ಅಕ್ರಮ ಗಣಿಗಾರಿಕೆ: ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್‌ಗೆ ಇ.ಡಿ. ಸಮನ್ಸ್

ರಾಂಚಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ನವೆಂಬರ್ 3ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಅವರಿಗೆ ಸಮನ್ಸ್ ನೀಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ರಾಂಚಿಯಲ್ಲಿನ ತನ್ನ ಪ್ರಾದೇಶಿಕ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸೂಚಿಸಿದೆ.
ಇದಕ್ಕೂ ಮುನ್ನ, ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿ ಸೊರೇನ್ ಅವರ ನಿಕಟವರ್ತಿ ಪಂಕಜ್ ಮಿಶ್ರಾ ಮತ್ತು ಮತ್ತಿಬ್ಬರನ್ನು ಈ ಪ್ರಕರಣದಲ್ಲಿ ಬಂಧಿಸಿತ್ತು. ಜುಲೈನಲ್ಲಿ ರಾಜ್ಯವ್ಯಾಪಿ 18 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದ್ದ ಇ.ಡಿ, ಪಂಕಜ್ ಮಿಶ್ರಾ ಬ್ಯಾಂಕ್ ಖಾತೆಗಳಿಂದ 11.88 ಕೋಟಿ ರೂ ಮುಟ್ಟುಗೋಲು ಹಾಕಿಕೊಂಡಿತ್ತು. ಅಲ್ಲದೆ, ಮಿಶ್ರಾ ಮನೆಯಲ್ಲಿ ‘ದಾಖಲೆ ಇಲ್ಲದ’ 5.34 ಕೋಟಿ ರೂ. ಹಣ ಪತ್ತೆಯಾಗಿತ್ತು.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪಂಕಜ್ ಮಿಶ್ರಾ ಮನೆಯಿಂದ ಹೇಮಂತ್ ಸೊರೇನ್ ಅವರ ಪಾಸ್‌ಪೋರ್ಟ್ ಹಾಗೂ ಅವರ ಸಹಿಯುಳ್ಳ ಕೆಲವು ಚೆಕ್‌ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿತ್ತು. ಪಂಕಜ್ ಮಿಶ್ರಾ ಹಾಗೂ ಅವರ ಸಹಚರರಾದ ಬಚ್ಚು ಯಾದವ್ ಮತ್ತು ಪ್ರೇಮ್ ಪ್ರಕಾಶ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಸೊರೇನ್ ಅವರ ಮಾಧ್ಯಮ ಸಲಹೆಗಾರ ಅಭಿಷೇಕ್ ಪ್ರಸಾದ್ ಅವರನ್ನು ಕೂಡ ಆಗಸ್ಟ್‌ನಲ್ಲಿ ಇ.ಡಿ ವಿಚಾರಣೆಗೆ ಒಳಪಡಿಸಿತ್ತು. ಸೊರೇನ್ ಅವರು 2021ರಲ್ಲಿ ಸ್ವತಃ ತಮಗೇ ತಾವೇ ಗಣಿಗಾರಿಕೆ ಲೀಸ್ ಅನ್ನು ನವೀಕರಿಸಿಕೊಳ್ಳುವ ಮೂಲಕ ಅಧಿಕಾರದ ದುರುಪಯೋಗ ಹಾಗೂ ಲಾಭದ ಮತ್ತೊಂದು ಹುದ್ದೆ ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement