ವಚನ ಸಾಹಿತ್ಯದ ಶಿಖರ ಶರಣ ಸಾಹಿತಿ ಡಾ.ಸಂಗಮೇಶ ಹಂಡಗಿ | ಭಾನುವಾರ ಸಂಗಮ ಸಿರಿ ಪ್ರಶಸ್ತಿ ಪ್ರದಾನ, ಆಧುನಿಕ ವಚನಗಳು ಸಂಪುಟ- ೧೦ ಬಿಡುಗಡೆ

(ಡಾ. ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನ (ರಿ), ಹುಬ್ಬಳ್ಳಿ ವತಿಯಿಂದ ಇಂದು (೦೨-೧೦-೨೦೨೨) ಸಾಯಂಕಾಲ ೫.೩೦ಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಸಂಗಮ ಸಿರಿ ಪ್ರಶಸ್ತಿ ಪ್ರಧಾನ ಹಾಗೂ ಸಂಗಮೇಶ ಹಂಡಗಿ ಸಂಪಾದಿತ ಆಧುನಿಕ ವಚನಗಳು ಸಂಪುಟ ೧೦ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ)
೮೪ ವರ್ಷ ಬಾಳಿದ ಡಾ.ಸಂಗಮೇಶ ಹಂಡಗಿ (ಜನನ: ೦೬.೦೫.೧೯೩೮ ನಿಧನ: ೧೬-೦೯-೨೦೨೧) ಅವರಿಗೆ ತಂದೆ ಮಲ್ಲೇಶಪ್ಪ ಮತ್ತು ತಾಯಿ ನೀಲಗಂಗಮ್ಮ ಅವರ ಆಚಾರ, ವಿಚಾರ, ಸಂಸ್ಕಾರಯುತ ಬದುಕು ಪರಿಣಾಮ ಬೀರಿದೆಯೆಂದೇ ಹೇಳಬೇಕಾಗುತ್ತದೆ. ಪ್ರಾಥಮಿಕ ಶಿಕ್ಷಣವನ್ನು ವಿಜಯಪುರ ಜಿಲ್ಲೆಯ ತಳೇನಾಡ ತೆಲಗಿ, ಗೊಳಸಂಗಿ ಗ್ರಾಮಗಳಲ್ಲಿ ಪಡೆದ ಅವರು ಮಾಧ್ಯಮಿಕ ಶಿಕ್ಷಣವನ್ನು ವಿಜಯಪುರದ ಸಿದ್ಧೇಶ್ವರ ಹೈಸ್ಕೂಲಿನಲ್ಲಿ, ಕಾಲೇಜು ಶಿಕ್ಷಣವನ್ನು ಸೊಲ್ಲಾಪುರ, ಗದಗ, ಹುಬ್ಬಳ್ಳಿ–ಧಾರವಾಡದಲ್ಲಿ ಮುಗಿಸಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಬರೆಯುವ ಮತ್ತು ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಹಂಡಗಿಯವರು ಕಂದಾಯ ಇಲಾಖೆಯಲ್ಲಿ ಪ್ರಥಮ ದರ್ಜೆಯ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಶಿಕ್ಷಕರಾಗಿ ನೇಮಕಗೊಂಡು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ೧೯೭೦ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಕನ್ನಡ ಸ್ನಾತಕೋತ್ತರ ಪದವಿ ಪಡೆದು, ೧೯೭೧ ರಲ್ಲಿ ನವಲಗುಂದದ ಶಂಕರ ಮಹಾವಿದ್ಯಾಲದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ೨೫ ವರ್ಷಗಳ ಅಖಂಡ ಸೇವೆ ಸಲ್ಲಿಸಿದ್ದಾರೆ. ೧೯೯೦ ರಲ್ಲಿ ಶ್ರೀ ಜ.ಚ.ನಿ.ವಚನ ಸಾಹಿತ್ಯ ಒಂದು ಅಧ್ಯಯನ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ. ವಿಮರ್ಶಾತ್ಮಕ ಪ್ರಬಂಧ, ವಚನ, ಕಾವ್ಯ, ಚರಿತ್ರೆ, ಸಂಶೋಧನೆ, ಸಂಪಾದನೆ ಮುಂತಾದ ವಿವಿಧ ಸಾಹಿತ್ಯ ಪ್ರಕಾರದ ೪೬ ಕೃತಿಗಳು ಪ್ರಕಟವಾಗಿದೆ. ಅಲ್ಲದೆ, ೫೦೦ ಕ್ಕೂ ಹೆಚ್ಚಿನ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಮಾಮಿಡಿ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿ ಪತ್ರಿಕಾ ರಂಗದಲ್ಲಿಯೂ ಕೃಷಿ ಮಾಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಶ್ರೇಯಸ್ಸಿಗೆ ಪಾತ್ರರಾಗಿ ಅವರು ಚಿಕ್ಕಮಗಳೂರಿನಲ್ಲಿ ನಡೆದ ಹಳಕಟ್ಟಿ ವಚನೋತ್ಸವದ ಸರ್ವಾಧ್ಯಕ್ಷರೂ ಆಗಿದ್ದರು. ೬೦೦ಕ್ಕೂ ಹೆಚ್ಚಿನ ವಚನಗಳನ್ನು ಸಂಗಮೇಶ ನಿಡುಮಾಮಿಡಿ ಚನ್ನಬಸವೇಶ್ವರ ಎಂಬ ವಚನಾಂಕಿತದಲ್ಲಿ ರಚಿಸಿದ್ದಾರೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

 

ಡಾ. ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನ (ರಿ), ಹುಬ್ಬಳ್ಳಿ ವತಿಯಿಂದ ಅಕ್ಟೋಬರ್‌ ೦೨ರಂದು, ಭಾನುವಾರ ಸಾಯಂಕಾಲ ೫:೩೦ಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಸಂಗಮ ಸಿರಿ ಪ್ರಶಸ್ತಿ ಪ್ರದಾನ ಹಾಗೂ ಸಂಗಮೇಶ ಹಂಡಗಿ ಸಂಪಾದಿತ ಆಧುನಿಕ ವಚನಗಳು ಸಂಪುಟ -೧೦ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ.
ಸಾನಿಧ್ಯವನ್ನು ಜಗದ್ಗುರು ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ. ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆ ಉಪಆಯುಕ್ತ ಮತ್ತು ಡಾ.ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಜಿ.ಬಿ. ಗೌಡಪ್ಪಗೋಳ ಅಧ್ಯಕ್ಷತೆ ವಹಿಸಲಿದ್ದಾರೆ. ಬೀದರದ ಸಾಹಿತಿಗಳು, ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿ ಹಂಸಕವಿ ಪುಸ್ತಕ ಪರಿಚಯ ಮಾಡಲಿದ್ದಾರೆ. ಡಾ. ವೀರಣ್ಣ ದಂಡೆ ಮತ್ತು ಡಾ. ಜಯಶ್ರೀ ದಂಡೆ ಅವರಿಗೆ ಸಂಗಮ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅತಿಥಿಗಳಾಗಿ ಸಾಹಿತಿಗಳಾದ ಮಹಾಂತಪ್ಪ ನಂದೂರ ಅಗಮಿಗಲಿದ್ದು, ಪತ್ರಕರ್ತರಾದ (ಸಂಜೆ ದರ್ಪಣ ಸಂಪಾದಕರು) ಗೌರವ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಲಿದೆ.

ಆಕಾಶವಾಣಿಯಲ್ಲಿ ಹಲವಾರು ಉಪನ್ಯಾಸಗಳು, ಚಿಂತನಗಳು ಮೂಡಿಬಂದಿವೆ. ಸಾಹಿತ್ಯಕ, ಧಾರ್ಮಿಕ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು, ಮಠಗಳು ವಚನ ಶ್ರೀ, ವಚನಸಿರಿ, ಶೋಧಭೋದಸಿಂಧು, ಹಳಕಟ್ಟಿ ಶ್ರೀ, ಸಾಹಿತ್ಯ ಭೂಷಣ, ಪಂಪ ಶ್ರೀ, ಸಮಾಜರತ್ನ, ಶಿರಡಿ ಸಾಯಿಬಾಬ ಸೇವಾ ಪ್ರಶಸ್ತಿ ಮೊದಲಾದ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.
ಶಾಲಾ ಕಾಲೇಜುಗಳ ಪಠ್ಯಗಳಲ್ಲಿ ವಚನಗಳ ಅಧ್ಯಯನ ಸ್ವಲ್ಪ ಮಟ್ಟಿಗೆ ನಡೆದಿದ್ದು, ಅದು ವ್ಯಾಪಕವಾಗಬೇಕು. ಶರಣರ ಜೀವನ , ಸಾಧನೆ , ಸಿದ್ಧಾಂತಗಳು ಪಠ್ಯ ಪುಸ್ತಕಗಳಲ್ಲಿ ಅವಶ್ಯಕವಾಗಿರಬೇಕು. ವಚನಗಳು ಬೇರೆ ಬೇರೆ ಭಾಷೆಗಳಲ್ಲಿ ಅನುವಾದಗೊಳ್ಳಬೇಕು. ವಚನಗಳು ಜನಸಾಮಾನ್ಯರಿಗೆ ತಲುಪಬೇಕು ಎಂದು ಹಂಡಗಿ ಅವರು ಹೇಳುತ್ತಿದ್ದರು. ಪುಸ್ತಕಗಳು ಭಾವನೆಯ ಮಹಾಪೂರದ ಆಣೆಕಟ್ಟುಗಳು, ಎದೆಯ ಹೊಲ ಹಸಿರಾಗಿಸುವ ಕಾಲುವೆಗಳು ಎನ್ನುತ್ತಿದ್ದ ಡಾ. ಹಂಡಗಿ ಅವರು ಬರಹ ಮತ್ತು ಭಾಷಣಗಳ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಶ್ರೀಮಂತ ಗೊಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ನವಲಗುಂದ ತಾಲೂಕಿನ ಶರಣ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಹಲವಾರು ಸಂಘ – ಸಂಸ್ಥೆಗಳ ಕ್ರೀಯಾಶೀಲ ಸದಸ್ಯರಾಗಿ, ಕಾರ‍್ಯದರ್ಶಿಯಾಗಿಯೂ ಕಾರ‍್ಯ ನಿರ್ವಹಿಸಿದ್ದರು. ಶರಣರ ಕಾಯಕತತ್ವ, ದಾಸೋಹ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಡಾ.ಹಂಡಗಿಯವರು ಅಪಾರವಾದ ಶಿಷ್ಯರನ್ನು, ಅಭಿಮಾನಿಗಳನ್ನು ಹೊಂದಿದ್ದಾರೆ.
೦೭-೦೫-೨೦೧೯ ರಲ್ಲಿ ಡಾ. ಸಂಗಮೇಶ ಹಂಡಗಿ ಅವರಿಗೆ ಡಾ. ಪಿ.ಜಿ. ಕೆಂಪಣ್ಣವರ, ಡಾ. ಗವಿಸಿದ್ಧಪ್ಪ ಪಾಟೀಲ, ಹಂಸಕವಿ, ವಿರೇಶ ಹಂಡಗಿ ಅವರ ಸಂಪಾದಕತ್ವದಲ್ಲಿ ೫೫೪ ಬೃಹತ್ ಪುಟಗಳ ಸಂಗಮ ಸಂಪದ ಅಭಿನಂದನಾ ಗ್ರಂಥವನ್ನು ಅರ್ಪಿಸಲಾಗಿತ್ತು.
ಪತ್ನಿ ಶಿವಲೀಲಾ ವಚನಗಳನ್ನು ರಚಿಸಿದ್ದಾರೆ. ಅವರ ದೇಹವನ್ನು ಅವರ ಪರಿವಾರದವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಮತ್ತು ಹಾಗೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ಮಕ್ಕಳಾದ ವೀರೇಶ, ಡಾ.ಸಿದ್ಧಲಿಂಗ, ಆಶಾ ಬಸವರಾಜ ಕರ್ಕಿ, ಮೊಮ್ಮಗಳು ಶ್ವೇತಾ ಕರ್ಕಿ ಅವರು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.
ಡಾ.ಸಂಗಮೇಶ ಹಂಡಗಿ ದಂಪತಿ ಶಿಕ್ಷಕರಿಗೆ ಮತ್ತು ಸಮಾಜಕ್ಕೆ ಮಾದರಿಯಾಗಿದ್ದರು. ಅವರು ಇಂದು ಉಭಯತರು ಇಂದು ಇಲ್ಲವಾಗಿದ್ದರು ತಮ್ಮ ಕೃತಿಗಳ, ವಚನಗಳ ಮತ್ತು ಕಾರ್ಯಗಳ ಮೂಲಕ ಸದಾ ಸ್ಮರಣಿಯರಾಗಿದ್ದಾರೆ.
-ಡಾ. ಬಿ.ಎಸ್.ಮಾಳವಾಡ ನಿವೃತ್ತ ಗ್ರಂಥಪಾಲಕರು

 

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement