ಡಿಸೆಂಬರ್ 19 ರಿಂದ ಬೆಳಗಾವಿ ಅಧಿವೇಶನ ಆರಂಭ: 6 ಮಸೂದೆಗಳ ಮಂಡನೆ

ಬೆಳಗಾವಿ : ಬೆಳಗಾವಿ ಸುವರ್ಣಸೌಧದಲ್ಲಿವಿಧಾನ ಡಿಸೆಂಬರ್ 19 ರಿಂದ 30 ರವರೆಗೆ 15ನೇ ವಿಧಾನಸಭೆಯ 14ನೇ ಅಧಿವೇಶನ ನಡೆಯಲಿದ್ದು, ವಿಧಾನ ಮಂಡಲದ ವಿಶೇಷ ಅಧಿವೇಶನದ ಸಿದ್ಧತೆಗಳು ಭರದಿಂದ ಸಾಗಿವೆ.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೋಮವಾರ ಸಿದ್ಧತೆಗಳನ್ನು ವೀಕ್ಷಿಸಿ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಈ ಬಾರಿ ಕೋವಿಡ್ ಆರ್ಭಟ ಇಲ್ಲದಿರುವುದರಿಂದ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಆದ್ದರಿಂದ ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ, ಮಸೂದೆ ಅಂಗೀಕಾರ ಸೇರಿದಂತೆ ಕಲಾಪದ ಎಲ್ಲ ಚಟುವಟಿಕೆಗಳು ಯಥಾ ಪ್ರಕಾರ ನಡೆಯಲಿವೆ ಎಂದು ತಿಳಿಸಿದರು.
6 ಮಸೂದೆಗಳನ್ನು ಈ ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ. ಇದರಲ್ಲಿ ಎರಡು ಮಸೂದೆಗಳನ್ನು ಈಗಾಗಲೇ ಮಂಡಿಸಲಾಗಿದ್ದು, ಚರ್ಚಿಸಿ ಅವುಗಳನ್ನು ಅಂಗೀಕರಿಸುವ ಪ್ರಕ್ರಿಯೆ ನಡೆಯಲಿದೆ. ಇದಲ್ಲದೇ ನಾಲ್ಕು ಹೊಸ ವಿಧೇಯಕಗಳು ಬರಲಿವೆ. ಬೇರೆ ಯಾವುದೇ ವಿಧೇಯಕ ಇದ್ದರೆ ಸರ್ಕಾರವು ಅವುಗಳನ್ನು ಮಂಡಿಸಲಿದೆ ಎಂದು ತಿಳಿಸಿದರು.
ಸಮಗ್ರ ಕರ್ನಾಟಕದ ಚರ್ಚೆಯ ಜತೆಗೆ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ವಿಷಯಗಳ ಚರ್ಚೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ಸೂಕ್ತ ದಿನಗಳನ್ನು ನಿಗದಿಪಡಿಸಲಾಗುವುದು ಎಂದರು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಅಧಿವೇಶನದ ಕಲಾಪಗಳಲ್ಲಿ ಸಚಿವರು ಮತ್ತು ಶಾಸಕರು ಕಡ್ಡಾಯವಾಗಿ ಹಾಜರಾಗಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಅನುಮತಿ ಮೇರೆಗೆ ಕಲಾಪಗಳ ಹಾಜರಾತಿಯಿಂದ ವಿನಾಯಿತಿ ಪಡೆಯಬಹುದು. ಸದನದಲ್ಲಿ ಭಾಗವಹಿಸುವುದಿಲ್ಲ ಎಂಬ ಮಾತುಗಳನ್ನು ನಾನು ಒಪ್ಪುವುದಿಲ್ಲ. ಪ್ರಜಾಸಂಸದೀಯ ಪಾವಿತ್ರ್ಯ ಕಾಪಾಡಲು ಎಲ್ಲ ಜನಪ್ರತಿನಿಧಿಗಳು ಸಹಕರಿಸಬೇಕು. ಜನರ ಆಶಯಗಳನ್ನು ಈಡೇರಿಸುವ ಸಂಸದೀಯ ಮಾರ್ಗ ಅಧಿವೇಶನದ ಉದ್ದೇಶವಾಗಿರುತ್ತದೆ. ಆದ್ದರಿಂದ ಜನರ ಭಾವನೆಗಳಿಗೆ ಸ್ಪಂದಿಸಿ ಎಲ್ಲರೂ ಸದನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡರು.
ಅಧಿವೇಶನವನ್ನು ಯಾವುದೇ ರೀತಿಯ ಲೋಪದೋಷಗಳಿಲ್ಲದೇ ಅಚ್ಚುಕಟ್ಟಾಗಿ ನಡೆಸಲು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ಕಳೆದ ಬಾರಿಯ ಅನುಭವದ ಆಧಾರದ ಮೇಲೆ ಉತ್ತಮ ರೀತಿಯಲ್ಲಿ ವಸತಿ, ಊಟೋಪಾಹಾರ, ಸಾರಿಗೆ ಮತ್ತಿತರ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಸಾರ್ವಜನಿಕರಿಗೆ ಕಲಾಪ ವೀಕ್ಷಿಸಲು ಮುಕ್ತ ಅವಕಾಶ ನೀಡಲಾಗುವುದು. ಪ್ರವೇಶದ್ವಾರದ ಬಳಿ ಅಗತ್ಯ ಗುರುತಿನ ಚೀಟಿಯನ್ನು ನೀಡಿ ಪ್ರವೇಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ
ನಾನು ವಿಧಾನಸಭೆ ಅಧ್ಯಕ್ಷರಾದ ಬಳಿಕ ಅತ್ಯುತ್ತಮ ಶಾಸಕರನ್ನು ಆಯ್ಕೆಗೆ ತೀರ್ಮಾನಿಸಲಾಗಿದೆ. ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಲಾಗುವುದು. ಆಯ್ಕೆ ಸಮಿತಿಯು ನೀಡುವ ವರದಿ ಆಧರಿಸಿ ಅತ್ಯುತ್ತಮ ಶಾಸಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಸ್ಪೀಕರ್‌ ಕಾಗೇರಿ ಹೇಳಿದರು.
ಅಧಿವೇಶನ ಹೊರತುಪಡಿಸಿ ಉಳಿದ ಅವಧಿಯಲ್ಲಿ ಸುವರ್ಣ ವಿಧಾನಸೌಧ ಸದ್ಬಳಕೆ ಅಗಬೇಕು. ಇಡೀ ವರ್ಷ ಕಡ್ಡಟದಲ್ಲಿ ಚಟುವಟಿಕೆಗಳು ನಡೆಯಬೇಕು ಎಂಬ ಅಭಿಪ್ರಾಯಗಳಿವೆ. ಶಾಸಕರ ಭವನ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement