ಹುಬ್ಬಳ್ಳಿ : ಬನ್ನಿ ಭಾವಗಳೇ… ಕನ್ನಡ ನುಡಿ ಹಬ್ಬಕೆ ಕರೆಯುತಿದೆ ಕೈ ಬೀಸಿ

(ನವೆಂಬರ್‌ ೨೬ರಂದು ಸಾಯಂಕಾಲ ೫:೩೦ಕ್ಕೆ ವಿದ್ಯಾನಗರ ಲಿಂಗರಾಜನಗರ ರಸ್ತೆಯ ಕಾಳಿದಾಸ ನಗರ ಬಸ್ ನಿಲುಗಡೆ ಕನ್ನಡ ನುಡಿ ಹಬ್ಬ ಜರುಗಲಿದ್ದು, ಆ ನಿಮಿತ್ಯವಾದ ಲೇಖನ)
ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕದ ಏಕೀಕರಣ ಒಂದು ಮಹತ್ವ ಪೂರ್ಣ ಐತಿಹಾಸಿಕ ಘಟನೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಾಡು-ನುಡಿ ಕನ್ನಡದ ಸ್ಥಿತಿ ಗತಿ ವಿಷಯ ಚರ್ಚೆಗೆ ಬಂದಾಗ ಈ ನಾಡಿನ ಏಕೀಕರಣವೇ ಪ್ರಮುಖ ವಿಷಯವಾಗಿರುತ್ತದೆ. ಕನ್ನಡ ನಾಡನ್ನು ಕಟ್ಟಿ ಬೆಳೆಸುವಲ್ಲಿ ನುಡಿಗಿಂತ ನಡೆ ಇಂದು ಬಹಳ ಅವಶ್ಯಕತೆವಿದೆ.
“ಜೈನರ ಕಾವ್ಯದ, ಶರಣರ ವಚನದ, ದಾಸರ ಹಾಡಿನ ಈ ನಾಡು” ಎಂದು ನಾಕುತಂತಿ ಕಾವ್ಯದ ಮೂಲಕ ವೀಣೆಯ ಝೇಂಕಾರ ಗೈದ ವರಕವಿ ಡಾ. ದ.ರಾ. ಬೇಂದ್ರೆಯವರ ನುಡಿಯಂತೆ ಕರ್ನಾಟಕದ ಉದ್ದಗಲಕ್ಕೂ ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷಾಭಿಮಾನವನ್ನು ಬಿಂಬಿಸುತ್ತ, ಕನ್ನಡಿಗರ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಹ ಕೆಲಸವನ್ನು ನಾವು ಮಾಡಿದಾಗ ಮಾತ್ರ ಕನ್ನಡದ ನುಡಿಹಬ್ಬ ಅರ್ಥ ಪೂರ್ಣವಾಗುತ್ತದೆ.
ಏಕೀಕರಣವೆಂದರೇ ಕೇವಲ ಹರಿದು ಹಂಚಿಹೊದ ಪ್ರದೇಶಗಳ ಒಗ್ಗೂಡಿಸುವಿಕೆ ಮಾತ್ರವಲ್ಲ, ಕರ್ನಾಟಕ ಮತ್ತು ಕನ್ನಡದ ಸುಧಾರೀಕರಣವಾಗಬೇಕಾಗಿದೆ. ಒಂದು ನಾಡೆಂದರೆ ಅದು ಕೇವಲ ಭೌತಿಕ ಭೂ-ಪ್ರದೇಶವಲ್ಲ. ಅಲ್ಲಿ ಒಂದಿಷ್ಟು ಮನಸ್ಸು, ಬದುಕುಗಳು ಹಾಗೂ ಪರಂಪರೆಯೇ ಇದೆ. ಅದು ಭಾಷೆಯಿಂದ , ಭಾವೈಕ್ಯತೆಯಿಂದ, ಸಂಸ್ಕೃತಿಯಿಂದ, ಪರಂಪರೆಯಿಂದ ಸಂಪೂರ್ಣ ಕನ್ನಡದ ಮೂಲಕ ಪ್ರಯತ್ನಪಟ್ಟು ಈ ನಾಡ ಒಗ್ಗೂಡಿಸುವಿಕೆಯಾಗಿದೆ. ಅದಕ್ಕಾಗಿ ಪ್ರಯತ್ನಪಟ್ಟು ಈ ನಾಡನ್ನು ಸುಂದರವಾಗಿ, ರೂಪಿಸಿದ ರೂವಾರಿಗಳಿಗೆ ನಾವೆಲ್ಲ ಚಿರರುಣಿಯಾಗಬೇಕು.

ಕನ್ನಡ ಭಾಷೆಯು ಆಂಗ್ಲ ಭಾಷೆಯ ಪ್ರಭಾವ ಮತ್ತು ಅಬ್ಬರದಿಂದ ನಲುಗುತ್ತಿದೆ. ಕೇವಲ ಐದುನೂರು ವರ್ಷಗಳ ಇತಿಹಾಸವಿರುವ ಆಂಗ್ಲ ಭಾಷೆ ಎರಡು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಕನ್ನಡ ಭಾಷೆಯ ಪರಂಪರೆಯನ್ನು ನುಂಗುತ್ತ, ಕೊಡಗನ ಕೋಳಿ ನುಂಗಿತ್ತ ಎಂಬಂತಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಕನ್ನಡಿಗರ ಇಚ್ಛಾಶಕ್ತಿಯ ಕೊರತೆಯೊಂದಿಗೆ ನಮ್ಮಲ್ಲಿನ ಉದಾರತೆ ಹಾಗೂ ಸಹನಶೀಲತೆ, ಇದೀಗ ಸಹನೆಯು ನಮ್ಮ ದೌರ್ಬಲ್ಯವಲ್ಲ ಎಂಬುದನ್ನು ತೋರಿಸಬೇಕಾದ ಅನಿವಾರ್ಯತೆ ಇದೆ.
ಕನ್ನಡನಾಡು ಪ್ರತಿನಿತ್ಯ ಬೆಳಗಬೇಕು. ಪ್ರಕಾಶಿಸಬೇಕು, ತನ್ಮೂಲಕ ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಬೆಳೆಯಬೇಕು. ಇತರ ಭಾಷೆಗಳ ಕುರಿತಾದ ನಮ್ಮ ಮೃದು ಗುಣವನ್ನು ಬೇರೆಯವರು ದುರುಪಯೋಗ ಪಡಿಸಿಕೊಳ್ಳಬಾರದು. ಕನ್ನಡ ನಾಡು ನುಡಿ ಸಂಸ್ಕೃತಿಗೆ ತನ್ನದೇ ಆದ ಇತಿಹಾಸವಿದೆ. ನವೆಂಬರ್‌ ತಿಂಗಳಲ್ಲಿ ಹುಬ್ಬಳ್ಳಿಯ ಹಲವಾರು ಸಂಘ-ಸಂಸ್ಥೆಗಳು, ವ್ಯಕ್ತಿಗಳು ನುಡಿ ಹಬ್ಬವನ್ನು ಆಚರಿಸುತ್ತಾ ಕನ್ನಡದ ಶ್ರೀಮಂತಿಕೆ ಹೆಚ್ಚಿಸುತ್ತಿದ್ದಾರೆ. ಅವುಗಳಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಬನಶಂಕರಿ ಬಡಾವಣೆ ಎರಡು ಸಂಘಟನೆಗಳು ಪ್ರಮುಖವಾಗಿ ಕಾರ‍್ಯನಿರ್ವಹಿಸುತ್ತಿವೆ ಕನ್ನಡ ಕಲಾ ಕೃಷಿ ಬಳಗ ಹಾಗೂ ಬಸವ ಸೇವಾ ಸಮಿತಿ (ರಿ).
ಬಸವ ಸೇವಾ ಸಮಿತಿ ೨೦೦೪ ರಲ್ಲಿ ಆರಂಭವಾಗಿದೆ. ಶರಣರ ಕಾಯಕ ಮತ್ತು ದಾಸೋಹ ಸಂದೇಶಗಳನ್ನು ಬಡಾವಣೆಯಲ್ಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬಿತ್ತರಿಸುತ್ತದೆ. ೨೫೦ಕ್ಕೂ ಹೆಚ್ಚಿನ ಸದಸ್ಯರನ್ನು ಒಳಗೊಂಡ ಸಮಿತಿ ರಾಷ್ಟ್ರೀಯ ದಿನಾಚರಣೆಗಳನ್ನು, ಸ್ವಚ್ಛತಾ ಮತ್ತು ಆರೋಗ್ಯ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುತ್ತಾ ಮುನ್ನಡೆಯುತ್ತಿದೆ. ಸಾಹಿತ್ಯಿಕ, ಸಾಂಸ್ಕೃತಿಕ ಕಾರ‍್ಯಕ್ರಮಗಳೊಂದಿಗೆ ಪೌರಕಾರ್ಮಿಕರಿಗೆ, ಹೂ ಮಾರುವವರಿಗೆ, ಹಾಲು ಮಾರುವವರಿಗೆ, ಯೋಧರಿಗೆ, ಕನ್ನಡ ನಾಡು ನುಡಿ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುತ್ತಿದೆ. ೨೦೧೧ ರಲ್ಲಿ ನೋಂದಣಿಯಾಗಿದೆ.

ಪ್ರಮುಖ ಸುದ್ದಿ :-   ಸುಗಾವಿ ಶಾಲೆಯ ʼಶತಮಾನೋತ್ಸವ ಸಂಭ್ರಮʼ ಕಾರ್ಯಕ್ರಮ ಭಾನುವಾರ ಉದ್ಘಾಟನೆ : ವಿವಿಧ ಕಾರ್ಯಕ್ರಮ ಆಯೋಜನೆ

ನುಡಿ ಹಬ್ಬದ ಉದ್ದೇಶ
ಪ್ರತಿಯೊಬ್ಬರಲ್ಲಿಯೂ ಕನ್ನಡಾಭಿಮಾನ ಒಂದಲ್ಲ ಒಂದು ಮೂಲೆಯಲ್ಲಿ ಇದ್ದೇ ಇರುತ್ತದೆ. ಕೆಲವೊಬ್ಬರ ಎದೆಯಲ್ಲಿ ಪ್ರಕಟಗೊಂಡರೆ ಇನ್ನು ಕೆಲವರ ಎದೆಯಲ್ಲಿ ಸೋಮಾರಿಗೊಂಡಿರುತ್ತದೆ, ದರಿದ್ರ ಗೊಂಡಿರುತ್ತದೆ, ಸತ್ತೇ ಹೋಗಿರುತ್ತದೆ. ಹೀಗೆ ಸೋಮಾರಿಗೊಂಡ, ಸತ್ತೇ ಹೋದ ಕನ್ನಡತನ ಎದೆಯನ್ನು ಒಮ್ಮೆ ತಟ್ಟಿದರೆ ಸಾಕು, ಅದು ಮುಂದೆ ಅವನ ವ್ಯಕ್ತಿತ್ವವನ್ನೆಲ್ಲಾ ಆವರಿಸುತ್ತದೆ ಎನ್ನುವ ಸೈದ್ಧಾಂತಿಕ ಹಿನ್ನಲೆಯಲ್ಲಿ ಈ ನುಡಿ ಹಬ್ಬ ಕಾರ್ಯಕ್ರಮವನ್ನು ಆಚರಿಸುತ್ತೇವೆ.
ಈ ಉದ್ದೇಶ ಇಟ್ಟುಕೊಂಡು ನಾಡಿನ ಗಣ್ಯರನ್ನು ಕರೆಯಿಸಿ, ಅವರಿಂದ ಪ್ರತಿಯೊಬ್ಬರ ಎದೆಯಲ್ಲಿ ಕನ್ನಡದ ಡಿಂಡಿಮವನ್ನು ಬಾರಿಸುವ ಮೂಲಕ ಸ್ವಾಭಿಮಾನಿ ಕನ್ನಡಿಗರನ್ನಾಗಿ ಮಾಡುವುದೇ ಈ ನುಡಿ ಹಬ್ಬ ಉದ್ದೇಶ.

ಅನ್ನದ ಭಾಷೆ ಕನ್ನಡ
“ನಮ್ಮ ನಿಮ್ಮಲ್ಲಿ ಒಬ್ಬರ ತಾಯಿ ಭಾಷೆ ಕನ್ನಡ ಇರಬಹುದು, ಒಬ್ಬರದು ಹಿಂದಿ ಇರಬಹುದು, ಒಬ್ಬರದು ತೆಲಗು ಇರಬಹುದು, ಒಬ್ಬರದು ಉರ್ದು ಇರಬಹುದು, ಒಬ್ಬರದು ಮರಾಠಿ ಇರಬಹುದು, ಆದರೆ ಕನ್ನಡ ನೆಲದಲ್ಲಿ ದುಡಿದು, ಉಂಡು, ಮಾತನಾಡುವ ಭಾಷೆ ಎಲ್ಲರಿಗೂ ಒಂದೇ. ಇದೇ ಕನ್ನಡ ಭಾಷೆ, ಇದೇ ಅನ್ನದ ಭಾಷೆ ಈ ಅನ್ನದ ಭಾಷೆಯ ಋಣ ತೀರಿಸಲೂ ಎಲ್ಲರೂ ಒಂದಾಗಿ ಬಂದು ತಾಯಿ ಭುವನೇಶ್ವರಿ ತೇರನ್ನು ಎಳೆಯೋಣ.”
-ಹುಬ್ಬಳ್ಳಿ ತಿಂಮ ಸಿದ್ಧರಾಮಗೌಡ ಕ. ಮಾಲಿಪಾಟೀಲ, ಸಂಸ್ಥಾಪಕರು

ಪ್ರಮುಖ ಸುದ್ದಿ :-   ಬೆಂಗಳೂರು: ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ; ಅಂಧ ದಂಪತಿ ಸಾವು

 

ಕನ್ನಡ ಕಲಾ ಕೃತಿ ಬಳಗ ೨೦೧೩ ರಲ್ಲಿ ನೋಂದಣಿಯಾಗಿದೆ. ಬಳಗ ಆರಂಭದಿಂದಲೂ ಕನ್ನಡ ನಾಡು, ನುಡಿ, ಜಲ ಸಂಸ್ಕೃತಿಯನ್ನು ಬೆಳೆಸುವ ಹಲವಾರು ಕರ‍್ಯಕ್ರಮವನ್ನು ಆಯೋಜಿಸುತ್ತದೆ. ಉಭಯ ಸಂಘಟನೆಗಳು ೨೦೧೮ ದಿಂದ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ನುಡಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾ ಬಂದಿದೆ. ಈ ಕಾರ‍್ಯಕ್ರಮಗಳಿಗೆ ನಾಡಿನ ಗಣ್ಯರನ್ನು, ಸಾಂಸ್ಕೃತಿಕ ಹಾಗೂ ಸಾಹಿತ್ಯ ಸಾಧಕರನ್ನು ಕರೆಯಿಸಿ, ಸಾವಿರಾರು ಜನರಿಗೆ ಕನ್ನಡದ ಕಿಚ್ಚನ್ನು ಮುಟ್ಟಿಸಿ, ಸಂಸ್ಕೃತಿಯ ಅರಿವು ಮೂಡಿಸುತ್ತಿದೆ. ನಟರಾದ ಮಂಡ್ಯ ರಮೇಶ, ಟೆನ್ನಿಸ್ ಕೃಷ್ಣ, ಸತ್ಯಜಿತ ಈಗಾಗಲೇ ನುಡಿ ಹಬ್ಬದ ಅತಿಥಿಗಳಾಗಿ ಆಗಮಿಸಿದ್ದು, ೨೦೨೨ ಕ್ಕೆ ನಾಡಿನ ಪ್ರಸಿದ್ಧ ಸಾಹಿತಿಗಳು ಮತ್ತು ವಾಗ್ಮಿಗಳಾದ ಪ್ರೊ. ಎಂ. ಕೃಷ್ಣೆಗೌಡ ಇಂದು ಆಗಮಿಸುತ್ತಿದ್ದಾರೆ.
ನುಡಿ ಹಬ್ಬದೊಂದಿಗೆ ಉಭಯ ಸಂಘಟನೆಗಳು ಬಸವ ಜಯಂತಿ, ಕಾಯಕ ಜಯಂತಿ ಆಚರಿಸುತ್ತ, ವಿದ್ಯಾರ್ಥಿಗಳಿಗೆ ವಚನ ಗಾಯನ, ಕನ್ನಡ ಸಾಹಿತ್ಯ, ಕಾವ್ಯ ವಾಚನ, ಕನ್ನಡ ಚಲನಚಿತ್ರಗಳು, ಭಕ್ತಿ ಗೀತೆಗಳು, ಜಾನಪದ ಗೀತೆಗಳ ಹಾಡುವ ಸ್ಪರ್ಧೆಗಳ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ.
ವೃತ್ತಿಯಿಂದ ಇಂಜಿನಿಯರ್‌ ಆಗಿರುವ ಸಿದ್ದರಾಮಗೌಡ ಮಾಲಿಪಾಟೀಲ ಮತ್ತು ಕೆ.ಸಿ. ಪಾಟೀಲ, ಪ್ರಾಧ್ಯಾಪಕರಾಗಿರುವ, ಡಾ. ಎಚ್.ವಿ. ಬೆಳಗಲಿ ಮತ್ತು ಪ್ರೊ. ಶಿವಯೋಗಪ್ಪ ಆರ್ ಯಮ್ಮಿ, ಇಂದು ಪ್ರವೃತ್ತಿಯಿಂದ ನಾಡು-ನುಡಿಯ ಸೇವಕರಾಗಿ ನಿರಂತರವಾಗಿ ಕಾರ‍್ಯ ಮಾಡುತ್ತಿದ್ದಾರೆ. ಬಡಾವಣೆಯ ಗಣ್ಯರು, ಹಿರಿಯರು, ಮಹಿಳೆಯರು ಅವರ ತಂಡದ ಕರ‍್ಯಶೈಲಿಗೆ ಪ್ರೇರಕರಾಗಿದ್ದಾರೆ. ಹುಬ್ಬಳ್ಳಿಯ ತಿಂಮ ಎಂದೇ ಖ್ಯಾತರಾಗಿರುವ ಸಿದ್ಧರಾಮಗೌಡ ಮಾಲಿಪಾಟೀಲ ಮತ್ತು ತಂಡದ ಉತ್ಸಾಹ ಇತರರಿಗೆ ಮಾದರಿಯಾಗಿದೆ. ಈ ತಂಡ ಬನಶಂಕರಿ ಬಡಾವಣೆ ನೂಲ್ವಿ, ಶೆರೆವಾಡ, ಗುಡಿಹಾಳ ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಕಾರ‍್ಯಕ್ರಮಗಳನ್ನು ಆಯೋಜಿಸುತ್ತಾ, ನಗರ ಮತ್ತು ಗ್ರಾಮೀಣ ಜನರ ಪ್ರೀತಿ ವಿಶ್ವಾಸ ಗಳಿಸುತ್ತಿದೆ.
ಕನ್ನಡ ನಾಡು, ಪ್ರತಿನಿತ್ಯ ಬೆಳೆಗಬೇಕು, ಪ್ರಕಾಶಿಸಬೇಕು, ತನ್ಮೂಲಕ ಕನ್ನಡ ಕನ್ನಡಿಗ ಕರ್ನಾಟಕ ಬೆಳೆಯಬೇಕು ಎನ್ನುವ ಉಭಯ ಸಂಘಟನೆಗಳ ಉದ್ದೇಶ ಎಲ್ಲರೂ ಕೈಜೋಡಿಸೋಣ.
-ಡಾ. ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement