ಹೈದರಾಬಾದ್: ಮುಸ್ಲಿಮರು ಕಾಂಡೋಮ್ಗಳನ್ನು ಹೆಚ್ಚು ಬಳಸುತ್ತಾರೆ, ಜನಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಆಲ್ ಇಂಡಿಯಾ ಮಜಿಲಿಸ್-ಇ-ಇತ್ಹೇದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಭಾನುವಾರ ಹೇಳಿದ್ದಾರೆ.
ಜನಸಂಖ್ಯೆ ಅಸಮತೋಲನದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಹೈದರಾಬಾದ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಮರು ಇಬ್ಬರು ಮಕ್ಕಳ ನಡುವೆ ಅಂತರ ಕಾಯ್ದುಕೊಳ್ಳುವ ಮೂಲಕ ಉತ್ತಮ ಕುಟುಂಬ ಯೋಜನೆ ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ಭಾಗವತ್ ಅವರು ಜನಸಂಖ್ಯೆ ಹೆಚ್ಚಳದ ಬಗ್ಗೆ ಚರ್ಚಿಸುವ ಮುನ್ನ ಅಂಕಿ ಅಂಶಗಳನ್ನು ಮುಂದಿಡಬೇಕು ಎಂದು ಹೇಳಿದರು.
ಮುಸ್ಲಿಮರ ಜನಸಂಖ್ಯೆ ಹೆಚ್ಚಳವಾಗುತ್ತಿಲ್ಲ. ಈ ಬಗ್ಗೆ ಯಾವುದೇ ಆತಂಕ ಬೇಡ. ಮುಸ್ಲಿಮರ ಜನಸಂಖ್ಯೆ ಇಳಿಮುಖವಾಗುತ್ತಿದೆ. ಇಬ್ಬರು ಮಕ್ಕಳ ನಡುವೆ ಹೆಚ್ಚು ಅಂತರ ಕಾಯ್ದುಕೊಳ್ಳುವವರು ಯಾರು ಗೊತ್ತಾ? ಮುಸ್ಲಿಮರೇ ಹೆಚ್ಚು ಅಂತರ ಕಾಯ್ದುಕೊಳ್ಳುತ್ತಾರೆ. ಕಾಂಡೋಮ್ಗಳನ್ನು ಯಾರು ಹೆಚ್ಚು ಬಳಸುತ್ತಾರೆ ? ಮುಸ್ಲಿಮರೇ ಹೆಚ್ಚು ಬಳಸುತ್ತಾರೆ ಎಂದು ಹೇಳಿದರು.
ನಾಗ್ಪುರದಲ್ಲಿ ದಸರಾ ವೇಳೆ ಹೇಳಿಕೆ ನೀಡಿದ್ದ ಭಾಗವತ್, ದೇಶದಲ್ಲಿ ಸಮುದಾಯ ಆಧಾರಿತ ಜನಸಂಖ್ಯಾ ಅಸಮತೋಲನವನ್ನು ಕಡೆಗಣಿಸುವಂತಿಲ್ಲ. ಜನಸಂಖ್ಯೆಯ ಅಸಮತೋಲನವು ಭೌಗೋಳಿಕ ಗಡಿಗಳ ಬದಲಾವಣೆಗೆ ಕಾರಣವಾಗುತ್ತದೆ. ದೇಶದಲ್ಲಿ ಎಲ್ಲ ಧಾರ್ಮಿಕ ಸಮುದಾಯಗಳಿಗೆ ಅನ್ವಯವಾಗುವಂತೆ ಜನಸಂಖ್ಯಾ ನೀತಿಯನ್ನು ಜಾರಿಗೆ ತರಬೇಕು ಎಂದು ಪ್ರತಿಪಾದಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ