ಡಿಸೆಂಬರ್‌ 18ರಂದು ಹುಬ್ಬಳ್ಳಿಯಲ್ಲಿ ಶ್ರೀ ಅಜಿತ ಸಾಹಿತ್ಯೋತ್ಸವ ಕಾರ್ಯಕ್ರಮ, 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ : ಭವರಲಾಲ್‌ ಜೈನ್‌

ಹುಬ್ಬಳ್ಳಿ: ಶ್ರೀ ಅಜಿತ್ ಸಾಹಿತ್ಯ ಮಹೋತ್ಸವ ಸಮಿತಿ ಹಾಗೂ ಅರ್ಹಂ ಪರಿವಾರ ಟ್ರಸ್ಟ್ ವತಿಯಿಂದ ಡಿಸೆಂಬರ್‌ 18ರಂದು ಶ್ರೀ ಅಜಿತ ಸಾಹಿತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ ನಡೆಯಲಿರುವ ಭವ್ಯ ಟೆಂಟ್‌ನಲ್ಲಿಯೇ ಮಾಧ್ಯಮದವರಿಗೆ ವಿವರ ನೀಡಿದ ಅಜಿತ ಸಾಹಿತ್ಯೋತ್ಸವ ಸಮಿತಿ ಅಧ್ಯಕ್ಷ ಭವರಲಾಲ್ ಸಿ. ಜೈನ ಅವರು ಮಾತನಾಡಿ, ಜೈನಾಚಾರ್ಯರಾದ ಅಜಿತಶೇಖರ ಸುರೀಶ್ವರ ಅವರು ಕಳೆದ ಒಂದು ದಶಕದಿಂದ ಕರ್ನಾಟಕ ಮತ್ತು ಹುಬ್ಬಳ್ಳಿಯ ಜನರ ಮೇಲೆ ಅತ್ಯಂತ ಸಕಾರಾತ್ಮಕ ಪ್ರಭಾವ ಬೀರಿದ್ದು, ಅವರು ತಮ್ಮ 66 ವರ್ಷಗಳ ಜೀವನದಲ್ಲಿ ಕಳೆದ 45 ವರ್ಷಗಳಿಂದ ಜೈನ ಸನ್ಯಾಸಿಗಳ ಜೀವನ ನಡೆಸುತ್ತಿದ್ದಾರೆ. ಅವರು ಬರವಣಿಗೆಯ ಮೂಲಕ ಜೈನ ಧರ್ಮದ ತಮ್ಮ ಆಲೋಚನೆಗಳು ಮತ್ತು ಬೋಧನೆಗಳನ್ನು ಹರಡುತ್ತಿದ್ದಾರೆ. ಇದುವರೆಗೆ ಅವರು ಹಿಂದಿ, ಇಂಗ್ಲಿಷ್, ಕನ್ನಡ, ಗುಜರಾತಿ, ತೆಲುಗು, ಮರಾಠಿ ಮತ್ತು ತಮಿಳು ಭಾಷೆಗಳಲ್ಲಿ 99 ಪುಸ್ತಕಗಳನ್ನು ಬರೆದಿದ್ದಾರೆಂದರು. ಈ ನಿಟ್ಟಿನಲ್ಲಿ ಜೈನಾಚಾರ್ಯ ಅಜಿತಶೇಖರ ಸುರೀಶ್ವರ ಅವರು ರಚಿಸಿದ ರಿಫ್ರೆಶ್‌ ಯುವರ್ ಮೈಂಡ್ ಎಂಬ 100ನೇ ಕೃತಿಯನ್ನು ಶ್ರೀ ಅಜಿತ ಸಾಹಿತ್ಯೋತ್ಸವದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕುಮಾರಪಾಲಭಾಯಿ ವಿ. ಶಾ ಅವರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ರಾಜ್ಯದ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಸಿ.ಸಿ.ಪಾಟೀಲ, ಮಹಾರಾಷ್ಟ್ರ ಸಚಿವ ಮಂಗಲಪ್ರಭಾತ ಲೋಧಾ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಮೇಯರ್ ಈರೇಶ್ ಅಂಚಟಗೇರಿ, ವಿಆರ್‌ಎಲ್ ಗ್ರೂಪ್ ಅಧ್ಯಕ್ಷ ವಿಜಯ ಸಂಕೇಶ್ವರ್ ಮೊದಲಾದವರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ದಕ್ಷಿಣ ಭಾರತದಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಸುಮಾರು 90 ಸಾವಿರ ಚದರ ಅಡಿ ಮಂಟಪ ನಿರ್ಮಿಸಲಾಗಿದ್ದು ದೇಶದ ವಿವಿಧೆಡೆಯಿಂದ ಸುಮಾರು 8ರಿಂದ 10 ಸಾವಿರ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಭವರಲಾಲ ಜೈನ್‌ ತಿಳಿಸಿದರು.
ಸಮಿತಿಯ ಎಲ್ಲ ಸದಸ್ಯರು ಕಳೆದ ಎರಡು ತಿಂಗಳುಗಳಿಂದ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದು, ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಡಿಸೆಂಬರ್‌ 17ರಂದು ಶನಿವಾರ ಬೆಳಿಗ್ಗೆ ಕೇಶ್ವಾಪುರದ ಮುನೀಶ್ವರ ಮಂದಿರದಿಂದ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಕಾಗೋಷ್ಠಿಯ ವೇಳೆ ಅಜಿತಸುರೀಶ್ವರಜಿ ಮಹಾರಾಜ, ವಿಮಲಬೋಧಿಸುರೀಶ್ವರಜಿ, ಸಾಧು ಮಂತ್ರಶೇಖರಜಿ, ಉತ್ಸವದ ಸಂಚಾಲಕ ತಿಲಕ್ ಕರಮಚಂದ್ ವಿಕ್ಮಶಿ, ಸದಸ್ಯರಾದ ಸಿ.ಎ. ಭರತ್ ಭಂಡಾರಿ, ಸುರೇಶ್ ಧೋಕಾ, ಅಮೃತ್ ಜೈನ್, ಪೂರನ್‌ಕುಮಾರ ನಹತಾ, ಸುರೇಶ್ ಸಿ. ಜೈನ್(ಲಕ್ಕಿ), ವಿನಯ್ ಆರ್. ಶಾ, ವಿಕ್ರಮ್ ಸುರಾನಾ, ಸಂಜಯ್ ಕೊಠಾರಿ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

 

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement