ಕನ್ನಡದ ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ (80) ಮಂಗಳವಾರ ನಿಧನರಾಗಿದ್ದಾರೆ. ಹಲವು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಇಂದು, ಮಂಗಳವಾರ (ನವೆಂಬರ್ 8) ಅವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಲೋಹಿತಾಶ್ವ ಅವರು ತುಮಕೂರಿನ ತೊಂಡಗೆರೆ ಗ್ರಾಮದವರಾಗಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.
ಚಂದನವನದಲ್ಲಿ ಲೋಹಿತಾಶ್ವ ಅವರು ಹಲವು ವರ್ಷಗಳಿಂದ ನಟನೆಯಲ್ಲಿದ್ದರು. ಡಾ. ರಾಜ್​ಕುಮಾರ್​, ಅಂಬರೀಷ್​, ವಿಷ್ಣುವರ್ಧನ್​, ಅನಂತ ನಾಗ್‌, ಶಂಕರ್​ನಾಗ್​ ಹೀಗೆ ಹಲವಾರು ನಟರ ಜೊತೆ ನಟಿಸಿ ಪೋಷಕ ಪಾತ್ರ ಹಾಗೂ ಖಳನಾಯಕನ ಪಾತ್ರದಲ್ಲಿ ಹೆಸರು ಮಾಡಿದ್ದರು. ಗಿರೀಶ್‌ ಕಾಸರವಳ್ಳಿಯವರ ಗೃಹಭಂಗ, ಜಿ.ವಿ ಅಯ್ಯರ್‌ ನಿರ್ದೇಶನದ ನಾಟ್ಯರಾಣಿ ಶಕುಂತಲಾ, ಕೆ.ಎಂ ಚೈತನ್ಯಾ ನಿರ್ದೇಶನದ ಓಂ ನಮೋ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಲೋಹಿತಾಶ್ವ ಅವರು ಮನೆ ಮಾತಾಗಿದ್ದರು. ನಟ ಶಂಕರ್‌ ನಾಗ್‌ ನಿರ್ದೇಶಿಸಿದ್ದ ಮಾಲ್ಗುಡಿ ಡೇಸ್‌ ಧಾರಾವಾಹಿಯಲ್ಲಿ ಲೋಹಿತಾಶ್ವ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು

ಕನ್ನಡದ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲೋಹಿತಾಶ್ವ ಅವರು ನಟಿಸಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಅವರಿಗೆ ನಟನೆಯಲ್ಲಿ ಆಸಕ್ತಿ. ವಿದ್ಯಾರ್ಥಿ ಆಗಿದ್ದಾಗಿನಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ಲೋಹಿತಾಶ್ವ ಅವರು ತುಮಕೂರಿನ ತೊಂಡಗೆರೆ ಗ್ರಾಮದವರು. ಅಲ್ಲಿಯೇ ಅವರು ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ತುಮಕೂರಿನಲ್ಲಿ ಹೈಸ್ಕೂಲ್​ ಓದಿದರು. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಇಂಗ್ಲಿಷ್​ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಇಂಗ್ಲಿಷ್​ ಪ್ರಾಧ್ಯಾಪಕರಾಗಿ ಕೆಲಸ ಆರಂಭಿಸಿದರು. 33 ವರ್ಷಗಳ ಕಾಲ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಲೋಹಿತಾಶ್ವ ಅವರು 1971ರಲ್ಲಿ ವತ್ಸಲಾ ಅವರನ್ನು ವಿವಾಹವಾದರು. ಅವರಿಗೆ ಮೂವರು ಮಕ್ಕಳು. ಲೋಹಿತಾಶ್ವ ಅವರ ಪುತ್ರ ಶರತ್ ಲೋಹಿತಾಶ್ವ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

ಅವರಿಗೆ ಇತ್ತೀಚೆಗೆ ಅವರಿಗೆ ಹೃದಯದ ತೊಂದರೆಯಾಗಿತ್ತು. ಹಾಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇನ್ನೇನು ಗುಣಮುಖರಾಗುತ್ತಾರೆ ಎಂದುಕೊಳ್ಳುತ್ತಿರುವಾಗಲೇ ಅವರಿಗೆ ಹೃದಯಾಘಾತ ಸಂಭವಿಸಿತು. ನಂತರ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಸುಮಾರು ಒಂದು ತಿಂಗಳ ಕಾಲ ಅವರಿಗೆ ಚಿಕಿತ್ಸೆ ನೀಡಲಾಯಿತು. ಆದರೆ ಇಂದು ಚಿಕಿತ್ಸೆ ಫಲಕಾರಿ ಆಗದೇ ಅವರು ಕೊನೆಯುಸಿರು ಎಳೆದಿದ್ದಾರೆ.
ರಾತ್ರಿ 7:30ರ ನಂತರ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಕ್ಕೆ ಅವರ ಪಾರ್ಥೀವ ಶರೀರ ತೆಗೆದುಕೊಂಡು ಹೋಗಲಾಗುತ್ತದೆ. ರಾತ್ರಿ 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಇರುತ್ತದೆ. ನಾಳೆ (ನವೆಂಬರ್ 9) ತುಮಕೂರಿನ ತೊಂಡಗೇರೆ ಗ್ರಾಮದಲ್ಲಿ ಅಂತ್ಯಕ್ರಿಯೆ ಅವರ ಅಂತ್ಯಕ್ರಿಯೆ ನೆರವೇರಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement