ಕಾಂತಾರದ ‘ವರಾಹರೂಪಂ’ ಹಾಡಿನ ವಿವಾದ: ಥೈಕ್ಕುಡಂ ಬ್ರಿಜ್‌ ದಾವೆ ತಿರಸ್ಕರಿಸಿದ್ದ ಕೋಝಿಕ್ಕೋಡ್‌ ನ್ಯಾಯಾಲಯದ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆ

ʼವರಾಹ ರೂಪಂʼ ಹಾಡನ್ನು ಕಾಂತಾರ ಸಿನಿಮಾದಲ್ಲಿ ಹಕ್ಕುಸ್ವಾಮ್ಯ ಉಲ್ಲಂಘಿಸಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಹೊಂಬಾಳೆ ಫಿಲ್ಮ್ಸ್‌ ವಿರುದ್ಧ ಥೈಕ್ಕುಡಂ ಬ್ರಿಜ್‌ ಸಂಗೀತ ತಂಡ ಹೂಡಿದ್ದ ದಾವೆಯನ್ನು ತಿರಸ್ಕರಿಸಿದ್ದ ಕೋಝಿಕ್ಕೋಡ್‌ ಜಿಲ್ಲಾ ನ್ಯಾಯಾಲಯ ಆದೇಶಕ್ಕೆ ಗುರುವಾರ ಕೇರಳ ಹೈಕೋರ್ಟ್‌ ತಡೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಸೋಮರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಹೊಂಬಾಳೆ ಫಿಲ್ಮ್ಸ್‌. ರಿಷಬ್‌ ಶೆಟ್ಟಿ, ಪೃಥ್ವಿರಾಜ್‌ ಫಿಲ್ಮ್ಸ್‌, ಅಮೆಜಾನ್‌ ಸೆಲ್ಲರ್‌ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌, ಗೂಗಲ್‌ ಇಂಡಿಯಾ ಪ್ರಧಾನ ಕಚೇರಿ, ಸ್ಪಾಟಿಫೈ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಪೃಥ್ವಿರಾಜ್‌ ಸುಕುಮಾರನ್‌ ಮತ್ತು ಇತರರಿಗೆ ನೋಟಿಸ್‌ ಜಾರಿ ಮಾಡಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ಐದು ವರ್ಷಗಳ ಹಿಂದೆ ಬಿಡುಗಡೆ ಮಾಡಿರುವ ʼನವರಸಂʼ ಗೀತೆಗಳಿಂದ ʼವರಾಹ ರೂಪಂʼ ಗೀತೆಯನ್ನು ಹೆಕ್ಕಿ ತೆಗೆದುಕೊಳ್ಳಲಾಗಿದೆ ಎಂದು ಥೈಕ್ಕುಡಂ ಬ್ರಿಜ್‌ ಆರೋಪಿಸಿದೆ. ಸೆಪ್ಟೆಂಬರ್‌ 30ರಂದು ಬಿಡುಗಡೆಯಾದ ಕನ್ನಡದ ಚಲನಚಿತ್ರ ಕಾಂತಾರ ಮತ್ತು ಅದರ ಸಂಗೀತ ನಿರ್ದೇಶಕ ಬಿ ಅಜನೀಶ್‌ ಲೋಕನಾಥ್‌ ಅವರ ಮೇಲೆ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ ಮಾಡಿದೆ. ನಂತರ ಕೋಝಿಕ್ಕೋಡ್‌ ಜಿಲ್ಲಾ ನ್ಯಾಯಾಲಯದಲ್ಲಿ ಥೈಕ್ಕುಡಂ ಬ್ರಿಜ್‌ ಪ್ರಕರಣ ದಾಖಲಿಸಿತ್ತು.
ಅಲ್ಲದೆ, ʼನವರಸಂʼನ ಹಕ್ಕುಸ್ವಾಮ್ಯ ಹೊಂದಿರುವ ಮಾತೃಭೂಮಿ ಪ್ರಿಂಟಿಂಗ್‌ ಮತ್ತು ಪಬ್ಲಿಷಿಂಗ್‌ ಕಂಪೆನಿ ಲಿಮಿಟೆಡ್‌ ಪಲಕ್ಕಾಡ್‌ ಜಿಲ್ಲಾ ನ್ಯಾಯಾಲಯದಲ್ಲಿ ಮತ್ತೊಂದು ದಾವೆ ಹೂಡಿತ್ತು. ಆರಂಭದಲ್ಲಿ ʼವರಾಹ ರೂಪಂʼ ಗೀತೆಯನ್ನು ಸಿನಿಮಾ, ಚಿತ್ರಮಂದಿರ ಮತ್ತು ಸ್ಟ್ರೀಮಿಂಗ್‌ ವೇದಿಕೆಯಲ್ಲಿ ಬಳಸಕೂಡದಂತೆ ಪಲಕ್ಕಾಡ್‌ ಮತ್ತು ಕೋಝಿಕ್ಕೋಡ್‌ ಜಿಲ್ಲಾ ನ್ಯಾಯಾಲಯಗಳು ತಾತ್ಕಾಲಿಕ ಪ್ರತಿಬಂಧಕಾಜ್ಞೆ ನೀಡಿದ್ದವು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಇದನ್ನು ಪ್ರಶ್ನಿಸಿ ಹೊಂಬಾಳೆ ಫಿಲ್ಮ್ಸ್‌ ಸಲ್ಲಿಸಿದ್ದ ಅರ್ಜಿಯನ್ನು ನವೆಂಬರ್‌ 24ರಂದು ಕೇರಳ ಹೈಕೋರ್ಟ್‌ ವಜಾ ಮಾಡಿತ್ತು. ನಂತರದ ವಿಚಾರಣೆ ವೇಳೆ ಕೋಝಿಕ್ಕೋಡ್‌ ಜಿಲ್ಲಾ ನ್ಯಾಯಾಲಯವು ನ್ಯಾಯವ್ಯಾಪ್ತಿಯ ಕೊರತೆಯಿಂದ ಥೈಕ್ಕುಡಂ ಬ್ರಿಜ್‌ ಹೂಡಿರುವ ದಾವೆಯು ಮಾನ್ಯವಾಗುವುದಿಲ್ಲ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ನಲ್ಲಿ ಥೈಕ್ಕುಡಂ ಬ್ರಿಜ್‌ ಮೇಲ್ಮನವಿ ಸಲ್ಲಿಸಿದೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement