ಹಿಮಾಚಲ ಪ್ರದೇಶ : ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್‌ನಲ್ಲಿ ಪೈಪೋಟಿ, ಕಾಂಗ್ರೆಸ್ ಹೈಕಮಾಂಡ್‌ನಿಂದ ಅಂತಿಮ ನಿರ್ಧಾರ

ಶಿಮ್ಲಾ: ಈ ಸಲದ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಂಡ ನಂತರ, ಕಾಂಗ್ರೆಸ್‌ಗೆ ಈಗ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಸವಾಲಾಗಿದೆ. ಶುಕ್ರವಾರ ಸಂಜೆ ಶಿಮ್ಲಾದಲ್ಲಿ ಆಕಾಂಕ್ಷಿಗಳ ಬೆಂಬಲಿಗರ ಬಲಾಬಲ ಪ್ರದರ್ಶನದ ನಡುವೆಯೇ ನೂತನವಾಗಿ ಚುನಾಯಿತರಾದ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ನೇಮಕ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದ್ದು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಯಕನನ್ನು ಆಯ್ಕೆ ಮಾಡಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಲ್ಲಿ ಪ್ರತಿಭಾ ಸಿಂಗ್, ಮುಖೇಶ ಅಗ್ನಿಹೋತ್ರಿ ಮತ್ತು ಸುಖವಿಂದರ್ ಸಿಂಗ್ ಸುಖು ಸೇರಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೆ ಮೂವರು ನಾಯಕರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದರು, ಬೆಂಬಲಿಗರು ತಮ್ಮ ನಾಯಕರ ಪರವಾಗಿ ಘೋಷಣೆ ಕೂಗಿದರು.
ಮಾಜಿ ಮುಖ್ಯಮಂತ್ರಿ ದಿವಂಗತ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರ ಬೆಂಬಲಿಗರು ತಮ್ಮ ಶಕ್ತಿ ಪ್ರದರ್ಶನದಲ್ಲಿ, ಶಿಮ್ಲಾದ ಪಂಚತಾರಾ ಹೋಟೆಲ್‌ನ ಹೊರಗೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಕಾರನ್ನು ತಡೆದರು.
ಭೂಪೇಶ್ ಬಘೇಲ್ ಮತ್ತು ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಕೇಂದ್ರ ವೀಕ್ಷಕರನ್ನಾಗಿ ಕಾಂಗ್ರೆಸ್‌ ನೇಮಿಸಿದೆ ಮತ್ತು ಮುಖ್ಯಮಂತ್ರಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಯತ್ನ ನಡೆಸಿದೆ.

ಪ್ರಮುಖ ಸುದ್ದಿ :-   ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

ಹಿಂದಿನ ದಿನ, ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಾಜೀವ ಶುಕ್ಲಾ ಜೊತೆಗೆ ಇಬ್ಬರು ಕೇಂದ್ರ ವೀಕ್ಷಕರು, ಸರ್ಕಾರ ರಚನೆಗೆ ಹಕ್ಕು ಸಾಧಿಸಲು ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರನ್ನು ಭೇಟಿ ಮಾಡಿದರು. ರಾಜ್ಯದಲ್ಲಿ ಸರ್ಕಾರ ರಚಿಸಲು ಪಕ್ಷಕ್ಕೆ ಸಂಖ್ಯಾಬಲವಿದೆ ಎಂಬ ದಾಖಲೆಗಳನ್ನು ಸಲ್ಲಿಸಿದರು.
ಮುಖ್ಯಮಂತ್ರಿ ಹುದ್ದೆಗೆ ತನ್ನ ತಾಯಿ ಸ್ಪರ್ಧೆಯಲ್ಲಿದ್ದಾರೆ ಎಂದು ಪ್ರತಿಭಾ ಸಿಂಗ್ ಅವರ ಮಗ ಹೇಳಿದ್ದಾರೆ. “ನಾನು ಉನ್ನತ ಹುದ್ದೆಯ ರೇಸ್‌ನಲ್ಲಿ ಇಲ್ಲ. ಆದರೆ ನನ್ನ ತಾಯಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರು” ಎಂದು ಪ್ರತಿಭಾ ಸಿಂಗ್ ಅವರ ಪುತ್ರ ಮತ್ತು ಶಿಮ್ಲಾ ಗ್ರಾಮಾಂತರದ ಕಾಂಗ್ರೆಸ್ ಶಾಸಕ ವಿಕ್ರಮಾದಿತ್ಯ ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ, ಅದು ಎಲ್ಲರಿಗೂ ಒಪ್ಪಿಗೆಯಾಗುತ್ತದೆ ಎಂದು ರಾಜೀವ ಶುಕ್ಲಾ ಅವರು ಹೇಳಿದ್ದಾರೆ. ಶಾಸಕರ ಸಾಮೂಹಿಕ ಅಭಿಪ್ರಾಐವನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುವುದು ಮತ್ತು ನಂತರ ವೀಕ್ಷಕರು ಹೈಕಮಾಂಡ್‌ಗೆ ಅದೇ ವಿಷಯವನ್ನು ತಿಳಿಸುತ್ತಾರೆ” ಎಂದು ಅವರು ಹೇಳಿದರು. ಕಾಂಗ್ರೆಸ್ ವೀಕ್ಷಕರು ಮತ್ತು ಶುಕ್ಲಾ ಅವರು ಹೋಟೆಲ್‌ನಲ್ಲಿ ಪ್ರತಿಭಾ ಸಿಂಗ್ ಅವರನ್ನು ಭೇಟಿ ಮಾಡಿದರು.

ಪ್ರಮುಖ ಸುದ್ದಿ :-   2 ಕ್ಷೇತ್ರಗಳಲ್ಲಿ ಒಂದೇ ಪಕ್ಷದ ತಲಾ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ;ತಾವೇ ಅಧಿಕೃತ ಅಭ್ಯರ್ಥಿಗಳೆಂದು ಹಕ್ಕು ಮಂಡನೆ...!

ರಾಜ್ಯದಲ್ಲಿ ಸರ್ಕಾರ ರಚಿಸಲು ಅವಕಾಶ ಸಿಗುತ್ತಿರುವುದಕ್ಕೆ ಕಾಂಗ್ರೆಸ್ ಖುಷಿಯಾಗಿದೆ, ರಾಜ್ಯದ ಜನತೆಗೆ ನೀಡಿರುವ 10 ಭರವಸೆಗಳನ್ನು ಈಡೇರಿಸಲು ಮತ್ತು ಉತ್ತಮ ಆಡಳಿತ ನೀಡಲು ಪಕ್ಷವು ಎಲ್ಲವನ್ನೂ ಮಾಡಲಿದೆ ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ.
ಪಕ್ಷದ ಮಾಜಿ ರಾಜ್ಯ ಮುಖ್ಯಸ್ಥ ಸುಖವಿಂದರ್ ಸಿಂಗ್ ಸುಖು ಮತ್ತು ಶಾಸಕಾಂಗ ಪಕ್ಷದ ನಿರ್ಗಮಿತ ನಾಯಕ ಮುಖೇಶ ಅಗ್ನಿಹೋತ್ರಿ ಕೂಡ ಮುಖ್ಯಮಂತ್ರಿ ಸ್ಥಾನದ ಮುಂಚೂಣಿಯಲ್ಲಿದ್ದಾರೆ ಎಂದು ನಂಬಲಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಸುಖು, ನಾನು ಮುಖ್ಯಮಂತ್ರಿ ಆಕಾಂಕ್ಷಿಯಲ್ಲ, ನಾನು ಕೇವಲ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶದ 68 ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್‌ 40 ಸ್ಥಾನಗಳನ್ನು ಗೆದ್ದುಕೊಂಡಿತು. ನವೆಂಬರ್ 12 ರಂದು ಮತದಾನ ನಡೆದಿದ್ದು, ಗುರುವಾರ ಫಲಿತಾಂಶ ಪ್ರಕಟವಾಗಿದೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement