ಈ ವರ್ಷದಿಂದಲೇ 5 ಮತ್ತು 8ನೇ ತರಗತಿಗಳಿಗೆ ʼಪಬ್ಲಿಕ್ʼ ಪರೀಕ್ಷೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ

 ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2022-23ನೇ ಸಾಲಿನಿಂದ ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳಲ್ಲಿನ 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ಮಾದರಿಯಲ್ಲಿ ವಾರ್ಷಿಕ ಪರೀಕ್ಷೆ / ಮೌಲ್ಯಾಂಕನ ನಡೆಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ. ಇದರ ಅಲ್ಲದೆ, ವಾರ್ಷಿಕ ಪರೀಕ್ಷೆ /ಮೌಲ್ಯಾಂಕನ ನಿರ್ವಹಣೆಗೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಪರಿಶೀಲನೆಗಾಗಿ ಪ್ರಸಕ್ತ ಸಾಲಿನಿಂದ ಪಬ್ಲಿಕ್ ಪರೀಕ್ಷೆಯ ಮಾದರಿಯಲ್ಲೇ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಶಿಕ್ಷಣ ಹಕ್ಕು ಕಾಯಿದೆ (ಆಟಿಐ) ಪ್ರಕಾರ ಎಂಟನೇ ತರಗತಿಯವರೆಗೆ ಮಕ್ಕಳನ್ನು ಅನುತೀರ್ಣ ಮಾಡುವಂತಿಲ್ಲ ಎಂಬ ನಿಯಮವಿದೆ. ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವಂತಿಲ್ಲ.
ಪ್ರಸಕ್ತ ವರ್ಷದಲ್ಲಿ ಅರ್ಧ ಶೈಕ್ಷಣಿಕ ವರ್ಷ ಪೂರ್ಣಗೊಂಡಿದ್ದು, ಈಗಾಗಲೇ FA-1, FA-2 ಮತ್ತು SA-1 ಪರೀಕ್ಷೆಗಳು ನಡೆದು ಮೌಲ್ಯಾಂಕನವಾಗಿದೆ. ಆದ್ದರಿಂದ ಈ ಶೈಕ್ಷಣಿಕ ವರ್ಷದಲ್ಲಿ ವಾರ್ಷಿಕ ಪರೀಕ್ಷೆ ನಿರ್ವಹಿಸುವ ಬದಲಾಗಿ ಉಳಿದ ಅರ್ಧ ವರ್ಷಕ್ಕೆ ಸೀಮಿತಗೊಳಿಸಿ ಸಾಂಕೇತಿಕವಾಗಿ ನವೆಂಬರ್ -2022 ರಿಂದ ಮಾರ್ಚ್‌-2023ರ ಮೊದಲನೇ ವಾರದ ಒಳಗೆ ಸಂಕಲನಾತ್ಮಕ ಪರೀಕ್ಷೆ-2 ನಿರ್ವಹಿಸಲಾಗುತ್ತಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಪ್ರತಿ ಶಾಲೆಯು SATS ಪ್ರಕಾರ ದಾಖಲಾಗಿರುವ ರಾಜ್ಯ ಪಠ್ಯಕ್ರಮದ ಎಲ್ಲಾ ವಿದ್ಯಾರ್ಥಿಗಳ ಪರೀಕ್ಷೆಗೆ ಆಯಾ ಶಾಲೆಯ ಮುಖ್ಯೋಪಾಧ್ಯಾಯರು SATSನಲ್ಲಿ ನೋಂದಾಯಿಸಿದಂತೆ ದೃಢೀಕರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ವಿದ್ಯಾರ್ಥಿಗಳ ಪಟ್ಟಿ ಸಲ್ಲಿಸಬೇಕಾಗುತ್ತದೆ. ಅದರ ಆಧಾರದ ಮೇಲೆ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಪರೀಕ್ಷೆ ಮತ್ತು ನಿರ್ವಹಣಾ ವೆಚ್ಚವನ್ನು ಸಂಪೂರ್ಣವಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಭರಿಸಲು ಸರ್ಕಾರ ಆದೇಶಿಸಿದೆ.
ಪರೀಕ್ಷೆ ನಡೆಸಲು ಬೇಕಾದ ಅವಶ್ಯಕ ಮೂಲ ಸೌಕರ್ಯಗಳನ್ನು ಆಯಾ ಪರೀಕ್ಷಾ ಕೇಂದ್ರದ ಶಾಲೆಯವರು ನಿರ್ವಹಿಸುವುದು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನಾಗಿ ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರನ್ನು ಹಾಗೂ ಕೊಠಡಿಯ ಮೇಲ್ವಿಚಾರಕರನ್ನಾಗಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಶಿಕ್ಷಕರನ್ನು ಬದಲಾಯಿಸಿ ನೀಯೋಜನೆ ಮಾಡುವುದು ಎಂದು ಸೂಚಿಸಲಾಗಿದೆ.
SATS ನಲ್ಲಿ ನೋಂದಣಿಯಾಗಿರುವ 5 ಮತ್ತು 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಶಾಲಾ ಹಂತದಲ್ಲಿ ಮುಖ್ಯೋಪಾಧ್ಯಾಯರು ಆನ್‌ಲೈನ್‌ನಲ್ಲಿ ಮಾಹಿತಿ ಪಡೆದು ನಂತರ ಪರಿಶೀಲಿಸಿ ಪ್ರವೇಶ ಪತ್ರ ಮುದ್ರಿಸಿ ವಿತರಣೆ ಮಾಡುವುದು ಎಂದು ಸೂಚಿಸಲಾಗಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement