ಜ್ಞಾನವಾಪಿ ಮಸೀದಿ ವಿವಾದ: ಶಿವಲಿಂಗ ಪತ್ತೆಯಾದ ಸ್ಥಳದ ರಕ್ಷಣೆ ವಿಸ್ತರಿಸಿದ ಸುಪ್ರೀಂ ಕೋರ್ಟ್

ನವದೆಹಲಿ : ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗದ ಕುರಿತು ಯಥಾಸ್ಥಿತಿ ಕಾಪಾಡುವುದಾಗಿ ಹಿಂದೂ ಮತ್ತು ಮುಸ್ಲಿಂ ಅರ್ಜಿದಾರರಿಬ್ಬರೂ ಒಪ್ಪಿಕೊಂಡ ಬಳಿಕ, ಈ ನಿರ್ದಿಷ್ಟ ಸ್ಥಳವನ್ನು ರಕ್ಷಿಸುವಂತೆ ಮೇ ತಿಂಗಳಲ್ಲಿ ನೀಡಿದ್ದ ತನ್ನ ಆದೇಶವನ್ನು ಸುಪ್ರೀಂಕೋರ್ಟ್ ಶುಕ್ರವಾರ ವಿಸ್ತರಿಸಿದೆ.
ಶಿವಲಿಂಗ ಪತ್ತೆಯಾಗಿರುವ ಸ್ಥಳವನ್ನು ಕಾಪಾಡಬೇಕೆಂದು ಸುಪ್ರೀಂಕೋರ್ಟ್ ಮೇ ತಿಂಗಳಿನಲ್ಲಿ ನೀಡಿದ್ದ ಆದೇಶವು ನವೆಂಬರ್ 12ರಂದು ಅಂತ್ಯಗೊಳ್ಳಲಿದೆ ಎಂದು ಕೆಲವು ಹಿಂದೂ ಭಕ್ತರ ಪರವಾಗಿ ವಾದ ಮಂಡಿಸುತ್ತಿರುವ ವಕೀಲ ವಿಷ್ಣು ಶಂಕರ್ ಜೈನ್ ತಿಳಿಸಿದ್ದರು.
ವಾರಾಣಸಿ ಕೋರ್ಟ್ ನೀಡಿದ್ದ ಆದೇಶದಂತೆ ಸಮೀಕ್ಷೆ ನಡೆಸುವಾಗ ಜ್ಞಾನವಾಪಿ ಶೃಂಗಾರ ಗೌರಿ ಆವರಣದ ಒಳಗೆ ಶಿವಲಿಂಗ ರಚನೆ ಪತ್ತೆಯಾಗಿತ್ತು. ಇದು ಕಾರಂಜಿಯಾಗಿದ್ದು, ಶಿವಲಿಂಗ ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ಮುಸ್ಲಿಂ ಅರ್ಜಿದಾರರು ವಾದಿಸಿದ್ದಾರೆ. ಈ ಸ್ಥಳವನ್ನು ರಕ್ಷಣೆ ಮಾಡುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ ನಿರ್ದೇಶನ ನೀಡಿತ್ತು.

ದೇಗುಲದಲ್ಲಿ ಪೂಜೆ ಸಲ್ಲಿಸಲು ಹಕ್ಕು ಮಂಡಿಸುತ್ತಿರುವ ಕೆಲವು ಹಿಂದೂ ಭಕ್ತರ ಅರ್ಜಿಗಳ ಸಿಂಧುತ್ವವನ್ನು ಮಸೀದಿ ಸಮಿತಿ ಪ್ರಶ್ನಿಸಿದೆ. ಹಿಂದೂ ಮಹಿಳೆಯರು ಸಲ್ಲಿಸಿದ್ದ ಅರ್ಜಿ ಸಿಂಧುವಾಗಿದೆ ಎಂದು ವಿಚಾರಣಾ ನ್ಯಾಯಾಲಯ ಹೇಳಿದ ಬಳಿಕ, ಮಸೀದಿ ಆಡಳಿತ ಸಲ್ಲಿಸಿರುವ ಮನವಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ.
ಮಸೀದಿಯ ಹೊರಭಾಗದ ಗೋಡೆಗಳಲ್ಲಿರುವ ಹಿಂದೂ ದೇವತೆಗಳ ವಿಗ್ರಹಗಳಿಗೆ ಪ್ರತಿದಿನ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಮಹಿಳೆಯರ ಗುಂಪೊಂದು ಅರ್ಜಿ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ್ದ ಕೆಳ ನ್ಯಾಯಾಲಯ, ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆ ನಡೆಸಲು ಆದೇಶಿಸಿತ್ತು.
ಸಮೀಕ್ಷೆ ವೇಳೆ ಶಿವಲಿಂಗ ಪತ್ತೆಯಾಗಿರುವುದಾಗಿ ಹಿಂದೂ ಗುಂಪು ಪ್ರತಿಪಾದಿಸಿದೆ. ಆದರೆ ಇದು ನಮಾಜ್ ಸಲ್ಲಿಸುವುದಕ್ಕೂ ಮುನ್ನ ಭಕ್ತರು ಕೈಕಾಲುಗಳನ್ನು ತೊಳೆದುಕೊಳ್ಳಲು ನಿರ್ಮಿಸಿದ್ದ ಕಾರಂಜಿ ಎಂದು ಮುಸ್ಲಿಂ ಸಮಿತಿ ಹೇಳಿದೆ. ಈ ಪ್ರಕರಣವನ್ನು ಸಿವಿಲ್ ನ್ಯಾಯಾಧೀಶರಿಂದ ಜಿಲ್ಲಾ ನ್ಯಾಯಾಧೀಶರಿಗೆ ಮೇ 20ರಂದು ಸುಪ್ರೀಂಕೋರ್ಟ್ ವರ್ಗಾವಣೆ ಮಾಡಿತ್ತು. ಹಾಗೂ ಪ್ರಕರಣದ ಸಂಕೀರ್ಣತೆ ಮತ್ತು ಸೂಕ್ಷ್ಮತೆಯನ್ನು ಪರಿಗಣಿಸಿ, 25- 30 ವರ್ಷ ಅನುಭವ ಇರುವ ಹಿರಿಯ ನ್ಯಾಯಾಂಗ ಅಧಿಕಾರಿ ಇದರ ವಿಚಾರಣೆ ನಡೆಸುವುದು ಸೂಕ್ತ ಎಂದು ಅದು ಹೇಳಿತ್ತು.

ಪ್ರಮುಖ ಸುದ್ದಿ :-   ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement