ಆಹಾರ ಪದಾರ್ಥಗಳ ಮೇಲೆ ಬ್ಯಾಚ್ ಸಂಖ್ಯೆ, ಸಸ್ಯಾಹಾರ, ಮಾಂಸಾಹಾರ ಚಿಹ್ನೆ ನಮೂದಿಸದೆ ಮಾರಾಟ ಮಾಡುವುದು ಅಪರಾಧ: ಹೈಕೋರ್ಟ್‌

ಬೆಂಗಳೂರು: ಆಹಾರ ಪದಾರ್ಥಗಳ ಮೇಲೆ ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನಾಂಕ ಅಥವಾ ಸಸ್ಯಾಹಾರ, ಮಾಂಸಾಹಾರ ಚಿಹ್ನೆ ನಮೂದಿಸದೆ ಮಾರಾಟ ಮಾಡುವುದು ಆಹಾರ ಕಲಬೆರಕೆ ತಡೆ ಕಾಯಿದೆ ಅಡಿ ಶಿಕ್ಷಾರ್ಹ ಅಪರಾಧ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶ ನೀಡಿದೆ.
ಅಲ್ಲದೇ, ಕಲಬೆರಕೆ ಕಾಫಿ ಪುಡಿ ಮಾರಾಟ ಮಾಡಿದ ಪ್ರಕರಣದಲ್ಲಿ ಆರೋಪಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಎತ್ತಿ ಹಿಡಿದಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ಪೊಟ್ಟಣದ ಮೇಲೆ ಬ್ಯಾಚ್ ಸಂಖ್ಯೆ ಹಾಗೂ ಎಕ್ಸ್‌ಪೈರಿ ದಿನಾಂಕ ನಮೂದಿಸದೇ ಕಾಫಿ ಪುಡಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದು ಪಡಿಸುವಂತೆ ಕೋರಿ ಸಕಲೇಶಪುರದ ಸೆಲೆಕ್ಟ್ ಕಾಫಿ ವರ್ಕ್ಸ್‌ನ ಮಾಲೀಕ ಸಯ್ಯದ್ ಅಹ್ಮದ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಡಾ. ಎಚ್ ಬಿ ಪ್ರಭಾಕರ ಶಾಸ್ತ್ರಿ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ವರದಿ ಪ್ರಕಾರ, ಅರ್ಜಿದಾರನಿಗೆ ಆರು ತಿಂಗಳು ಶಿಕ್ಷೆ ಹಾಗೂ ಒಂದು ಸಾವಿರ ರೂಪಾಯಿ ದಂಡ ವಿಧಿಸಿ ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದ್ದು, ಅರ್ಜಿದಾರರು 45 ದಿನಗಳಲ್ಲಿ ಸಕಲೇಶಪುರದ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಶರಣಾಗಿ, ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ: ಇಬ್ಬರು ಆರೋಪಿಗಳ ಮಾಹಿತಿ ನೀಡಿದವರಿಗೆ ತಲಾ ₹10 ಲಕ್ಷ ಬಹುಮಾನ ಘೋಚಿಸಿದ ಎನ್‌ ಐ ಎ

ಸಕಲೇಶಪುರದ ಆಹಾರ ನಿರೀಕ್ಷಕರು 2008ರ ಜೂನ್‌ 20ರಂದು ಸಯ್ಯದ್ ಅಹ್ಮದ್ ಮಾಲೀಕತ್ವದ ಸೆಲೆಕ್ಟ್ ಕಾಫಿ ವರ್ಕ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರಲ್ಲದೆ, 600 ಗ್ರಾಂ ಕಾಫಿ ಪುಡಿ ಖರೀದಿಸಿ ವೈಜ್ಞಾನಿಕ ಪರೀಕ್ಷೆಗೆ ರವಾನಿಸಿದ್ದರು. ತಪಾಸಣೆಯಲ್ಲಿ ಕಾಫಿ ಪುಡಿ ಕಲಬೆರಕೆಯಾಗಿರುವುದು, ಪುಡಿಯಲ್ಲಿ ಶೇ 0.4 ಕೆಫೀನ್ ಮತ್ತು ಶೇ.55 ಜಲೀಯ ಸಾರದ ಅಂಶ ಇರುವುದು ಖಚಿತವಾಗಿತ್ತು.
ಜತೆಗೆ, ಮಾರಾಟದ ಸಂದರ್ಭದಲ್ಲಿ ಯಾವುದೇ ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನಾಂಕಗಳನ್ನು ಮುದ್ರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಸಕಲೇಶಪುರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕಲಬೆರಕೆ ಆಹಾರ ಪದಾರ್ಥ ಮಾರಾಟ ಮಾಡಿದ ಆರೋಪದಲ್ಲಿ ಸಯ್ಯದ್ ಅಹ್ಮದ್‌ಗೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸತ್ರ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ, ಅವರು ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement