ವೈಯಕ್ತಿಕ ಕಾನೂನಿಗಿಂತ ಪೋಕ್ಸೊ ಕಾಯಿದೆ ಪ್ರಮುಖವಾದದ್ದು ಎಂದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಮೊಹಮ್ಮದೀಯ ವೈಯಕ್ತಿಕ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳು ಮೈ ನೆರೆಯುವುದನ್ನು ವಿವಾಹಕ್ಕೆ ಪರಿಗಣಿಸಲಾಗುತ್ತದೆ. 15ನೇ ವಯಸ್ಸನ್ನು ಮೈನೆರೆಯುವ ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಬಾಲ್ಯ ವಿವಾಹ ತಡೆ ಕಾಯಿದೆ ಅಡಿ ಅದು ಅಪರಾಧವಲ್ಲ ಎಂಬ ವಾದವನ್ನು ತಿರಸ್ಕರಿಸಿರುವ ಕರ್ನಾಟಕ ಹೈಕೋರ್ಟ್‌, ವಿಶೇಷ ಕಾಯಿದೆಯಾದ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯಿದೆಯು (ಪೋಕ್ಸೊ ಕಾಯಿದೆ) ವೈಯಕ್ತಿಕ ಕಾನೂನನ್ನು ಮೀರಿದ್ದಾಗಿದೆ ಎಂದು ಅಭಿಪ್ರಾಯಪಟ್ಟಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
17 ವರ್ಷದ ಅಪ್ರಾಪ್ತೆಯನ್ನು ವಿವಾಹವಾಗಿ ಗರ್ಭಿಣಿಯಾಗಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರಿನ ಕೆ ಆರ್ ಪುರದ ಅಲೀಂ ಪಾಷಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

ಅರ್ಜಿದಾರ ಪಾಷಾ ಅವರನ್ನು ಪ್ರತಿನಿಧಿಸಿದ್ದ ವಕೀಲ ಎಂ ಬಸವಣ್ಣ ಅವರು ಮೊಹಮದೀಯ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳು ಮೈ ನೆರೆಯುವುದನ್ನು ವಿವಾಹಕ್ಕೆ ಪರಿಗಣಿಸಲಾಗುತ್ತದೆ. ಇಲ್ಲಿ 15ನೇ ವಯಸ್ಸನ್ನು ಮೈನೆರೆಯುವ ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಬಾಲ್ಯ ವಿವಾಹ ನಿರ್ಬಂಧ ಕಾಯಿದೆಯ ಸೆಕ್ಷನ್‌ 9 ಮತ್ತು 10ರ ಅಡಿ ಅದು ಅಪರಾಧವಲ್ಲ ಎಂದು ವಾದಿಸಿದ್ದರು. ಅದರೆ, ಇದನ್ನು ಮಾನ್ಯ ಮಾಡದ ಹೈಕೋರ್ಟ್‌ ಪೀಠವು ಪೋಕ್ಸೊ ಕಾಯಿದೆ ವಿಶೇಷವಾದ ಕಾನೂನಾಗಿದ್ದು ಇದು ವೈಯಕ್ತಿಕ ಕಾನೂನನ್ನು ಮೀರಿದ್ದಾಗಿದೆ. ಪೋಕ್ಸೊ ಕಾಯಿದೆ ಅಡಿ ಲೈಂಗಿಕ ಚಟುವಟಿಕೆ ನಡೆಸುವ ವಯಸ್ಸು 18 ಆಗಿರುತ್ತದೆ” ಎಂದು ಆದೇಶದಲ್ಲಿ ಹೇಳಿದೆ. ಅದರೆ ಇದೇ ವೇಳೆ ನ್ಯಾಯಾಲಯವು ಅರ್ಜಿದಾರನಿಗೆ ಜಾಮೀನು ನೀಡಲು ಯಾವುದೇ ಅಡ್ಡಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್‌ ರೇವಣ್ಣ ಪ್ರಕರಣ : ದೇವೇಗೌಡ, ಎಚ್‌ಡಿಕೆಯನ್ನು ತಪ್ಪಾಗಿ ಬಿಂಬಿಸಿ ಸುದ್ದಿ ಪ್ರಸಾರ ಮಾಡದಂತೆ 89 ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ

2022ರ ಜೂನ್‌ 16ರಂದು ಅರ್ಜಿದಾರನ ಪತ್ನಿಯಾದ ಸಂತ್ರಸ್ತೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಖಾತರಿಯಾಯಿತು. ಆಕೆಯು 2004ರ ಜುಲೈ 27ರಂದು ಜನಿಸಿದ್ದು, 17 ವರ್ಷ ಮಾತ್ರವಾಗಿದೆ. ಅಪ್ರಾಪ್ತೆಯಾಗಿದ್ದಾಗ ಮದುವೆ ಮಾಡಲಾಗಿದ್ದು, ಆಕೆ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯಾಧಿಕಾರಿ ನೀಡಿದ ಮಾಹಿತಿ ಆಧರಿಸಿ ಕೆ ಆರ್‌ ಪುರಂ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಬಾಲ್ಯ ವಿವಾಹ ತಡೆ ಕಾಯಿದೆ ಸೆಕ್ಷನ್‌ಗಳಾದ 9 ಮತ್ತು 10 ಹಾಗೂ ಪೋಕ್ಸೊ ಕಾಯಿದೆಯ ಸೆಕ್ಷನ್‌ಗಳಾದ 4 ಮತ್ತು 6ರ ಅಡಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅರ್ಜಿದಾರರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆರೋಪಿಯು ಸೆಷನ್ಸ್‌ ನ್ಯಾಯಾಲಯದಲ್ಲಿ ಜಾಮೀನು ಕೋರಿದ್ದರು. ಇದನ್ನು ತಿರಸ್ಕರಿಸಿದ್ದರಿಂದ ಹೈಕೋರ್ಟ್‌ ಮೆಟ್ಟಿಲೇರಿದ್ದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement