ಬೆಂಗಳೂರು: ಪುಲ್ವಾಮಾ ಭಯೋತ್ಪಾದಕ ದಾಳಿ ಸಂಭ್ರಮಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಎನ್‌ಐಎ ವಿಶೇಷ ಕೋರ್ಟ್‌

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದ 40 ಸಿಆರ್‌ಪಿಎಫ್‌ ಸಿಬ್ಬಂದಿ ಹುತಾತ್ಮರಾಗಿದ್ದಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ಸಂಭ್ರಮಿಸಿದ್ದ ಬೆಂಗಳೂರಿನ ಕಾಚರಕನಹಳ್ಳಿಯ ಎಂಜಿನಿಯರಿಂಗ್‌ ವಿದ್ಯಾರ್ಥಿ ಫೈಜ್‌ ರಶೀದ್‌ಗೆ ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯವು ಐದು ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಬೆಂಗಳೂರಿನ ಕಚರ್ಕನಹಳ್ಳಿ ಪ್ರದೇಶದ ಫೈಜ್ ರಶೀದ್ ಎಂಬಾತ, 2019 ರ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಪಡೆಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸಂಭ್ರಮಿಸಿದ್ದರು.
ಭಯೋತ್ಪಾದಕ ದಾಳಿಯನ್ನು ಸಂಭ್ರಮಿಸುವ ಮತ್ತು ಸೇನೆಯನ್ನು ಅಪಹಾಸ್ಯ ಮಾಡುವ ವಿವಿಧ ಮಾಧ್ಯಮಗಳ ಪೋಸ್ಟ್‌ಗಳಲ್ಲಿ ರಶೀದ್ 23 ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ವಿಶೇಷ ನ್ಯಾಯಾಲಯವು ದುಷ್ಕರ್ಮಿಯ ವಿರುದ್ಧ ತೀರ್ಪು ಪ್ರಕಟಿಸಿದೆ. ಭಾರತದಂಥ ಮಹಾನ್‌ ದೇಶದ ವಿರುದ್ಧ ಆರೋಪಿಯು ಹೀನ ಅಪರಾಧ ಎಸಗಿದ್ದು, ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾನೆ ಎಂದು ಹೇಳಿದೆ.

2019 ರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ್ದರು.
ಆರೋಪಿಯು ಒಂದು ಅಥವಾ ಎರಡು ಬಾರಿ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿಲ್ಲ. ಫೇಸ್‌ಬುಕ್‌ನಲ್ಲಿ ಎಲ್ಲಾ ಸುದ್ದಿ ವಾಹಿನಿಗಳು ಮಾಡಿದ ಎಲ್ಲಾ ಪೋಸ್ಟ್‌ಗಳಿಗೆ ಕಾಮೆಂಟ್‌ಗಳನ್ನು ಮಾಡಿದ್ದಾನೆ. ಮೇಲಾಗಿ, ಆತ ಅನಕ್ಷರಸ್ಥ ಅಥವಾ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಮತ್ತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಉದ್ದೇಶಪೂರ್ವಕವಾಗಿ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳನ್ನು ಮಾಡಿದ್ದಾನೆ ಎಂದು ನ್ಯಾಯಾಲಯ ಗಮನಿಸಿದೆ.
ಆರೋಪಿಯು, “ಮಹಾನ್ ಚೇತನಗಳ ಹತ್ಯೆಯ ಬಗ್ಗೆ ಸಂತೋಷಪಟ್ಟಿದ್ದಾನೆ. ಆರೋಪಿಯು ಮಾಡಿದ ಅಪರಾಧವು ಈ ಮಹಾನ್ ರಾಷ್ಟ್ರದ ವಿರುದ್ಧ ಮತ್ತು ಹೇಯ ಸ್ವರೂಪದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ. ಸಿಆರ್‌ಪಿಸಿ ಸೆಕ್ಷನ್‌ 235(2) ಅನ್ವಯ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 153ಎ (ಶಾಂತಿ ಕದಡಲು ಪ್ರಚೋದನೆ) ಮತ್ತು 201 (ಸಾಕ್ಷ್ಯ ನಾಶ) ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಸೆಕ್ಷನ್‌ 13ರ (ಕಾನೂನುಬಾಹಿರ ಚಟುವಟಿಕೆ ಪೋಷಿಸುವುದು) ಅಡಿ ಆರೋಪಿ ಫೈಜ್‌ ರಶೀದ್‌ನನ್ನು ದೋಷಿ ಎಂದು ವಿಶೇಷ ನ್ಯಾಯಾಧೀಶರಾದ ಸಿ ಎಂ ಗಂಗಾಧರ ನೇತೃತ್ವದ ಪೀಠ ಆದೇಶ ಮಾಡಿದೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಐಪಿಸಿ ಸೆಕ್ಷನ್‌ 153ಎ ಅಡಿ ಅಪರಾಧಕ್ಕಾಗಿ ಮೂರು ವರ್ಷ ಜೈಲು ಹಾಗೂ 10 ಸಾವಿರ ರೂಪಾಯಿ, ಐಪಿಸಿ 201ರ ಅಡಿ ಅಪರಾಧಕ್ಕಾಗಿ ಮೂರು ವರ್ಷ ಜೈಲು ಮತ್ತು ಐದು ಸಾವಿರ ರೂಪಾಯಿ ಹಾಗೂ ಯುಎಪಿಎ ಸೆಕ್ಷನ್‌ 13ರ ಅಡಿ ಅಪರಾಧಕ್ಕಾಗಿ ಐದು ವರ್ಷ ಜೈಲು ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಜೈಲು ಶಿಕ್ಷೆಯು ಏಕಕಾಲಕ್ಕೆ ಚಾಲ್ತಿಗೆ ಬರಲಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಆರೋಪಿಯು ಹೆಚ್ಚುವರಿಯಾಗಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement