ಉದ್ಯಮಿ ಪುತ್ರ ನಾಪತ್ತೆ ಪ್ರಕರಣ ಭೇದಿಸಿದ ಪೊಲೀಸರು ​: ಕೊನೆಗೂ ಶವ ಪತ್ತೆ, ತಂದೆ ಸೇರಿ ನಾಲ್ವರ ಬಂಧನ, ಮಗನ ಕೊಲೆಗೆ ತಂದೆಯಿಂದಲೇ ಸುಪಾರಿ?!

ಹುಬ್ಬಳ್ಳಿ: ಮಗನ ವಿಪರೀತ ದುಶ್ಚಟ ಮತ್ತು ಕಿರುಕುಳಕ್ಕೆ ಬೇಸತ್ತು ತಂದೆಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆಂದು ಆರೋಪಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಶ್ವಾಪುರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಶವ ಕಲಘಟಗಿ ತಾಲೂಕಿನ ಕಾಡಿನಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೊಲೆಯಾದ ಕೇಶ್ವಾಪುರ ಕುಸುಗಲ್ಲ ರಸ್ತೆ ಅರಿಹಂತನಗರದ ಅಖಿಲ (26) ಎಂಬಾತನ ತಂದೆ, ಕಟ್ಟಡ ಸಲಕರಣೆಗಳ ವ್ಯಾಪಾರಿ ಭರತ ಮಹಾಜನ ಶೇಠ್‌ (ಜೈನ್) , ಮಧ್ಯವರ್ತಿಗಳಾದ ವೀರಾಪುರ ಓಣಿಯ ಮಹಾದೇವ ನಾಲವಾಡ, ಹಳೇಹುಬ್ಬಳ್ಳಿ ನೂರಾನಿ ಪ್ಲಾಟ್ ನ ಸಲೀಂ ಸಲಾವುದ್ದೀನ್ ಮೌಲ್ವಿ, ರೆಹಮಾನ್ ಎಂಬವರನ್ನು ಬಂಧಿಸಿದ್ದಾರೆ.
ಮದ್ಯ ಹಾಗೂ ಮಾದಕ ವ್ಯಸನಗಳ ದಾಸನಾಗಿದ್ದ ಅಖಿಲ ಪ್ರತಿದಿನ ತಡರಾತ್ರಿ ಮನೆಗೆ ಬಂದು ತಂದೆ ಮತ್ತು ತಾಯಿಯೊಂದಿಗೆ ಜಗಳವಾಡಿ ಹಲ್ಲೆ ಮಾಡುತ್ತಿದ್ದ ಹಾಗೂ ಕೊಲೆ ಮಾಡುವುದಾಗಿ ತಂದೆಗೆ ಬೆದರಿಕೆ ಹಾಕುತ್ತಿದ್ದ ಎಂದು ಹೇಳಲಾಗಿದೆ. ಮಗನ ವರ್ತನೆಯಿಂದ ರೋಸಿ ಹೋಗಿದ್ದ ತಂದೆ ಭರತ ಅವರು ಇಂತಹ ನಿರ್ಧಾರ ತೆಗೆದುಕೊಂಡರು ಎಂದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಕೊಲೆಗೆ 10 ಲಕ್ಷ ರೂ. ಸುಪಾರಿ..?
ಮಗನನ್ನು ಮುಗಿಸಲು ಭರತ ಅವರು ಮಹಾದೇವ ಮೂಲಕ ಸಲೀಂ ಎಂಬಾತನಿಗೆ 10 ಲಕ್ಷ ರೂ.ಗಳಿಗೆ ಸುಪಾರಿ ಕೊಟ್ಟಿದ್ದು, ಡಿಸೆಂಬರ್‌ 1ರಂದು ಅರಿಹಂತ ನಗರದ ಮನೆಯಿಂದಲೇ ಎಲ್ಲರೂ ಸೇರಿ ಅಖಿಲನನ್ನು ಕಾರಿನಲ್ಲಿ ಕರೆದುಕೊಂಡು ಕಲಘಟಗಿಯಿಂದ 2-3ಕಿ.ಮೀ ದೂರ ಕರೆದೊಯ್ದು ಶೆಡ್ ವೊಂದಕ್ಕೆ ಒಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂಬುದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ತಂದೆ ಮನೆಯವರಿಗೆ ಅಖಿಲ್‌ ಸ್ನೇಹಿತರೊಂದಿಗೆ ಹೋಗಿದ್ದಾನೆ ಎಂದು ಸುಳ್ಳು ಹೇಳಿದ್ದಾರೆ. ಡಿಸೆಂಬರ್‌ 3ರಂದು ಸಂಜೆ ಅಖಿಲ ತನಗೆ ವಿಡಿಯೋ ಕರೆ ಮಾಡಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ, ಆತ ಎತ್ತರವಾದ ಜಾಗದಿಂದ ಜಿಗಿಯುವಂತೆ ತನಗೆ ಕರೆ ವೇಳೆ ಕಂಡುಬಂದಿತ್ತೆಂದು ಆತನ ಸಾವಿಗೆ ಆತ್ಮಹತ್ಯೆಯ ಬಣ್ಣ ಕಟ್ಟಲು ಯತ್ನಿಸಿದ್ದಾರೆ. ಅಲ್ಲದೆ, ಮಗ ಕಾಣೆಯಾಗಿದ್ದಾನೆ ಎಂದು ಸಹೋದರನ ಮೂಲಕ ಕೇಶ್ವಾಪುರ ಠಾಣೆಯಲ್ಲಿ ದೂರನ್ನು ಸಹ ಕೊಡಿಸಿ ಮಗನನ್ನು ಹುಡುಕಿಕೊಡಿ ಎಂದು ನಾಟಕವಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ದಾಖಲಾದ ಬಳಿಕ ಪೊಲೀಸರು ಅನುಮಾನದ ಮೇಲೆ ತಂದೆಯನ್ನು ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿದಾಗ ಸುಪಾರಿ ಕೊಟ್ಟೆ ಕೊಲೆ ಮಾಡಿಸಿರುವುದು ಹೊರಬಂದಿದೆ. ನಂತರ ಮಧ್ಯವರ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಅವರ ಹೇಳಿಕೆ ಆಧರಿಸಿ ಪೊಲೀಸರು ಅಖಿಲನ ಶವಕ್ಕಾಗಿ ಕಲಘಟಗಿ, ದೇವರ ಗುಡಿಹಾಳದ‌ ತೋಟದ ಮನೆ ಸೇರಿದಂತೆ ವಿವಿಧೆಡೆ ಹುಡುಕಾಟ ನಡಸಿದ್ದಾರೆ. ನಂತರ ಮಂಗಳವಾರ ಕಲಘಟಗಿಯ ದೇವಿಕೊಪ್ಪದ ಕಾಡಿನಲ್ಲಿ ಹೂಳಿದ್ದ ಸ್ಥಿತಿಯಲ್ಲಿ ಶವಪತ್ತೆಯಗಿದೆ ಎಂದು ಹೇಳಲಾಗಿದೆ.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement