ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ : ದೇವಸ್ಥಾನದ ಕುರುಹುಗಳ ಸಮೀಕ್ಷೆಗೆ ನಿರ್ದೇಶಿಸಲು ಕೋರಿ ಪಿಐಎಲ್‌

ಬೆಂಗಳೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಪ್ರಕರಣವು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ಧ್ವಂಸಗೊಳಿಸಿ ಟಿಪ್ಪು ಸುಲ್ತಾನ್ ಜಾಮೀಯಾ ಮಸೀದಿ ನಿರ್ಮಿಸಿದ್ದಾರೆ ಎಂದು ಆಕ್ಷೇಪಿಸಿ ಬಜರಂಗ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಬಿ ಮಂಜುನಾಥ್ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಜರಾಯಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಮಂಡ್ಯ ಜಿಲ್ಲಾಧಿಕಾರಿ, ರಾಜ್ಯ ಧಾರ್ಮಿಕ ಪರಿಷತ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಬೇಕಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ಮೂಡಲ ಬಾಗಿಲು ಆಂಜನೇಯ ದೇವಸ್ಥಾನವು ಹಿಂದೂಗಳ ಪವಿತ್ರ ದೇವಸ್ಥಾನ ಹಾಗೂ ತೀರ್ಥಯಾತ್ರಾ ಸ್ಥಳ. ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯ, ಮೈಸೂರು ರಾಜವಂಶಸ್ಥರು ಹಾಗೂ ದಳವಾಯಿ ದೊಡ್ಡಯ್ಯ ಸೇರಿ ಅನೇಕ ಆಡಳಿತಗಾರರು, ಪೋಷಕರು ಆರಾಧನೆ, ಸಂರಕ್ಷಣೆ, ನಿರ್ವಹಣೆ ಹಾಗೂ ಜೀರ್ಣೋದ್ಧಾರ ಮಾಡಿದ್ದರು. ಆದರೆ, ಇದನ್ನು ಧ್ವಂಸಗೊಳಿಸಿದ ಟಿಪ್ಪು ಸುಲ್ತಾನ್ 1786ರಿಂದ 1789ರ ತನ್ನ ಆಡಳಿತಾವಧಿಯಲ್ಲಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾರೆ. ಟಿಪ್ಪು ಸುಲ್ತಾನ್ ಮಾಡಿದ ಐತಿಹಾಸಿಕ ಪ್ರಮಾದವನ್ನು ಸರಿಪಡಿಸುವ ಜವಾಬ್ದಾರಿ ಸರ್ಕಾರ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳದ್ದಾಗಿದೆ. ಈ ನಿಟ್ಟಿನಲ್ಲಿ 2022ರ ಮೇ 24ರಂದು ಅರ್ಜಿದಾರ ಸಂಘಟನೆಯಿಂದ ಪ್ರತಿವಾದಿಗಳಿಗೆ ಕಾನೂನು ಪ್ರಕಾರ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ನಾಮಪತ್ರ ವಾಪಸ್ ಪಡೆದ ದಿಂಗಾಲೇಶ್ವರ ಸ್ವಾಮೀಜಿ

ಅಲ್ಲದೇ, ದೇವಾಲಯದ ಆವರಣದಲ್ಲಿರುವ ಹಿಂದೂ ಸಂಸ್ಕೃತಿ ಹಾಗೂ ಪರಂಪರೆಯ ಕುರುಹುಗಳಾಗಿರುವ ಗರುಡ ಕಂಬ, ಕಲ್ಯಾಣಿ, ಸ್ಥೂಪ, ಸ್ತಂಭ, ಹಿಂದೂ ದೇವ-ದೇವತೆಗಳ ಕಲ್ಲಿನ ಕೆತ್ತನೆಗಳು ಹಾಗೂ ಭೂಗತ ದೇವಸ್ಥಾನದ ಭಾಗ, ದೇವಸ್ಥಾನದ ವಾಸ್ತು ಶಿಲ್ಪ, ದೇವಸ್ಥಾನದ ವಿನ್ಯಾಸ, ಹೂತಿಟ್ಟ ವಿಗ್ರಹಗಳನ್ನು ಸಂರಕ್ಷಿಸಿಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರ್ಕಾರ, ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಶ್ರೀರಂಗಪಟ್ಟಣದಲ್ಲಿರುವ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನ-ಜಾಮಿಯಾ ಮಸೀದಿ ಜಾಗದ ಬಗ್ಗೆ ಪುರಾತತ್ವಶಾಸ್ತ್ರ ಅಧ್ಯಯನ, ಸಮೀಕ್ಷೆ ಹಾಗೂ ಉತ್ಖನನ ನಡೆಸಿ 30 ದಿನಗಳಲ್ಲಿ ಹೈಕೋರ್ಟ್‌ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement