ನಾನು, ರಮೇಶ ಜಾರಕಿಹೊಳಿ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧೆ : ಊಹಾಪೋಹಗಳಿಗೆ ತೆರೆ ಎಳೆದ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : 2023 ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಮತ್ತು ನನ್ನ ಶಾಸಕ ಸಹೋದರ ರಮೇಶ ಜಾರಕಿಹೊಳಿಯವರು ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತೇವೆ ಎಂದು ಹೇಳುವ ಮೂಲಕ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ತಾಲೂಕಿನ ರಾಜಾಪುರ ಗ್ರಾಮದಲ್ಲಿ ಗುರುವಾರ ಸಂಜೆ ಅರಭಾವಿ ಮತ್ತು ಗೋಕಾಕ ಮತಕ್ಷೇತ್ರಗಳ ಹಾಲುಮತ ಕುರುಬ ಸಮಾಜದವರು ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನು ಮತ್ತು ಸಹೋದರ ರಮೇಶ ಜಾರಕಿಹೊಳಿ ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಬೇರೆ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಬಿಡುತ್ತಾರೆಂದು ಅಲ್ಲಲ್ಲಿ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿದೆ. ಆದರೆ ನಾವಿಬ್ಬರೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಅರಭಾವಿ ಮತಕ್ಷೇತ್ರದಿಂದ ನಾನು ಹಾಗೂ ಗೋಕಾಕ ಮತಕ್ಷೇತ್ರದಿಂದ ರಮೇಶ ಜಾರಕಿಹೊಳಿ ಅವರು ಬಿಜೆಪಿಯಿಂದಲೇ ಸ್ಪರ್ಧಿಸಿ, ಜನರ ಪ್ರೀತಿ ಮತ್ತು ಆಶೀರ್ವಾದದಿಂದ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚಿನ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ತಮ್ಮ ವಿರೋಧಿಗಳ ಪಾತ್ರ ಇದೆ. ಸುಳ್ಳು ವದಂತಿಗಳನ್ನು ಹರಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದ ಅವರು, ಮುಂದಿನ 10 ವರ್ಷಗಳವರೆಗೆ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುತ್ತದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರ ದೂರದೃಷ್ಟಿಯ ಆಡಳಿತವೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

2023ರಲ್ಲಿ ನಡೆಯುವ ಚುನಾವಣೆಯಲ್ಲಿ ಎಲ್ಲ ಸಮಾಜ ಬಾಂಧವರು ತಮ್ಮನ್ನು ಬೆಂಬಲಿಸಿ ಆಶೀರ್ವದಿಸಲಿದ್ದಾರೆ. ಎಲ್ಲ ಸಮಾಜಗಳ ಪ್ರೀತಿ ಮತ್ತು ವಿಶ್ವಾಸವನ್ನು ನಾವು ಗಳಿಸಿಕೊಂಡಿದ್ದೇವೆ. ಯಾವ ಸಮಾಜಕ್ಕೂ ನಮ್ಮಿಂದ ಅನ್ಯಾಯವಾಗಿಲ್ಲ. ನಾವು ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳುತ್ತಿರುವುದು ಅಹಂಕಾರದಿಂದಲ್ಲ. ಅದಕ್ಕೆ ಎಲ್ಲ ಸಮುದಾಯಗಳ ಜನರ ಪ್ರೀತಿ ಮತ್ತು ವಿಶ್ವಾಸವೇ ಕಾರಣ ಎಂದು ಹೇಳಿದರು.
2004ರ ಮೊದಲು ಅರಭಾವಿ ಕ್ಷೇತ್ರ ಹೇಗಿತ್ತು ಮತ್ತು ನಂತರ ಹೇಗಿದೆ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು. ನಾನು 2004 ರಿಂದ ಅರಭಾವಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ನಂತರ ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದೇನೆ. ಮತಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿದ್ದೇನೆ. ಅಭಿವೃದ್ಧಿ ಸಹಿಸದ ಕೆಲವರು ಇಲ್ಲ ಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಯಾರು ನಮ್ಮ ಬಗ್ಗೆ ಜನರಲ್ಲಿ ತಪ್ಪು ತಿಳಿವಳಿಕೆ ಮೂಡಿಸಿ ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೋ ಅವರನ್ನು ಕಲ್ಲೋಳಿ ಮಾರುತೇಶ್ವರ ದೇವರು ನೋಡಿಕೊಳ್ಳುತ್ತಾನೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.

ಮುಂದಿನ ಜನವರಿ ತಿಂಗಳಲ್ಲಿ ಗೋಕಾಕದಲ್ಲಿ ಉಭಯ ಮತಕ್ಷೇತ್ರಗಳ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು. ಇದು ನಮ್ಮ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ್ ಪಾಟೀಲ ಅವರು ಜಂಟಿಯಾಗಿ ಕನಕ ಜಯಂತಿ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. ಸಾನಿಧ್ಯವನ್ನು ಕವಲಗುಡ್ಡದ ಅಮರೇಶ್ವರ ಮಹಾರಾಜರು ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಡ್ಡೆಪ್ಪ ತೋಳಿನವರ, ಜಿಪಂ ಮಾಜಿ ಸದಸ್ಯರಾದ ಟಿ.ಆರ್. ಕಾಗಲ್, ಭೀಮಶಿ ಮಗದುಮ್ಮ, ಗೋವಿಂದ ಕೊಪ್ಪದ, ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯ್ಕ, ಉಪಾಧ್ಯಕ್ಷ ವಿಠ್ಠಲ ಪಾಟೀಲ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ರಾಜು ಬೈರುಗೋಳ, ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement