾಹುಲ್‌ ಗಾಂಧಿ ಹೇಳಿದರು.
ಇಂದು, ಶುಕ್ರವಾರ ತಮಿಳುನಾಡು ಮೂಲಕ ಕರ್ನಾಟಕವನ್ನು ಪ್ರವೇಶಿಸಿದ ನಂತರ ಗುಂಡ್ಲುಪೇಟೆಯಲ್ಲಿ ನಡೆದ ಕಾಂಗ್ರೆಸ್‌ನ ಭಾರತ ಜೋಡೋ ಪಾದಯಾತ್ರೆ ಸ್ವಾಗತ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣದಲ್ಲಿವೆ. ನಮ್ಮ ವಿಚಾರಗಳನ್ನು ಹೇಳುವುದಕ್ಕೆ ಅಲ್ಲಿ ಅವಕಾಶ ಇಲ್ಲ. ಸಂಸತ್ತಿನಲ್ಲಿ ನಾವು ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತದೆ. ವಿಧಾನಸಭೆಗಳಲ್ಲೂ ಮಾತನಾಡಲು ಅವಕಾಶ ನೀಡುತ್ತಿಲ್ಲ. ಹಾಗಾಗಿ ಪಾದಯಾತ್ರೆ ಬಿಟ್ಟು ಬೇರೆ ಮಾರ್ಗ ನಮಗಿಲ್ಲ ಎಂದು ಹೇಳಿದರು.
ದೇಶದಲ್ಲಿ ‌ಬಿಜೆಪಿ‌ ಹಾಗೂ ಆರ್‌ಎಸ್‌ಎಸ್ ದ್ವೇಷ ಹರಡುತ್ತಿದ್ದು, ಅದರ ವಿರುದ್ಧ ಹಾಗೂ ಭಾರತದ ‌ಸಂವಿಧಾನದ ರಕ್ಷಣೆಗಾಗಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ ಎಂದರು.

ಭಾರತ್ ಜೋಡೋ ಯಾತ್ರೆಯನ್ನು‌ ಯಾವ ಶಕ್ತಿಯಿಂದಲು ತಡೆಯಲು ಸಾಧ್ಯವಿಲ್ಲ‌ ಎಂದ ಅವರು, ಸಂವಿಧಾನ ಇಲ್ಲ‌ ಅಂದರೆ ರಾಷ್ಟ್ರ ಧ್ವಜಕ್ಕೆ ಬೆಲೆ ಇಲ್ಲ. ಮಳೆ, ಬಿಸಿಲು ಇದ್ದರೂ ನಿರಂತರ ಪಾದಯಾತ್ರೆ ನಡೆಯುತ್ತಿದ್ದೇವೆ. ಲಕ್ಷಾಂತರ ಜನರು ಭಾಗಿಯಾಗುತ್ತಿದ್ದಾರೆ ಎಂದರು.
ಈ‌ ಯಾತ್ರೆಯಲ್ಲಿ ಎಲ್ಲ ಧರ್ಮ, ಭಾಷೆಯವರು ಭಾಗಿಯಾಗಿದ್ದಾರೆ. ಪಾದಯಾತ್ರೆಯಲ್ಲಿ ಜಾತಿ, ಧರ್ಮ ಪ್ರಶ್ನೆ ಮಾಡದೆ ಭಾಗಿಯಾಗುತ್ತಿದ್ದಾರೆ. ಇದೇ ನಮ್ಮ ಶಾಂತಿಯ, ಸೌಹಾರ್ದತೆಯ ಸುಂದರ ಭಾರತ ಎಂದರು.ದಾರಿಯುದ್ದಕ್ಕೂ ಜನರು ಭೇಟಿ ಮಾಡಿ ನಿರುದ್ಯೋಗ, ಬೆಲೆ ಏರಿಕೆ, ರೈತರ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸುತ್ತಿದ್ದಾರೆ. ಜನರ ಮಾತು ಕೇಳುವುದೇ ಈ ಯಾತ್ರೆಯ ಉದ್ದೇಶ ಎಂದರು.

ಪ್ರಮುಖ ಸುದ್ದಿ :-   ಏಪ್ರಿಲ್‌ 18, 19ರಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಪಾದಯಾತ್ರೆಯ ಉದ್ಘಾಟನೆಯನ್ನು ರಾಹುಲ್ ಗಾಂಧಿ ‌ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ. ಅವರ ಕೈಯನ್ನು ಹಿಡಿದುಕೊಂಡು ಜೊತೆಗೂಡಿಸಿ ಡೋಲು ಬಾರಿಸುವ ಮೂಲಕ ಉದ್ಘಾಟನೆ ಮಾಡಿದರು
ಇದಕ್ಕೂ ಮೊದಲು ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ (Bharat Jodo Yatra) ಶುಕ್ರವಾರ ಮುಂಜಾನೆ ಕರ್ನಾಟಕ ಪ್ರವೇಶಿಸಿತು. ಹುಲಿ ಸಂರಕ್ಷಿತ ಅರಣ್ಯದಲ್ಲಿ ಪಾದಯಾತ್ರೆಗೆ ಅರಣ್ಯ ಇಲಾಖೆ ಅನುಮತಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ತಮಿಳುನಾಡಿನ ಗುಡಲೂರಿನಿಂದ ಕರ್ನಾಟಕದ ಗುಂಡ್ಲುಪೇಟೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಹನದಲ್ಲಿ ಆಗಮಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರನ್ನು ಕೆಕ್ಕೆನಹಳ್ಳಿಯ ಕರ್ನಾಟಕ ಗಡಿಯಲ್ಲೇ ಸ್ವಾಗತಿಸಿದರು. ಈ ವೇಳೆ ಮಹದೇವಪ್ಪ, ಜಾರ್ಜ್, ಪ್ರಕಾಶ್ ರಾಥೋಡ್ ಮೊದಲಾದವರಿದ್ದರು. ಗುಂಡ್ಲುಪೇಟೆಯಲ್ಲಿ ಸ್ವಾಗತ ಸಮಾವೇಶಕ್ಕೆ ರಾಹುಲ್ ಗಾಂಧಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವೇದಿಕೆಯ ಬಳಿ ಸ್ವಾಗತಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement