ಮೈಸೂರು: ಮಹಾರಾಣಿ ಕಾಲೇಜಿನ ಕಟ್ಟಡದ ಒಂದು ಭಾಗ ಕುಸಿತ; ಸ್ವಲ್ಪದರಲ್ಲೇ ತಪ್ಪಿದ ಅನಾಹುತ | ವೀಕ್ಷಿಸಿ

ಮೈಸೂರು:ಮೈಸೂರು: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೈಸೂರಿನ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ರಸ್ತೆಯಲ್ಲಿರುವ ಶತಮಾನದಷ್ಟು ಹಳೆಯದಾದ ಮಹಾರಾಣಿ ವಿಜ್ಞಾನ ಕಾಲೇಜಿನ ಒಂದು ಭಾಗವು ಶುಕ್ರವಾರ(ಅಕ್ಟೋಬರ್ 21) ಬೆಳಿಗ್ಗೆ ಕುಸಿದಿದೆ.
ಕಟ್ಟದ ಭಾಗ ಕುಸಿದ ಪರಿಣಾಮ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ ಮತ್ತು ಸಸ್ಯಶಾಸ್ತ್ರ ವಿಭಾಗಗಳ ಮೂರು ಪ್ರಯೋಗಾಲಯಗಳು ಅವಶೇಷಗಳಾದವು. ಮಹಾರಾಣಿ ಕಲಾ ಕಾಲೇಜಿನ ಛಾವಣಿ ಹಾಗೂ ಮೊದಲ ಮಹಡಿಯ ಗೋಡೆ ಕುಸಿತವಾಗಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾಲೇಜು ಒಳಗಿದ್ದ ಎಲ್ಲರೂ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದು, ಭಾರಿ ಅನಾಹುತ ತಪ್ಪಿದೆ.ಯಾವುದೇ ಪ್ರಾಣಹಾನಿ ಅಥವಾ ಗಾಯವಾಗಿಲ್ಲವಾದರೂ, ಘಟನೆಯು ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದೆ. ಛಾವಣಿ ಬಿದ್ದ ರಭಸಕ್ಕೆ ಲ್ಯಾಬ್‌ನಲ್ಲಿದ್ದ ಪೀಠೋಪಕರಣಗಳಿಗೆ ಹಾನಿಯಾಗಿದೆ. ಉಳಿದ ತರಗತಿಗಳಲ್ಲಿದ್ದ ಅಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಗಾಬರಿಯಿಂದ ತರಗತಿ ಬಿಟ್ಟು ಓಡಿ ಹೊರಬಂದಿದ್ದಾರೆ. ಕಟ್ಟಡದ ಉಳಿದ ರಚನಾತ್ಮಕ ಸ್ಥಿರತೆಯ ಬಗ್ಗೆ ಕಳವಳದ ನಡುವೆ ಕಾಲೇಜು ಅಧಿಕಾರಿಗಳು ಎರಡು ದಿನಗಳ ಕಾಲ ತರಗತಿಗಳನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 10:30ರ ಸುಮಾರಿಗೆ ಕಟ್ಟಡ ಕುಸಿದಿದೆ. ವಿದ್ಯಾರ್ಥಿಗಳು 10.30ರ ವೇಳೆಗೆ ಬರುವರಿದ್ದರು. ಈ ವೇಳೆ ಬಿರುಕು ಬಂದಿದ್ದನ್ನು ಗಮನಿಸಿದ ವಿಭಾಗದ ಮುಖ್ಯಸ್ಥ ಕೆ.ಕೆ.ಪದ್ಮನಾಭ 10.15ರ ವೇಳೆ ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ. ಕೂಡಲೇ ಕೊಠಡಿಗೆ ಬಂದ ಪ್ರಾಂಶುಪಾಲ ಡಾ.ಡಿ.ರವಿ ಅವರು ಕೊಠಡಿಗೆ ಬೀಗ ಹಾಕಿಸಿದ್ದಲ್ಲದೆ, ಎಲೆಕ್ಟ್ರಿಕ್ ಸಂಪರ್ಕವನ್ನು ಕಡಿತಗೊಳಿಸಿ ಕಟ್ಟಡದ ಒಳಗೆ ಯಾರೂ ಪ್ರವೇಶಿಸದಂತೆ ಸೂಚನೆ ನೀಡಿದ್ದಾರೆ. ಕುಸಿಯುವ 5 ನಿಮಿಷ ಮೊದಲು ಪ್ರಾಂಶುಪಾಲ ರವಿ ಅವರು ಕಟ್ಟಡವನ್ನು ವೀಕ್ಷಿಸಿದ್ದರು. ಹಾಗೂ ಸೋರುತ್ತಿದ್ದುದರಿಂದ ಲ್ಯಾಬ್ ಕಟ್ಟಡದ ಎಲೆಕ್ಟ್ರಿಕ್ ಸಂಪರ್ಕ ಕಡಿತ ಮಾಡಿಸಲಾಗಿತ್ತು. ಲ್ಯಾಬ್‌ಗೆ ಯಾರೂ ಬಾರದಂತೆ ಬೀಗ ಹಾಕಿಸಲಾಗಿತ್ತು. ಅದಾದ 5 ನಿಮಿಷದಲ್ಲೇ ಕಟ್ಟಡ ಕುಸಿದು ಬಿದ್ದಿದೆ. ಮೂರು ಕೊಠಡಿ ಒಳಗೊಂಡಂತೆ  ನೆಲಸಮ ಆಗಿದೆ.

ಕಾಲೇಜಿನ ಕಟ್ಟಡ ಜೀರ್ಣೋದ್ಧಾರ ನಡೆಯಬೇಕಿತ್ತು. ಅದಕ್ಕಾಗಿ 2 ಕೋಟಿ ಹಣ ಕೂಡ ಬಿಡುಗಡೆ ಆಗಿತ್ತು. ಅಕ್ಟೋಬರ್ 22 ರಂದು ಭೂಮಿಪೂಜೆ ಸಮಾರಂಭವನ್ನು ಆಯೋಜಿಸಲಾಗಿತ್ತು.ಆದರೆ ಅಷ್ಟರಲ್ಲೇ ಹಳೆಯ ಕಟ್ಟದ ಭಾಗ ಕುಸಿದಿದೆ.
ಘಟನಾ ಸ್ಥಳಕ್ಕೆ ಶಾಸಕ ಎಲ್.ನಾಗೇಂದ್ರ ಹಾಗೂ ಕೆಲ ಅಧಿಕಾರಿಗಳು ಭೇಟಿ ನೀಡಿದ್ದರು.
ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ 200 ಬೋಧಕ ಸಿಬ್ಬಂದಿ ಮತ್ತು 50 ಬೋಧಕೇತರ ಸಿಬ್ಬಂದಿಯನ್ನು ಹೊರತುಪಡಿಸಿ 3,850 ವಿದ್ಯಾರ್ಥಿಗಳು ಇದ್ದಾರೆ. ಮೈಸೂರಿನ ಹಳೇ ಪಾರಂಪರಿಕ ಕಟ್ಟಡಗಳಲ್ಲಿ ಮಹಾರಾಣಿ ಕಾಲೇಜು ಕೂಡ ಒಂದಾಗಿದೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement