ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ನಿಧನ

ಶಿವಮೊಗ್ಗ : : ಖ್ಯಾತ ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆ (77) ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನಲ್ಲಿ ಶನಿವಾರ ನಿಧನರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಡ್ಡೇರಿ ಗ್ರಾಮದಲ್ಲಿ 1949ರ ಜನವರಿ 3ರಂದು ಜನಿಸಿದ್ದರು. ಕೆಳದಿ ಹಾಗೂ ಸಾಗರದಲ್ಲಿ ಶಿಕ್ಷಣ ಪಡೆದ ಅವರು ಯಕ್ಷಗಾನದಲ್ಲಿಯೂ ತರಬೇತಿ ಪಡೆದಿದ್ದರು.  ಮುಂದೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ(NSD)ಯಿಂದ ಪದವಿ ಪಡೆದಿದ್ದ ಅವರು ಕೆಲಕಾಲ ಅಲ್ಲಿಯೇ ಪ್ರಾಧ್ಯಾಪಕರೂ ಆಗಿದ್ದರು. ರಂಗನಿರ್ದೇಶನ ಮಾತ್ರವಲ್ಲದೆ, ರಂಗಶಿಕ್ಷಣಕ್ಕೂ ವಿಶೇಷ ಮಹತ್ವ ನೀಡಿದ ಅವರು ಹಲವು ತಲೆಮಾರುಗಳ ಕಲಾವಿದರು ಮತ್ತು ರಂಗಾಸಕ್ತರಿಗೆ ತರಬೇತಿ ನೀಡಿದರು.
ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಸುಮಾರು 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಮೈಸೂರಿನ ರಂಗಾಯಣ ನಿರ್ದೇಶಕರಾಗಿ ಹಾಗೂ ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ಮುಖ್ಯಸ್ಥರಾಗಿಯೂ, ಸಾಣೆಹಳ್ಳಿಯ ರಂಗ ತರಬೇತಿ ಶಾಲೆಯ ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ತಮ್ಮ ಜೀವಿತಾವಧಿಯಲ್ಲಿ ಹಲವು ಸಣ್ಣಕತೆಗಳನ್ನು ರಚಿಸಿದ್ದಾರೆ. ‘ಸರಿಯುವ ತೆರೆಗಳು’ (1973), ‘ಬೆಂಕಿಯ ನಾಡು’ (1981), ‘ಅಲೆಗಳು’ (1985), ‘ನಿರ್ದೇಶನ’ (1986), ‘ಸಂದಿಗ್ಧ’ (1994) ಅವರ ಪ್ರಮುಖ ಕೃತಿಗಳಾಗಿವೆ.
ಇದಲ್ಲದೆ ‘ಬೆಂಕಿಯ ನೆರಳು’ ಕಾದಂಬರಿ ಹಾಗೂ ‘ಎಚ್ಚೆಮ ನಾಯಕ’ ಎಂಬ ಜೀವನ ಚರಿತ್ರೆಯನ್ನೂ ರಚಿಸಿದ್ದರು. ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಗಳ ಆತ್ಮಚರಿತ್ರೆಯಾದ ‘ಜೋಳಿಗೆ ಮಹಿಮೆ’ಯನ್ನು 1994ರಲ್ಲಿ ಅತ್ಯಂತ ಸಮರ್ಪಕವಾಗಿ ಸಂಪಾದಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
 ‘ಚೆರ್ರಿ ಹಣ್ಣಿನ ತೋಟ’, ‘ಚಾಣಕ್ಯ ಪ್ರಪಂಚ’, ‘ತಲೆದಂಡ’, ‘ಆ ಊರು-ಈ ಊರು’ ಸೇರಿದಂತೆ 100ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಪುಂಟಿಲ’, ‘ಆ ಊರು–ಈ ಊರು’, ‘ಅಥೆನ್ಸಿನ ಅರ್ಥವಂತ’, ‘ಲೋಕ ಶಾಕುಂತಲ’, ‘ತಲೆದಂಡ’ ವಿದಿಶಾ ಪ್ರಹಸನ, ತುಘಲಕ್, ಶರ್ಮಿಷ್ಠೆ, ನಮ್ಮೊಳಗೊಬ್ಬ ಗಾಂಧಿ ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ಅವರು ರಂಗಕ್ಕೆ ತಂದಿದ್ದರು.
ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1994ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು 2014ರಲ್ಲಿ ಪ್ರತಿಷ್ಠಿತ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement