ಗೆಹ್ಲೋಟ್ ವಿರುದ್ಧ ಕ್ರಮದ ಬಗ್ಗೆ ಖರ್ಗೆ ಮೌನ: ಬೇಸತ್ತು ರಾಜಸ್ಥಾನದ ಉಸ್ತುವಾರಿ ಸ್ಥಾನಕ್ಕೆ ಅಜಯ ಮಾಕನ್‌ ರಾಜೀನಾಮೆ

ನವದೆಹಲಿ: ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಈಗ ಮತ್ತೆ ಗೊಂದಲ ಶುರುವಾಗಿದೆ.
ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ಪರೋಕ್ಷ ಬಂಡಾಯದ ಸಂದೇಶ ರವಾನಿಸಿ ಮುಖ್ಯಮಂತ್ರಿಯಾಗಿ ಮುಂದುವರಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಬಣದ ವಿರುದ್ಧ ಈವರೆಗೂ ಯಾವುದೇ ಶಿಸ್ತು ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಬೇಸತ್ತು ರಾಜಸ್ಥಾನದ ಉಸ್ತುವಾರಿ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ಸಿಗ ಅಜಯ್‌ ಮಾಕೆನ್‌ ರಾಜೀನಾಮೆ ಸಲ್ಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಬೆನ್ನಲ್ಲೇ ಅವರಿಗೆ ರಾಜಸ್ಥಾನದ ಅಸಮಾಧಾನ ನಿವಾರಿಸುವುದು ಸವಾಲಾಗಿದೆ.
ನಮ್ಮ ಕುಟುಂಬ ಕಳೆದ ಮೂರು ತಲೆಮಾರುಗಳಿಂದ ಕಾಂಗ್ರೆಸ್‌ ಸಿದ್ಧಾಂತಕ್ಕೆ ಬದ್ಧವಾಗಿದೆ. ಜತೆಗೆ 4 ದಶಕಗಳಿಂದ ಕಾಂಗ್ರೆಸ್‌ನಲ್ಲಿದ್ದು ರಾಜಕಾರಣ ಮಾಡಿದ್ದೇನೆ. ರಾಹುಲ್‌ ಗಾಂಧಿ ಅವರ ನಿಷ್ಠ ಹಿಂಬಾಲಕನಾಗಿ ಕೊನೆಯವರೆಗೂ ಇರುವೆ. ಎಂದು ಮಾಕನ್‌ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರಿಗೂ ಮುನ್ನ ಅಶೋಕ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲು ಗಾಂಧಿ ಕುಟುಂಬ ಮುಂದಾಗಿತ್ತು. ಆದರೆ ಮುಖ್ಯಮಂತ್ರಿ ಹುದ್ದೆಯನ್ನು ತನ್ನಿಂದ ಕಸಿದು ಸಚಿನ್‌ ಪೈಲಟ್‌ಗೆ ನೀಡುವ ಸುಳಿವು ಅರಿತ ನಂತರ ಗೆಹ್ಲೋಟ್‌ ರಾಜಕೀಯ ಡ್ರಾಮಾ ಮಾಡಿ ತಮ್ಮ ಮುಖ್ಯಮಂತ್ರಿ ಖರ್ಚಿ ಉಳಿಸಿಕೊಂಡಿದ್ದರು. ಸುಮಾರು 90ಕ್ಕೂ ಹೆಚ್ಚು ಶಾಸಕರನ್ನು ಸೇರಿಸಿ ರಾಜೀನಾಮೆ ಬೆದರಿಕೆ ಒಡ್ಡಿ ರಾಜಸ್ಥಾನದ ವಿಧಾನಸಭೆ ವಿಸರ್ಜಿಸುವ ಬೆದರಿಕೆಯನ್ನು ಪರೋಕ್ಷವಾಗಿ ಒಡ್ಡಿದ್ದ ಗೆಹ್ಲೋಟ್‌ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸವಾಲೆಸೆದಿದ್ದರು.
ತಾವು ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಎಐಸಿಸಿ ಅಧ್ಯಕ್ಷರಾಗುವ ಉದ್ದೇಶ ಹೊಂದಿದ್ದ ಗೆಹ್ಲೋಟ್ ಅವರಿಗೆ, ಪಕ್ಷದಲ್ಲಿನ ‘ಒಬ್ಬ ವ್ಯಕ್ತಿ ಒಂದು ಹುದ್ದೆ’ ನಿಯಮದ ಬಗ್ಗೆ ರಾಹುಲ್ ಗಾಂಧಿ ಖಡಕ್ ಆಗಿ ಹೇಳಿದ್ದು ಅವರ ಆಲೋಚನೆಗೆ ಬ್ರೇಕ್‌ ಬೀಳಲು ಕಾರಣವಾಯಿತು.

ಇಂದಿನ ಪ್ರಮುಖ ಸುದ್ದಿ :-   ಎನ್‌ಐಎ ದಾಳಿಯಲ್ಲಿ ಮೋಸ್ಟ್ ವಾಂಟೆಡ್ ಶಂಕಿತ ಐಸಿಸ್ ಭಯೋತ್ಪಾದಕ ದೆಹಲಿಯಲ್ಲಿ ಬಂಧನ

ತಾವು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ ತಮ್ಮ ಮುಖ್ಯಮಂತ್ರಿ ಹುದ್ದೆಯನ್ನು ತಮ್ಮ ರಾಜಕೀಯ ಬದ್ಧ ವೈರಿ ಸಚಿನ್ ಪೈಲಟ್ ಅವರಿಗೆ ನೀಡಲಾಗುತ್ತದೆ ಎಂದು ಗೊತ್ತಾಗುತ್ತಿದ್ದಂತೆಯೇ ತಮ್ಮ ಬೆಂಬಲಿಗ ಶಾಸಕರ ಮೂಲಕ ಹೈಡ್ರಾಮಾ ನಡೆಸಿ ಬಂಡಾಯದ ಬಾವುಟ ಹಾರಿಸುವ ಎಚ್ಚರಿಕೆ ನೀಡಿದ್ದರು.
ಆ ವೇಳೆ ಹೈಕಮಾಂಡ್‌ನಿಂದ ರಾಜಸ್ಥಾನದ ಉಸ್ತುವಾರಿ ಹಾಗೂ ಬೆಳವಣಿಗೆಗಳ ವೀಕ್ಷಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್‌ ಮಾಕನ್‌ ಅವರು ಗೆಹ್ಲೋಟ್‌ ಅವರಿಗೆ ಸೋನಿಯಾರ ಕೆಂಗಣ್ಣಿಗೆ ಗುರಿಯಾಗಿರುವ ಎಚ್ಚರಿಕೆ ಸಂದೇಶ ತಲುಪಿಸಿದ್ದರು. ಜತೆಗೆ ಗೆಹ್ಲೋಟ್ ವಿರುದ್ಧ ಶಿಸ್ತು ಕ್ರಮ ಎಚ್ಚರಿಕೆ ನೀಡಿದ್ದರು.
ಗೆಹ್ಲೋಟ್‌ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರ ಗೆಹ್ಲೋಟ್‌ ವಿರುದ್ಧ ಕ್ರಮಕ್ಕೆ ಮುಂದಾಗಲೇ ಇಲ್ಲ. ಆ ಬಗ್ಗೆ ಖರ್ಗೆ ಒಂದೇ ಒಂದು ಶಬ್ದವನ್ನೂ ಮಾತನಾಡಲಿಲ್ಲ. ಇದರಿಂದ ಬೇಸತ್ತ ಅಜಯ ಮಾಕನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

ಇಂದಿನ ಪ್ರಮುಖ ಸುದ್ದಿ :-   ಬಿಹಾರ ಜಾತಿ ಸಮೀಕ್ಷೆ ಬಿಡುಗಡೆ : 27% ಹಿಂದುಳಿದ ವರ್ಗಗಳು, 36% ಅತ್ಯಂತ ಹಿಂದುಳಿದ ವರ್ಗಗಳು...

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement