ದೇಶವು ಜಾತ್ಯತೀತ, ದ್ವೇಷ ಭಾಷಣವನ್ನು ಕ್ರಿಮಿನಲ್ ಪ್ರಕರಣಗಳಾಗಿ ಪರಿಗಣಿಸಿ: 3 ರಾಜ್ಯಗಳಿಗೆ ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ: ದೇಶವು ಜಾತ್ಯತೀತವಾಗಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ದ್ವೇಷದ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೂರು ರಾಜ್ಯಗಳಿಗೆ ಶುಕ್ರವಾರ ಸೂಚಿಸಿದೆ.
ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ದ್ವೇಷದ ಭಾಷಣಗಳಿಗೆ ಕಡಿವಾಣ ಹಾಕುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ ಮತ್ತು ಸಂವಿಧಾನವು ಜಾತ್ಯತೀತತೆಯನ್ನು ಹೆಚ್ಚು ಗೌರವಿಸುತ್ತದೆ ಎಂದು ಅದು ಹೇಳಿದೆ. ಅಪರಾಧ ಮಾಡುವವರ ಧರ್ಮವನ್ನು ಪರಿಗಣಿಸದೆ ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತವಾಗಿ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ.
ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಸುತ್ತಿರುವ ಹಾಗೂ ಅವರಲ್ಲಿ ಭಯಭೀತ ವಾತಾವರಣ ಉಂಟುಮಾಡುತ್ತಿರುವುದಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಶಾಹೀನ್‌ ಅಬ್ದುಲ್ಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್‌ ಮತ್ತು ಹೃಷಿಕೇಶ್‌ ರಾಯ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಆರೋಪಿಗಳ ಧರ್ಮವನ್ನು ಪರಿಗಣಿಸದೇ ಕ್ರಮ ಕೈಗೊಳ್ಳುವುದಕ್ಕೆ ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಈ ಮೂಲಕ ದೇಶದ ಜಾತ್ಯತೀಯ ಗುಣವನ್ನು ರಕ್ಷಿಸಬೇಕು ಎಂದು ಪೀಠವು ಆದೇಶದಲ್ಲಿ ಹೇಳಿದೆ. ಔಪಚಾರಿಕ ದೂರಿಗೆ ಕಾಯದೆ ದ್ವೇಷ ಭಾಷಣದ ಅಪರಾಧಿಗಳ ವಿರುದ್ಧ ತ್ವರಿತವಾಗಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವಂತೆ ನ್ಯಾಯಾಲಯವು ಮೂರು ರಾಜ್ಯಗಳಿಗೆ ಸೂಚಿಸಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಆಡಳಿತದ ಕಡೆಯಿಂದ ಯಾವುದೇ ವಿಳಂಬವು “ಅತ್ಯಂತ ಗಂಭೀರ ವಿಷಯ” ಮತ್ತು ಇದು ನ್ಯಾಯಾಲಯದ ನಿಂದನೆಯನ್ನು ಆಹ್ವಾನಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
ಸಂವಿಧಾನವು ಜಾತ್ಯತೀತ ರಾಷ್ಟ್ರ ಮತ್ತು ನಾಗರಿಕರಲ್ಲಿ ಭ್ರಾತೃತ್ವವನ್ನು ಕಲ್ಪಿಸುತ್ತದೆ, ವ್ಯಕ್ತಿಯ ಘನತೆಯನ್ನು ಖಾತರಿಪಡಿಸುತ್ತದೆ. ರಾಷ್ಟ್ರದ ಏಕತೆ ಮತ್ತು ಸಮಗ್ರತೆಯು ಪೀಠಿಕೆಯಲ್ಲಿ ಪ್ರತಿಪಾದಿಸಲಾದ ಮಾರ್ಗದರ್ಶಿ ತತ್ವಗಳಲ್ಲಿ ಒಂದಾಗಿದೆ ಎಂದು ಕೋರ್ಟ್‌ ಹೇಳಿದೆ. ರಾಷ್ಟ್ರದ ಜಾತ್ಯತೀತ ರಚನೆಯನ್ನು ಕಾಪಾಡಲು ಯಾವುದೇ ಧರ್ಮವನ್ನು ಲೆಕ್ಕಿಸದೆ ದ್ವೇಷದ ಭಾಷಣಗಳನ್ನು ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ಭವಿಷ್ಯದಲ್ಲಿ ದ್ವೇಷ ಭಾಷಣ ಮಾಡುವವರು ಅಥವಾ ಹೇಳಿಕೆ ನೀಡುವವರ ವಿರುದ್ಧ ಪೊಲೀಸರು ದೂರು ದಾಖಲಾಗುವ ವರೆಗೆ ಕಾಯದೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು. ಅರ್ಜಿದಾರರು ಉಲ್ಲೇಖಿಸಿರುವ ದ್ವೇಷ ಭಾಷಣಗಳ ಕುರಿತು ಕ್ರಮಕೈಗೊಂಡಿದ್ದರ ಕುರಿತು ಮೂರು ರಾಜ್ಯಗಳ ಪೊಲೀಸ್‌ ಪಡೆಗಳು ಕೈಗೊಂಡಿರುವ ಕ್ರಮದ ಕುರಿತು ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಕೋರ್ಟ್‌ ನಿರ್ದೇಶಿಸಿದೆ.

ನಾವು ಎಲ್ಲಿಗೆ ತಲುಪಿದ್ದೇವೆ? ಧರ್ಮವನ್ನು ಯಾವ ಮಟ್ಟಕ್ಕೆ ನಾವು ಇಳಿಸಿದ್ದೇವೆ? ಇದು ನಿಜಕ್ಕೂ ದುರಂತ. ಇಷ್ಟೆಲ್ಲದರ ನಂತರವೂ ನಾವು ವೈಜ್ಞಾನಿಕ ಮನೋಭಾವದ ಬಗ್ಗೆ ಮಾತನಾಡುತ್ತೇವೆ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಜೋಸೆಫ್‌ ಹೇಳಿದರು. ನ್ಯಾಯಮೂರ್ತಿ ರಾಯ್‌ ಅವರು “ಧರ್ಮ ತಟಸ್ಥ ಇರುವ ದೇಶವೊಂದರಲ್ಲಿ ಇಂತಹ ಹೇಳಿಕೆಗಳು ಹೇಳಿಕೆಗಳು ತೀವ್ರ ಆಘಾತಕಾರಿ ಎಂದರು.
ಮುಸ್ಲಿಮರು ಮತ್ತು ಇತರೆ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿ ಆಡಳಿತಾರೂಢ ಪಕ್ಷದ ಸದಸ್ಯರು ದ್ವೇಷಾಪರಾಧ, ದೈಹಿಕ ಹಲ್ಲೆಯಂತಹ ಚಟುವಟಿಕೆಗಳಲ್ಲಿ ತೊಡಗಿದ್ದಾರೆ, ಅಲ್ಲದೆ ಕೋಮು ದ್ವೇಷದ ಪ್ರಚೋದನೆಯ ಭಾಷಣ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ದೇಶಾದ್ಯಂತ ದ್ವೇಷದ ಅಪರಾಧಗಳು ಮತ್ತು ದ್ವೇಷ ಭಾಷಣಗಳ ಘಟನೆಗಳ ಬಗ್ಗೆ ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಪ್ರಾರಂಭಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನವನ್ನು ಕೋರಿ ಶಾಹೀನ್‌ ಅಬ್ದುಲ್ಲಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement