ಚೀನಾದ ಮಾನವರಹಿತ ವೈಮಾನಿಕ ವಾಹನಗಳನ್ನು ಬೆದರಿಸಿದ ಸುಖೋಯ್-30MKI ಫೈಟರ್ ಜೆಟ್; ಇದೆಂದರೆ ಶತ್ರುಗಳಿಗೆ ದುಃಸ್ವಪ್ನ ಯಾಕೆ..? ಮಾಹಿತಿ ಇಲ್ಲಿದೆ

ಹಲವು ದಿನಗಳಿಂದ ಚೀನಾ ಅರುಣಾಚಲದ ತವಾಂಗ್ ನಲ್ಲಿ ಭಾರತೀಯ ಸೈನಿಕರನ್ನು ಕೆರಳಿಸುವ ಕೆಲಸ ಮಾಡುತ್ತಿತ್ತು. ಗಡಿಯಾಚೆಯಿಂದ ಡ್ರೋನ್‌ಗಳನ್ನು ಒಳಗೆ ಕಳುಹಿಸುತ್ತಿತ್ತು. ಇದಕ್ಕೆ ಉತ್ತರಿಸಲು, ಭಾರತವು ತೇಜ್‌ಪುರ ವಾಯುಪಡೆ ನಿಲ್ದಾಣದಿಂದ ಸುಖೋಯ್-30MKI ಫೈಟರ್ ಜೆಟ್‌ಗಳನ್ನು ಬಳಸಿತು. ಭಾರತೀಯ ವಾಯುಪಡೆಯ (ಐಎಎಫ್) ಈ ಯುದ್ಧ ವಿಮಾನಗಳು ಗಡಿ ಪ್ರದೇಶದ ಆಗಸದಲ್ಲಿ ಹಾರಾಟ ಮಾಡಿದ ಕೂಡಲೇ ಚೀನಿಯರು ತಮ್ಮ ಡ್ರೋನ್‌ಗಳನ್ನು ವಾಪಸ್ ಕರೆಸಿಕೊಂಡರು. ಹಾಗಾದರೆ ಚೀನಾ ತನ್ನ ಡ್ರೋನ್‌ಗಳನ್ನು ತಕ್ಷಣವೇ ಹಿಂಪಡೆಯಲು ಕಾರಣವಾದ ಅಂತಹ ಯಾವ ವಿಶೇಷತೆ ಈ ಯುದ್ಧ ವಿಮಾನದಲ್ಲಿದೆ..? ಇದು ಎಂತಹ ಶಕ್ತಿಶಾಲಿ ಯುದ್ಧವಿಮಾನ..? ಇಲ್ಲಿದೆ ಮಾಹಿತಿ..
ಸುಖೋಯ್-30ಎಂಕೆಐ ರಷ್ಯಾದ ಸುಖೋಯ್-27 ಯುದ್ಧ ವಿಮಾನದ ಸುಧಾರಿತ ಆವೃತ್ತಿಯಾಗಿದೆ. ಭಾರತೀಯ ವಾಯುಪಡೆಯು 272 ಇಂತಹ ಸುಖೋಯ್-30 ಎಂಕೆಐಗಳನ್ನು ಹೊಂದಿದೆ. ಅವುಗಳು 2009 ರಿಂದ ತೇಜ್‌ಪುರ್ ಏರ್ ಫೋರ್ಸ್ ಸ್ಟೇಷನ್‌ನಲ್ಲಿವೆ. ವಿವಿಧ ದೇಶಗಳು ತಮ್ಮ ಅವಶ್ಯಕತೆಗೆ ಬೇಕಾದ ರೀತಿಯಲ್ಲಿ ಮಾರ್ಪಡಿಸಿ ಅಳವಡಿಸಿಕೊಳ್ಳುವ ಏಕೈಕ ಫೈಟರ್ ಜೆಟ್ ಇದಾಗಿದೆ. ನಮಗೆ ಬೇಕಾದಂತೆ ಬದಲಾವಣೆಗಳನ್ನು ಮಾಡಿ ನಮ್ಮ ದೇಶದ ಭೌಗೋಳಿಕ ಸ್ಥಾನಕ್ಕೆ ಅನುಗುಣವಾಗಿ ನಾವು ಅದನ್ನು ನಿಯೋಜಿಸಬಹುದಾಗಿದೆ ಎಂದು ಹೇಳಲಾಗುತ್ತದೆ.

ಎಚ್‌ಎಎಲ್‌ನಿಂದ ಭಾರತದಲ್ಲಿ ಸುಖೋಯ್-30MKI ನಿರ್ಮಾಣ...
ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಭಾರತದಲ್ಲಿ ಸುಖೋಯ್-30MKI ಅನ್ನು ತಯಾರಿಸುತ್ತದೆ. ರಷ್ಯಾದ ಸುಖೋಯ್ ಕಾರ್ಪೊರೇಷನ್ 1995ರಲ್ಲಿ ಈ ಯುದ್ಧ ವಿಮಾನವನ್ನು ತಯಾರಿಸಲು ಪ್ರಾರಂಭಿಸಿತು. 1997ರಲ್ಲಿ, ಎಚ್‌ಎಎಲ್‌ (HAL) ಇದರ ನಿರ್ಮಾಣಕ್ಕೆ ಪರವಾನಗಿ ಪಡೆದುಕೊಂಡಿತು ಮತ್ತು ನಮ್ಮ ದೇಶದ ಸೇನಾ ಅಗತ್ಯಗಳಿಗೆ ಅನುಗುಣವಾಗಿ ಯುದ್ಧವಿಮಾನವನ್ನು ಮಾರ್ಪಡಿಸಲು ಪ್ರಾರಂಭಿಸಿತು. ಎಂಕೆಐ (MKI) ಅನ್ನು ರಷ್ಯನ್ ಭಾಷೆಯಲ್ಲಿ (Modernizirovannyi Kommercheskiy Indiski – Modernized Commercial Indian) ಎಂದು ಕರೆಯಲಾಗುತ್ತದೆ.
ಸುಖೋಯ್‌ನ ಉದ್ದ 72 ಅಡಿಗಳಷ್ಟು. ರೆಕ್ಕೆಗಳು 48.3 ಅಡಿಗಳು ವಿಸ್ತಾರವಾಗಿದೆ. ಎತ್ತರ 20.10 ಅಡಿ. ಇದರ ತೂಕ 18,400 ಕೆ.ಜಿ. ಇದು ಲ್ಯುಲ್ಕಾ L-31FP ಆಫ್ಟರ್‌ಬರ್ನಿಂಗ್ ಟರ್ಬೋಫ್ಯಾನ್ ಎಂಬ ಎಂಜಿನ್‌ಗಳಿಂದ ಚಾಲಿತವಾಗಿದೆ, ಇದು 123 ಕಿಲೋನ್ಯೂಟನ್‌ಗಳ ಶಕ್ತಿಯನ್ನು ನೀಡುತ್ತದೆ. ಈ ಎಂಜಿನ್ ಮತ್ತು ಅದರ ವಾಯುಬಲವು ವೈಜ್ಞಾನಿಕ ವಿನ್ಯಾಸದಿಂದಾಗಿ, ಫೈಟರ್ ಜೆಟ್ ಗಂಟೆಗೆ 2120 ಕಿಮೀ ವೇಗದಲ್ಲಿ ಹಾರುವಂತೆ ಮಾಡುತ್ತದೆ. ಇದರ ವ್ಯಾಪ್ತಿ ಕೂಡ 3000 ಕಿಲೋಮೀಟರ್. ಮಧ್ಯದಲ್ಲಿ ಇಂಧನ ತುಂಬಿಸಿದರೆ 8000 ಕಿ.ಮೀ ವರೆಗೆ ಹೋಗಬಹುದು. ಅಲ್ಲದೆ, ಇದು ಸುಮಾರು 57 ಸಾವಿರ ಅಡಿ ಎತ್ತರದವರೆಗೂ ಹಾರಬಲ್ಲದು.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ 3-4 ದಿನ ಮಳೆ ಬೀಳುವ ಮುನ್ಸೂಚನೆ

ಸುಖೋಯ್-30MKIಗೆ 30mm ಗ್ರ್ಯಾಜೆವ್-ಶಿಪುನೋವ್ (Grizhev-Shipunov) ಆಟೋಕಾನನ್ ಗನ್‌ಗಳನ್ನು ಅಳವಡಿಸಲಾಗಿದೆ, ಇದು ಒಂದು ನಿಮಿಷದಲ್ಲಿ 150 ಸುತ್ತುಗಳನ್ನು ಹಾರಿಸುತ್ತದೆ, ಅಂದರೆ ಶತ್ರುಗಳ ವಿಮಾನ, ಡ್ರೋನ್ ಅಥವಾ ಹೆಲಿಕಾಪ್ಟರ್ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಯುದ್ಧ ವಿಮಾನ ವಿವಿಧ ಶಸ್ತ್ರಾಸ್ತ್ರಗಳನ್ನು ಇಡುವ 12 ಹಾರ್ಡ್ ಪಾಯಿಂಟ್‌ಗಳನ್ನು ಹೊಂದಿದೆ. ಇದರಲ್ಲಿ 4 ಬಗೆಯ ರಾಕೆಟ್ ಗಳನ್ನು ಅಳವಡಿಸಬಹುದು. ನಾಲ್ಕು ವಿಧದ ಕ್ಷಿಪಣಿಗಳು ಮತ್ತು 10 ಬಗೆಯ ಬಾಂಬ್‌ಗಳನ್ನು ಬಳಸಬಹುದು. ಅಥವಾ ಇವೆಲ್ಲವುಗಳ ಮಿಶ್ರಣವನ್ನೂ ಇದಕ್ಕೆ ಅನ್ವಯಿಸಬಹುದು ಎಂದು ಹೇಳಲಾಗಿದೆ.

ಬ್ರಹ್ಮೋಸ್ ಮಿಸೈಲ್‌ಗಳನ್ನು ನಿಯೋಜಿಸಬಹುದು
ಸುಖೋಯ್-30ಎಂಕೆಐನ ಹಾರ್ಡ್‌ಪಾಯಿಂಟ್‌ಗಳು ಶಸ್ತ್ರಾಸ್ತ್ರಗಳನ್ನು ಹಾರಿಸಲು ಹೆಚ್ಚಿನ ಸೌಲಭ್ಯವನ್ನು ಹೊಂದಿವೆ. ಬಹು ರ್ಯಾಕ್‌ಗಳನ್ನು ಅಳವಡಿಸಿದರೆ ಅದರಲ್ಲಿ 14 ಶಸ್ತ್ರಾಸ್ತಗಳನ್ನು ಅಳವಡಿಸಬಹುದು. ಇದು ಒಟ್ಟು 8130 ಕೆ.ಜಿ ತೂಕದ ಶಸ್ತ್ರಾಸ್ತ್ರಗಳನ್ನು ಎತ್ತಬಲ್ಲದು. ಈ ಯುದ್ಧ ವಿಮಾನದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನೂ ನಿಯೋಜಿಸಬಹುದಾಗಿದೆ.

4 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement