ಕಳ್ಳತನವಾದ 4 ತಿಂಗಳ ನಂತರ ಅದೇ ಬಸ್ಸನ್ನೇರಿ ಕುಳಿತಿದ್ದ ಕಳ್ಳರ ಮುಖಚಹರೆ ಗುರುತಿಸಿ ಪೊಲೀಸರಿಗೆ ಒಪ್ಪಿಸಿದ ಬಸ್‌ ಕಂಡಕ್ಟರ್‌…!

ಬೆಂಗಳೂರು: ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸಿ ಪ್ರಯಾಣಿಕರೊಬ್ಬರ ಲಕ್ಷಾಂತರ ರೂ.ಗಳ ಮೌಲ್ಯದ ಒಡವೆ, ಹಣ ದೋಚಿ ಪರಾರಿಯಾಗಿದ್ದ ಕಳ್ಳರು ನಾಲ್ಕು ತಿಂಗಳ ಬಳಿಕ ಅದೇ ಬಸ್‌ನಲ್ಲಿ ಸಂಚರಿಸಿತ್ತಿದ್ದ ವೇಳೆ ಬಸ್ ನಿರ್ವಾಹಕರು ಅವರ ಮುಖಚಹರೆ ಗುರುತಿಸಿ ಕಳ್ಳರನ್ನು ಪೊಲೀಸರ ಅತಿಥಿಯಾಗುವಂತೆ ಮಾಡಿದ ಘಟನೆ ನಡೆದಿದೆ.
ತಾನು ನಿರ್ವಾಹಕನಾಗಿದ್ದ ಬಸ್‌ನಲ್ಲಿ ಈ ಹಿಂದೆ ಕಳ್ಳತನ ಮಾಡಿ ಮಾರ್ಗ ಮಧ್ಯೆ ಇಳಿದು ಹೋದ ಪ್ರಯಾಣಿಕರ ಮುಖ ಚಹರೆಯನ್ನು ನೆನಪಿನಲ್ಲಿಟ್ಟುಕೊಂಡು ನಾಲ್ಕು ತಿಂಗಳ ನಂತರ ಅದೇ ಪ್ರಯಾಣಿಕರು ಅದೇ ಬಸ್ಸಿಗೆ ಬಂದಾಗ ಅವರನ್ನು ಗುರುತಿಸಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ ಎಂದು ದೈಜಿ ವೈರ್ಲ್ಡ್‌. ಕಾಮ್‌ ವರದಿ ಮಾಡಿದೆ. ನಿರ್ವಾಹಕ ಅಶೋಕ್ ಜಾಧವ್‌ ಅವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ ಸಹ ಅಭಿನಂದಿಸಿದ್ದಾರೆ. ನಿಗಮದ ಚಾಲನಾ ಸಿಬ್ಬಂದಿ ಈ ರೀತಿಯ ಕಾರ್ಯತತ್ಪರತೆ ಪ್ರಯಾಣಿಕರಲ್ಲಿ ಸಂಸ್ಥೆಯ ಬಗ್ಗೆ ವಿಶ್ವಾಸಾರ್ಹತೆಯನ್ನು ಮೂಡಿಸುವಲ್ಲಿ ಸಹಕರಿಸಿದೆ ಎಂದು ಅವರು ಶ್ಲಾಘಿಸಿದ್ದಾರೆ.

ಘಟನೆ ವಿವರ…
ಜುಲೈ 10ರಂದು ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ವೋಲ್ವೋ ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿದ್ದ ಕಳ್ಳರಿಬ್ಬರು ಬಂದಿದ್ದರು. ಅವರಲ್ಲಿ ಓರ್ವ ಉಪ್ಪಿನಂಗಡಿಯ ಗಡಿಯಾರದ ಬಳಿ ಮುಂಜಾನೆ ಸುಮಾರು 5 ಗಂಟೆ ವೇರೆಗೆ ನೈಸರ್ಗಿಕ ಕರೆಗೆ ಹೋಗಬೇಕೆಂದು ಹೇಳಿದಾಗ ಚಾಲಕ ಬಸ್ ನಿಲ್ಲಿಸಿದ್ದಾರೆ. ಆ ವ್ಯಕ್ತಿ ಹೋಗಿ ಐದು ನಿಮಿಷದಲ್ಲಿ ಆತನ ಜೊತೆ ಬಂದಿದ್ದ ಇನ್ನೊಬ್ಬ ಪ್ರಯಾಣಿಕ ಸಹ ಇದೇ ಕಾರಣ ತಿಳಿಸಿ ಬಸ್‌ ಇಳಿದು ಹೋಗಿದ್ದಾನೆ. ಆದರೆ ಹತ್ತು ನಿಮಿಷ ಕಳೆದರೂ ಇಬ್ಬರು ಪ್ರಯಾಣಿಕರು ಬರಲೇ ಇಲ್ಲ. ಹೀಗಾಗಿ ಅವರ ಮೊಬೈಲ್‌ಗೆ ಕರೆ ಮಾಡಲಾಯಿತು. ಆದರೆ ಇಬ್ಬರ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿತ್ತು. ಕೂಡಲೇ ನಿರ್ವಾಹಕ ಅಶೋಕ್ ಜಾದವ್ ಘಟಕಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದರು. ಘಟಕದ ಸೂಚನೆ ಮೇರೆಗೆ ಸುಮಾರು 15 ನಿಮಿಷಗಳವರೆಗೆ ಪ್ರಯಾಣಿಕರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರು ಪ್ರಯಾಣಿಕರಿಗಾಗಿ ಹುಡುಕಾಟ ನಡೆಸಲಾಯಿತು. ಆದರೆ ಅವರು ಸಿಗದಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಹಾಗೂ ಬಸ್‌ನಲ್ಲಿರುವ ಎಲ್ಲಾ ಪ್ರಯಾಣಿಕರಿಗೆ ತಮ್ಮ ಲಗೇಜ್‌ಗಳನ್ನು ಪರಿಶೀಲಿಸುವಂತೆ ತಿಳಿಸಲಾಯಿತು. ಪ್ರಯಾಣಿಕರು ಲಗೇಜ್‌ ಗಳೆಲ್ಲ ಸರಿ ಇವೆ ಎಂದ ಬಳಿಕ ವಾಹನವನ್ನು ಘಟಕಕ್ಕೆ ತರಲಾಯಿತು.

ಪ್ರಮುಖ ಸುದ್ದಿ :-   ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 10 ಹಳದಿ ಅನಕೊಂಡ ಹಾವುಗಳು ವಶಕ್ಕೆ, ಓರ್ವನ ಬಂಧನ

ಆದರೆ ಅದೇ ದಿನ ಬೆಳಗ್ಗೆ ಮಹಿಳಾ ಪ್ರಯಾಣಿಕರೊಬ್ಬರು  ನಿರ್ವಾಹಕರಿಗೆ ಕರೆ ಮಾಡಿ ತಮ್ಮ ಬ್ಯಾಗ್‌ನೊಳಗಿಟ್ಟಿದ್ದ ಸುಮಾರು ಎರಡೂವರೆ ಲಕ್ಷ ರೂ.ಗಳ ಚಿನ್ನ ಹಾಗೂ ಹಣ ಕಳೆದು ಹೋಗಿರುವುದಾಗಿ ತಿಳಿಸಿದ್ದರು. ಕೂಡಲೇ ಘಟಕಕ್ಕೆ ಈ ವಿಷಯ ತಿಳಿಸಿದ ನಂತರ ಅವರ ಸೂಚನೆ ಮೇರೆಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ  ಮಹಿಳೆಗೆ ಸೂಚಿಸಲಾಯಿತು. ಬಳಿಕ ಇಳಿದು ಹೋದ ಪ್ರಯಾಣಿಕರಿಬ್ಬರ ಫೋನ್‌ ನಂಬರ್‌ ಅನ್ನು ಟ್ರ್ಯಾಕ್ ಮಾಡಿ ಪರಿಶೀಲಿಸಿದಾಗ ಅವರು ಸತತವಾಗಿ ಕ್ಲಬ್ ಕ್ಲಾಸ್ ವೋಲ್ವೋ ವಾಹನದಲ್ಲಿ ಪ್ರಯಾಣಿಸಿರುವುದು ಗೊತ್ತಾಗಿತ್ತು. ಕೂಡಲೇ ಎಲ್ಲಾ ಪ್ರಯಾಣದ ವಿವರಗಳನ್ನು ಹಣ ಕಳೆದುಕೊಂಡ ಪ್ರಯಾಣಿಕರಿಗೆ ನೀಡಿ ಪೊಲೀಸ್ ದೂರು ನೀಡುವಂತೆ ಸೂಚಿಸಲಾಯಿತು. ಅದರಂತೆ ಪುತ್ತೂರು ಹಾಗೂ ಬೆಂಗಳೂರಿನಲ್ಲಿ ದೂರು ದಾಖಲಾಗಿತ್ತು.

ಈ ಘಟನೆ ನಡೆದು ಸುಮಾರು ನಾಲ್ಕು ತಿಂಗಳ ಬಳಿಕ ನವೆಂಬರ್‍ 12ರ ಶುಕ್ರವಾರ ರಾತ್ರಿ ಸುಮಾರು 9:45ಕ್ಕೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಂಗಳೂರಿಗೆ ತೆರಳಲು ಸಿದ್ಧವಾಗಿ ನಿಂತಿದ್ದ ಬಸ್‌ನಲ್ಲಿ ನಿರ್ವಾಹಕ ಅಶೋಕ್ ಜಾದವ್ ಟ್ರಿಪ್ ಶೀಟ್‌ ಪರಿಶೀಲಿಸುತ್ತಿದ್ದ ವೇಳೆ ಸೀಟ್ ನಂಬರ್‍ 29 ಮತ್ತು 30ರ ಇಬ್ಬರು ಪ್ರಯಾಣಿಕರು ಬೇಗನೇ ಬಸ್ ಏರಿ ತಮ್ಮ ಸೀಟ್‌ನಲ್ಲಿ ಆಸೀನರಾಗಿದ್ದರು. ಹಾಗೂ ಬಸ್‌ನ ಉಳಿದ ಪ್ರಯಾಣಿಕರ ಚಲನವಲನಗಳನ್ನು ಇವರು ಗಮನಿಸುತ್ತಿರುವುದನ್ನು ನೋಡಿ ಅವರಿಬ್ಬರ ಮೇಲೆ ಅನುಮಾನ ಬಂದಿದೆ. ಕೂಡಲೇ ಅವರ ಬಳಿ ತೆರಳಿ ಸೂಕ್ಷ್ಮವಾಗಿ ಗಮನಿಸಿದಾಗ ಅವರಿಬ್ಬರೂ ಈ ಹಿಂದೆ ಪ್ರಯಾಣಿಕರ ಹಣ ಹಾಗೂ ಒಡವೆ ಕದ್ದು ಉಪ್ಪಿನಂಗಡಿ ಬಳಿ ಇಳಿದು ಹೋದ ಪ್ರಯಾಣಿಕರೇ ಎಂಬುದನ್ನು ಗುರುತಿಸಿದರು. ಅವರು ಅನುಮಾನಕ್ಕೆ ಆಸ್ಪದವಾಗದಂತೆ ಬಸ್‌ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಘಟಕದ ಸೂಚನೆಯಂತೆ ಸಂಚಾರ ನಿಯಂತ್ರಕರು ಹಾಗೂ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ಹೋಗಿ ಅವರು ಆಗಮಿಸಿದ್ದಾರೆ. ಬಳಿಕ ಇಬ್ಬರು ಪ್ರಯಾಣಿಕರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಬಸ್‌ನಿಂದ ಪ್ರಯಾಣಿಕರ ಒಡವೆ, ಹಣ ದೋಚಿ ಪರಾರಿಯಾಗಿರುವುದನ್ನು ಬಾಯ್ಬಿಟ್ಟಿದ್ದಾರೆ. ಬಳಿಕ ಹಣ, ಒಡವೆ ಕಳೆದುಕೊಂಡ ಮಹಿಳೆಗೆ, ಪುತ್ತೂರು ಮತ್ತು ಕದ್ರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

4.2 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement