ಅಧಿಕಾರಿಗಳನ್ನು ಅವರ ತವರು ಜಿಲ್ಲೆಗಳಿಗೆ ವರ್ಗಾಯಿಸುವಂತಿಲ್ಲ, ನಿಯೋಜಿಸುವಂತಿಲ್ಲ :2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಚುನಾವಣಾ ಆಯೋಗ

ನವದೆಹಲಿ: 2023ರ ರಾಜ್ಯ ವಿಧಾನಸಭೆ ಚುನಾವಣೆಗೆ ಪ್ರಕ್ರಿಯೆಗಳನ್ನು ಆರಂಭಿಸಿರುವ ಕೇಂದ್ರ ಚುನಾವಣಾ ಆಯೋಗ (ಇಸಿಐ) ಶುಕ್ರವಾರ 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕರ್ನಾಟಕ ವಿಧಾನಸಭೆಯ ಅವಧಿಯು 2023ರ ಮೇ 24 ರಂದು ಕೊನೆಗೊಳ್ಳಲಿದೆ. ಕೇಂದ್ರ ಚುನಾವಣಾ ಆಯೋಗವು ಅಧಿಕಾರಿಗಳ ವರ್ಗಾವಣೆ ಅಥವಾ ಪೋಸ್ಟಿಂಗ್ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದೆ. ಯಾವುದೇ ಸರ್ಕಾರಿ ಅಧಿಕಾರಿಗಳು ಚುನಾವಣೆಯೊಂದಿಗೆ ನೇರವಾಗಿ ಸಂಪರ್ಕ ಹೊಂದಿರಬಾರದು ಎಂದೂ ಅದು ಹೇಳಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಕೇಂದ್ರ ಚುನಾವಣಾ ಆಯೋಗದ ಹಿರಿಯ ಪ್ರಧಾನ ಕಾರ್ಯದರ್ಶಿ ನರೇಂದ್ರ ಎನ್ ಬೊಟೊಲಿಯಾ ಅವರು ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸೂಚಿಸಿದ್ದಾರೆ.
ಯಾವುದೇ ಅಧಿಕಾರಿಯನ್ನು ಅವರ ಸ್ವಂತ ಜಿಲ್ಲೆಗೆ ನಿಯೋಜನೆ ಮಾಡಬಾರದು ಹಾಗೂ ಮೂರು ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅಥವಾ ನಾಲ್ಕು ವರ್ಷ ಪೂರೈಸಿದ್ದರೆ ಬೇರೊಂದು ಜಿಲ್ಲೆಗೆ ವರ್ಗಾವಣೆ ಮಾಡಬೇಕೆಂದು ಸೂಚಿಸಲಾಗಿದೆ.

ಜಿಲ್ಲಾ ಹಂತದ ಅಧಿಕಾರಿಗಳಾದ ಡಿಇಒ, ಡೆಪ್ಯುಟಿ ಡಿಇಒ, ಆರ್‍ಒ/ಎಆರ್‍ಒ, ಇಆರ್‍ಒ, ಎಇಆರ್‍ಒ, ನೋಡಲ್ ಅಧಿಕಾರಿಗಳು ಜೊತೆಗೆ ಎಡಿಎಂ, ಎಸ್‍ಡಿಎಂ, ಎಸಿ, ಜಂಟಿ ಆಯುಕ್ತರು, ತಹಸೀಲ್ದಾರ್, ಬಿಡಿಒ ಸೇರಿದಂತೆ ಮತ್ತಿತರ ಅಧಿಕಾರಿಗಳನ್ನು ಕೂಡ ಅವರ ಜಿಲ್ಲೆಗೆ ನಿಯೋಜನೆ ಮಾಡಬಾರದೆಂದು ನಿರ್ದೇಶನಗಳನ್ನು ನೀಡಿದೆ. ಅಲ್ಲದೆ, ಐಜಿ, ಡಿಐಜಿ, ಎಸ್‍ಎಸ್‍ಪಿ, ಎಸ್‍ಪಿ, ಹೆಚ್ಚುವರಿ ಎಸ್‍ಪಿ, ಡಿವೈಎಸ್ಪಿ, ಸಿಪಿಐ, ಪಿಎಸ್‍ಐ, ಎಚ್‍ಸಿ, ಪಿಸಿ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಕೂಡ ಈ ನಿಯಮ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದೆ.
ಚುನಾವಣಾ ವೀಕ್ಷಕರು, ಸಿಇಒ, ಡಿಇಒ, ಆರ್‍ಒಗಳು ವಿಭಾಗವಾರು ಅಧಿಕಾರಿಗಳ ನಿಯೋಜನೆ ಕುರಿತಂತೆ ಪರಿಶೀಲನೆ ನಡೆಸಬೇಕು. ಒಂದು ವೇಳೆ ಆಯೋಗದ ನಿರ್ದೇಶನದ ಹೊರತಾಗಿಯೂ ಯಾವುದೇ ಅಧಿಕಾರಿಗಳು ತವರು ಜಿಲ್ಲೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದರೆ ಅಂಥವರ ಮೇಲೆ ತಕ್ಷಣವೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಯಾವುದೇ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದರೆ ಅಂಥವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲೇಬಾರದು, ಸೇವಾ ಅವಧಿ ಮುಗಿದು 6 ತಿಂಗಳಾಗಿದ್ದರೆ ಅಂಥವರನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಬಹುದು. ಕೇಂದ್ರ ಆಯೋಗದ ಎಲ್ಲ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸೂಚಿಸಿದೆ.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

4.5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement