ದೆಹಲಿಯ ಇಂಡಿಯಾ ಗೇಟ್‌ ಮೇಲೆ ರಾತ್ರಿಯ ಬಾನಂಗಳದಲ್ಲಿ ಡ್ರೋಣ್‌ಗಳ ಮೂಲಕ ಮಹಾತ್ಮಾ ಗಾಂಧೀಜಿ ಅನಾವರಣ | ವೀಕ್ಷಿಸಿ

ನವದೆಹಲಿ: ದೇಶವು ಮಹಾತ್ಮ ಗಾಂಧಿಯವರ 153ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಂತೆ ಭಾನುವಾರ ದೆಹಲಿಯ ಐಕಾನಿಕ್ ಇಂಡಿಯಾ ಗೇಟ್ ಮೇಲೆ ಡ್ರೋನ್‌ಗಳ ಸಮೂಹದ ಬೆಳಕಿನ ಮೂಲಕ ರಾತ್ರಿಯ ಬಾನಂಗಳದಲ್ಲಿ ಮಹಾತ್ಮ ಗಾಂಧೀಜಿ ಅನಾವರಣಗೊಂಡರು.
ಸುಮಾರು ಎರಡು ನಿಮಿಷಗಳ ಸುದೀರ್ಘ ವೀಡಿಯೊದಲ್ಲಿ, ಡ್ರೋನ್‌ಗಳು ಮೂರು ವಿಭಿನ್ನ ರಚನೆಗಳನ್ನು ಮಾಡುವುದನ್ನು ಕಾಣಬಹುದು. ಮಹಾತ್ಮಾ ಗಾಂಧಿಯವರ ಚಿತ್ರ, ರೈಲು ಮತ್ತು ‘ಚರಕʼವನ್ನು ರಚನೆ ಮಾಡಿದವು. ವಿಶೇಷ ಡ್ರೋಣ್‌ ಶೋ ಮೂಲಕ ಮಹಾತ್ಮಾ ಗಾಂಧೀಜಿಯವರ ಜೀವನ ಚಿತ್ರವನ್ನು ಡ್ರೋಣ್‌ಗಳು ಬಾನಂಗಳದಲ್ಲಿ ಕಟ್ಟಿಕೊಟ್ಟವು. ಸುಮಾರು 7 ನಿಮಿಷಕ್ಕೂ ಹೆಚ್ಚು ಕಾಲ ನಡೆದ ಡ್ರೋಣ್‌ ಶೋ ನೋಡುಗರ ಕಣ್ಮನ ಸೆಳೆಯಿತು. ಈ ವಿಶೇಷ ಡ್ರೋಣ್‌ ಪ್ರದರ್ಶನವನ್ನು ಕೇಂದ್ರ ಸಂಸ್ಕೃತಿ ಇಲಾಖೆ ಆಯೋಜಿಸಿತ್ತು

ಇದಕ್ಕೂ ಮುನ್ನ ಭಾನುವಾರ, ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮಾ ಗಾಂಧಿ ಅವರಿಗೆ ನಮನ ಸಲ್ಲಿಸಿದರು ಮತ್ತು ಅವರಿಗೆ ಗೌರವವಾಗಿ ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ಖರೀದಿಸಲು ಜನರನ್ನು ಒತ್ತಾಯಿಸಿದರು. ರಾಜ್ ಘಾಟ್ ಮತ್ತು ವಿಜಯ್ ಘಾಟ್ ಸ್ಮಾರಕಗಳಿಗೂ ಪ್ರಧಾನಿ ಭೇಟಿ ನೀಡಿ ನಮನ ಸಲ್ಲಿಸಿದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ಈ ಮಧ್ಯೆ, ‘ಭಾರತ ಜೋಡೋ ಯಾತ್ರೆ’ ನಡುವೆ ಕರ್ನಾಟಕಕ್ಕೆ ಬಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ರಾಷ್ಟ್ರಪಿತ’ರನ್ನು ಸ್ಮರಿಸಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ರಾಜಕೀಯ ಪಕ್ಷಗಳ ನಾಯಕರಲ್ಲದೆ, ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರೀಡಾ ವ್ಯಕ್ತಿಗಳು ತಮ್ಮ ಸಂದೇಶಗಳನ್ನು ಟ್ವೀಟ್ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯವು ಗಾಂಧಿಯವರ ಜನ್ಮದಿನವನ್ನು ‘ಅಂತಾರಾಷ್ಟ್ರೀಯ ಅಹಿಂಸಾ ದಿನ’ ಎಂದು ಗುರುತಿಸಿದೆ. ಈ ಸಂದರ್ಭವನ್ನು ಗುರುತಿಸಲು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಯಿತು. ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರಸ್, “ಗಾಂಧಿಯವರ ಜೀವನ ಮತ್ತು ಉದಾಹರಣೆಯು ಹೆಚ್ಚು ಶಾಂತಿಯುತ ಮತ್ತು ಸಹಿಷ್ಣು ಜಗತ್ತಿಗೆ ಕಾಲಾತೀತ ಮಾರ್ಗವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement