ಬೆಳಗಾವಿಯಲ್ಲಿ ಮಹಾಮೇಳಾವಕ್ಕೆ ಅನುಮತಿ ನಿರಾಕರಿಸಿದ ಜಿಲ್ಲಾಡಳಿತ : ವೇದಿಕೆ, ಪೆಂಡಾಲ್‌ ತೆರವು

ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಮಹಾಮೇಳಾವ್ ಆಚರಿಸಿ ಕನ್ನಡಿಗರ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ನಡೆಗೆ ಈ ಸಲ ಬೆಳಗಾವಿ ಜಿಲ್ಲಾಡಳಿತ ಲಗಾಮು ಹಾಕಿದೆ. ಮಹಾಮೇಳಾವಕ್ಕೆ ಅನುಮತಿ ನಿರಾಕರಿಸಿದೆ.
ಬೆಳಗಾವಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಮೇಳಾವ್ ಆಯೋಜನೆಗೆ ರಾತ್ರೋರಾತ್ರಿ ಹಾಕಿದ್ದ ಪೆಂಡಾಲ್ ಅನ್ನು ಸೋಮವಾರ ಬೆಳಗ್ಗೆ ತೆರವುಗೊಳಿಸಿರುವ ಪೊಲೀಸರು ವ್ಯಾಕ್ಸಿನ್ ಡಿಪೋ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಭಾನುವಾರ ಮಧ್ಯರಾತ್ರಿಯಿಂದಲೇ ಇಲ್ಲಿನ ವ್ಯಾಕ್ಸಿನ್‌ ಡಿಪೋದಲ್ಲಿ ಪೆಂಡಾಲ್‌ ಹಾಕಿ ಮಹಾಮೇಳಕ್ಕೆ ವೇದಿಕೆ ಸಿದ್ಧಪಡಿಸಲಾಗುತ್ತಿತ್ತು. ಆದರೆ ಎಜಿಡಿಪಿ ಅಲೋಕಕುಮಾರ ಅವರು ವೇದಿಕೆ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ನಿಷೇಧಾಜ್ಞೆ ಇದೆ. ಯಾವುದೇ ಕಾರ್ಯಕ್ರಮಕ್ಕೂ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದ ನಂತರ ತೆರವುಗೊಳಿಸಲಾಯಿತು.

ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದ್ದು ಅಲ್ಲಿ ತೀರ್ಮಾನ ಆಗುವವರೆಗೂ ಸುಮ್ಮನಿರಬೇಕು ಎಂದು ಕರ್ನಾಟಕ-ಮಹಾರಾಷ್ಟ್ರ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಈಗಾಗಲೇ ಕೇಂದ್ರ ಸರ್ಕಾರ ಸಲಹೆ ನೀಡಿದ್ದು, ಗಡಿಯಲ್ಲಿ ಸೌಹಾರ್ದತೆ ಕಾಪಾಡಲು ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.
ಎಡಿಜಿಪಿ ಅಲೋಕ್‌ ಕುಮಾರ್, ಪೊಲೀಸ್ ಕಮಿಶನರ್‌ ಡಾ. ಬೋರಲಿಂಗಯ್ಯ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುವ ವೇಳೆ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿಯಲ್ಲಿ ಕ್ಯಾತೆ ತೆಗೆಯುತ್ತ ಬಂದಿದೆ. ಆದರೆ, ಈ ಬಾರಿ ಅಧಿವೇಶನಕ್ಕೂ ಮುನ್ನ ಗಡಿ ವಿಚಾರಕ್ಕೆ ಎರಡು ರಾಜ್ಯಗಳ ನಡುವೆ ಬಿಕ್ಕಟ್ಟು ಉಂಟಾಗಿದ್ದು, ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ತೀರ್ಪು ಬರುವವರೆಗೂ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಸೂಚನೆ ನೀಡಿತ್ತು. ಆದರೆ, ಕೇಂದ್ರದ ಸೂಚನೆಯನ್ನು ಧಿಕ್ಕರಿಸಿ ಎಂಇಎಸ್‌ ಮಹಾಮೇಳಾವ ಆಯೋಜಿಸಲು ಮುಂದಾಗಿತ್ತು.
ಧೈರ್ಯಶೀಲ ಮಾನೆ ಆಗಮನಕ್ಕೂ ಬ್ರೇಕ್‌
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ನೀಡಿದ ಸೂಚನೆಯನ್ನೂ ಮೀರಿ ಮಹಾರಾಷ್ಟ್ರದ ಶಿವಸೇನೆ ಸಂಸದ ಧೈರ್ಯಶೀಲ ಮಾನೆ ಡಿಸೆಂಬರ್‌ 19ರಂದು ಬೆಳಗಾವಿಗೆ ಬರಲು ಮುಂದಾಗಿದ್ದರು. ಆದರೆ, ಅವರ ಪ್ರವೇಶಕ್ಕೆ ಬೆಳಗಾವಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಇವರ ಜೊತೆ ಮಹಾರಾಷ್ಟ್ರದ ಸಚಿವ ಸಂಭುರಜೇ ದೇಸಾಯಿ ಅವರ ಆಗಮನಕ್ಕೂ ಬೆಳಗಾವಿ ಡಿಸಿ ನಿತೇಶ್‌ ಪಾಟೀಲ್‌ ನಿರ್ಬಂಧ ವಿಧಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement