ನಾಳೆ ಹುಬ್ಬಳ್ಳಿ-ಧಾರವಾಡಕ್ಕೆ ಸಚಿವ ವೈಷ್ಣವ್‌ : ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಮೂರನೇ ಎಂಟ್ರೆನ್ಸ್‌, ಹುಬ್ಬಳ್ಳಿ-ದೆಹಲಿ ರೈಲು ಉದ್ಘಾಟನೆ, ಸವಾಯಿ ಗಂಧರ್ವ ಅಂಚೆಚೀಟಿ ಬಿಡುಗಡೆ

ಹುಬ್ಬಳ್ಳಿ : ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಅವಳಿ ನಗರದ ವಿವಿಧ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಂಗಳವಾರ, ಅಕ್ಟೋಬರ್‌ 11ರಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಆಗಮಿಸುತ್ತಿದ್ದಾರೆ.
ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ನಡೆಯುವ ಸವಾಯಿ ಗಂಧರ್ವರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ. ನಂತರ ಮಧ್ಯಹ್ನ 12:30ಕ್ಕೆ 20 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಧಾರವಾಡ ರೈಲ್ವೆ ನಿಲ್ದಾಣವನ್ನು ಲೋಕಾ ರ್ಪಣೆ ಮಾಡಲಿದ್ದಾರೆ.
ನಂತರ ಮಧ್ಯಾಹ್ನ 3 ಗಂಟೆಗೆ ಸಚಿವ ಅಶ್ವಿನಿ ವೈಷ್ಣವ್ ಅವರು ಸುಮಾರು 115 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಮೂರನೇ ಪ್ರವೇಶದ್ವಾರ ಲೋಕಾರ್ಪಣೆಗೊಳಿಸಲಿದ್ದಾರೆ. ನಂತರ ಆರಂಭವಾಗಲಿರುವ ಹುಬ್ಬಳ್ಳಿ-ನಿಜಾಮುದ್ದಿನ್ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ಹಿಂದೆ ಇದ್ದ ಈ ಲಿಂಕ್ ರೈಲನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಪ್ರಲ್ಹಾದ ಜೋಶಿ ಅವರು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಮತ್ತೆ ಆರಂಭಿಸಲಾಗುತ್ತಿದೆ.
ಈ ಕಾರ್ಯಕ್ರಮಗಳಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸಚಿವರಾದ ಹಾಲಪ್ಪ ಆಚಾರ್‌, ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಧಾರವಾಡ ರೈಲ್ವೆ ನಿಲ್ದಾಣಕ್ಕೆ ಹೈಟೆಕ್‌ ಸ್ಪರ್ಷ…
20 ಕೋಟಿ ರೂ. ವೆಚ್ಚದಲ್ಲಿಧಾರವಾಡ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದ್ದು, ಆಧುನಿಕ ವಾಸ್ತುಶಿಲ್ಪ ಸಂಯೋಜನೆಯಿಂದ ನಿರ್ಮಿಸಲಾಗಿದೆ. 1936ರಲ್ಲಿ ಅಂದಿನ ಮದ್ರಾಸ್ ದಕ್ಷಿಣ ಮರಾಠಾ ರೈಲ್ವೆ ವತಿಯಿಂದ ನಿಲ್ದಾಣ ನಿರ್ಮಿಸಲಾಗಿತ್ತು. ಧಾರವಾಡದ ಮುಕುಟ ಪ್ರಾಯದಂತಿದ್ದ ಕೆಂಪು ಕಟ್ಟಡ ಹೊಸ ರೂಪ ಪಡೆದಿದೆ.
ಈ ರೈಲ್ವೆ ನಿಲ್ದಾಣಕ್ಕೆ 2018ರಲ್ಲಿ 19.5 ಕೋಟಿ ರೂ. ಅನುದಾನದಲ್ಲಿ ನವೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಹಳೇಕಟ್ಟಡದಲ್ಲಿ ಎರಡು ಸಣ್ಣ ಬುಕ್ಕಿಂಗ್ ಕಚೇರಿ ಹೊಂದಿತ್ತು. ಎಲ್ಲ ಕೋಣೆಗಳೂ ಚಿಕ್ಕದಾಗಿದ್ದವು. ಜಿಲ್ಲಾ ಕೇಂದ್ರವಾದರೂ ಸೌಲಭ್ಯಗಳಿರಲಿಲ್ಲ. ವಿಐಪಿ ಕೊಠಡಿ ಸಹ ಚಿಕ್ಕದಾಗಿತ್ತು. ಈಗ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ.
ಇದನ್ನು ಭಾರತೀಯ ರೈಲ್ವೇ ವಿನೂತನ ಕಲ್ಪನೆ ಅಡಿ `ಬಯೋಫಿಲಿಕ್ ವಾಸ್ತುಶಿಲ್ಪ’ ಆಧರಿಸಿ ನಿರ್ಮಿಸಲಾಗಿದೆ. ಉದ್ಯಾನ,  ಪ್ರವೇಶದ್ವಾರ, ಜ್ಞಾನಪೀಠ ಪುರಸ್ಕೃತ ರಾಜ್ಯದ ಸಾಹಿತಿಗಳ ಫೋಟೋಗಳು ಮತ್ತು ಪರಿಚಯ, ಟಿಕೆಟ್ ಬುಕ್ಕಿಂಗ್ ಕೌಂಟರ್  ಇದೆ.
ನವೀಕೃತ ನಿಲ್ದಾಣದಲ್ಲಿ ಪಾರ್ಸೆಲ್ ಸೇವೆ, ವಿಚಾರಣೆ, ಟಿಕೆಟ್ ಬುಕ್ಕಿಂಗ್ ಕಚೇರಿ, ಪುರುಷ ಮಹಿಳೆಯರಿಗೆ ಪ್ರತ್ಯೇಕ ಎಸಿ ಮತ್ತು ಎಸಿ ರಹಿತ ವಸತಿ ವ್ಯವಸ್ಥೆ (ಡಾರ್ಮೆಟರಿ) ಆಹಾರ ಮಳಿಗೆ, ಕಾಫಿ ಶಾಪ್, ಪ್ರವಾಸಿಗರ ಮಾಹಿತಿ ಕೇಂದ್ರಗಳಿವೆ. ಪ್ಲಾಟ್ ಫಾರ್ಮ್ ಸಂಪರ್ಕಿಸಲು ಫುಟ್ ಓವರ್ ಬ್ರಿಡ್ಜ್, ಹೊರಾಂಗಣದಲ್ಲಿ ಕಾರು ಆಟೋ, ಬೈಕ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇದೆ
ರವೀಂದ್ರನಾಥ್ ಟ್ಯಾಗೂರ್ ವಾಟಿಕಾ
ಕವಿ ರವೀಂದ್ರನಾಥ್ ಟಾಗೋರ್  ಧಾರವಾಡ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಕೆಲಕಾಲ ತಂಗಿದ್ದರು. ಅವರು ಕುಳಿತಿದ್ದ ಜಾಗಕ್ಕೆ ಗುರುದೇವ ಕಾರ್ನರ್ ಎಂದು ಹೆಸರಿಡಲಾಗಿತ್ತು. ಈಗ ನೈರುತ್ಯ ರೈಲ್ವೆ ಇಲಾಖೆಯು ಪ್ಲಾಟ್ ಫಾರ್ಮ್ 1ರಲ್ಲಿನ ಈ ಜಾಗವನ್ನು `ರವೀಂದ್ರ ನಾಥ್ ಟಾಗೋರ್ ವಾಟಿಕಾ’ ಎಂದು ನಾಮಕರಣ ಮಾಡಿದ್ದು, ಅವರ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ.

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಮೂರನೇ ಪ್ರವೇಶ ದ್ವಾರ :
ವಿಶ್ವದ ಅತ್ಯಂತ ಉದ್ದನೆಯ ಪ್ಲಾಟ್‌ಫಾರ್ಮ್‌ ಹೊಂದಿರುವ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ರೈಲು ನಿಲ್ದಾಣಕ್ಕೆ ಮೂರನೇ ಪ್ರವೇಶ ದ್ವಾರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮಂಟೂರು ರಸ್ತೆಯಲ್ಲಿ ನಿರ್ಮಾಣವಾಗಿರುವ ಈ ದ್ವಾರ ಸೇರಿದಂತೆ ಈಗ, ನಿಲ್ದಾಣಕ್ಕೆ ಮೂರು ದಿಕ್ಕಿನಿಂದಲೂ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ಹಾಗೂ ಯಶವಂತಪುರ ರೈಲು ನಿಲ್ದಾಣ ಹೊರತುಪಡಿಸಿದರೆ 3 ಪ್ರವೇಶದ್ವಾರ ಇರುವುದು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಮಾತ್ರ.
ಸುಮಾರು 115 ಕೋಟಿ ವೆಚ್ಚದಲ್ಲಿ ಈ ಪ್ರವೇಶದ್ವಾರ ನಿರ್ಮಿಸಲಾಗಿದೆ. ಇದರೊಂದಿಗೆ ಹುಬ್ಬಳ್ಳಿ ರೈಲ್ವೆ ಯಾರ್ಡ್‌ನಲ್ಲಿ ಸಿಗ್ನಲ್, ಎಲೆಕ್ಟ್ರಾನಿಕ್ ಇಂಟರ್ ಲಾಕ್, ವಿಶ್ವದ ಅತಿ ಉದ್ದನೆಯ ಪ್ಲಾಟ್‌ಫಾರ್ಮ್‌ ನಿರ್ಮಿಸಲಾಗಿದೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಈಗ 8 ಪ್ಲಾಟ್‌ಫಾರ್ಮ್‌ಗಳಿವೆ. 1505 ಮೀಟರುಗಳ ವಿಶ್ವದ ಅತಿ ಉದ್ದನೆಯ ಪ್ಲಾಟ್‌ಫಾರಂನಲ್ಲಿ ರೈಲು ಹತ್ತಲು ಪ್ರಯಾಣಿಕರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ 3ನೇ ಪ್ರವೇಶದ್ವಾರ ನಿರ್ಮಿಸಲಾಗಿದ್ದು, ಮಂಟೂರು ರಸ್ತೆ ಕಡೆಯಿಂದ ಬರುವ ಪ್ರಯಾಣಿಕರು ಈ ಪ್ರವೇಶದ್ವಾರ ಬಳಸಬಹುದು.

ಮೂರನೇ ಪ್ರವೇಶ ದ್ವಾರದಿಂದ ಮೂರು ಪ್ಲಾಟ್‌ಫಾರ್ಮ್‌ಗಳಿಗೆ ಸಂಪರ್ಕ..
ನಿಲ್ದಾಣಕ್ಕೆ ಈಗಾಗಲೇ ಸ್ಟೇಷನ್ ರಸ್ತೆ ಕಡೆಯಿಂದ ಮುಖ್ಯ ದ್ವಾರ ಮತ್ತು ಗದಗ ರಸ್ತೆ ಕಡೆಯಿಂದ ಮತ್ತೊಂದು ಪ್ರವೇಶದ್ವಾರವಿದೆ. ಎರಡೂ ಕಡೆ ಕಾಯ್ದಿರಿಸದ ಟಿಕೆಟ್ ಕೌಂಟರ್ ವ್ಯವಸ್ಥೆ ಇದೆ. ನೂತನ ದ್ವಾರದಲ್ಲಿಯೂ ಟಿಕೆಟ್ ಬುಕ್ಕಿಂಗ್ ಕೌಂಟರ್, ಪಾರ್ಕಿಂಗ್ ವ್ಯವಸ್ಥೆ, ಆರ್.ಪಿ.ಎಫ್. ಸಿಬ್ಬಂದಿ ಕಚೇರಿ, ವೇಟಿಂಗ್ ರೂಮ್, ಫುಡ್‌ಕೋರ್ಟ್, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಹಲವಾರು ಸೌಲಭ್ಯಗಳಿವೆ. 7 ಮತ್ತು 8 ನೇ ಪ್ಲಾಟ್‌ಫಾರ್ಮ್‌ ಸಂಪರ್ಕಿಸಲು ಸಬ್‌ವೇ ನಿರ್ಮಿಸಲಾಗಿದೆ. ಮೂರು ಕೌಂಟರುಗಳನ್ನು ತೆರೆಯಲಾಗಿದೆ.
ನೂತನ ಪ್ರವೇಶ ದ್ವಾರವು ನಿಲ್ದಾಣದ 6, 7 ಹಾಗೂ 8ನೇ ಪ್ಲಾಟ್‌ಫಾರ್ಮ್‌ಗಳಿಗೆ ಸಂಪರ್ಕ ಕಲ್ಪಿಸಲಿದೆ. ದ್ವಾರದ ಎದುರಿಗೆ ಇರುವ ವಿಶಾಲವಾದ ಜಾಗದಲ್ಲಿ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ದ್ವಾರದ ಎದುರಿಗೆ ವಾಹನಗಳಲ್ಲಿ ಬಂದು ಇಳಿಯಲು ಹಾಗೂ ಆಟೊ ನಿಲುಗಡೆಗೂ ವ್ಯವಸ್ಥೆ ಇದೆ. ಪ್ರವೇಶ ದ್ವಾರ, ಸುರಂಗ ಮಾರ್ಗದ ಗೋಡೆಗಳಲ್ಲಿ ಬಣ್ಣಬಣ್ಣದ ಚಿತ್ರಗಳನ್ನು ಬಿಡಿಸುವ ಮೂಲಕ ಇಡೀ ಆವರಣದ ಅಂದ ಹೆಚ್ಚಿಸಲಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement