1337.76 ಕೋಟಿ ರೂ.ಗಳಷ್ಟು ದಂಡ ವಿಧಿಸಿದ ಕೇಂದ್ರ ಸ್ಪರ್ಧಾ ಆಯೋಗದ ವಿರುದ್ಧ ಎನ್‌ಸಿಎಲ್‌ಎಟಿ ಮೊರೆ ಹೋದ ಗೂಗಲ್‌

ನವದೆಹಲಿ: 1,337.76 ಕೋಟಿ ರೂ.ಗಳಷ್ಟು ದಂಡ ವಿಧಿಸಿದ ಕೇಂದ್ರ ಸ್ಪರ್ಧಾ ಆಯೋಗದ ವಿರುದ್ಧ ಆಲ್ಫಾಬೆಟ್‌ ಮಾಲೀಕತ್ವದ ಗೂಗಲ್‌ ಕಂಪನಿಯು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಮೊರೆ ಹೋಗಿದ್ದು, ಸಿಸಿಐ ಆದೇಶಕ್ಕೆ ತಡೆ ನೀಡುವಂತೆ ಎನ್‌ಸಿಎಲ್‌ಎಟಿಗೆ ಅರ್ಜಿ ಸಲ್ಲಿಸಿದೆ.
ಮೇಲ್ಮನವಿ ಸಲ್ಲಿಸಲು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಅನ್ನು ಸಂಪರ್ಕಿಸಲಾಗಿದೆ ಎಂದು ಗೂಗಲ್ ಶುಕ್ರವಾರ ಹೇಳಿದೆ.
ಆಂಡ್ರಾಯ್ಡ್‌ ಸಾಧನಗಳಲ್ಲಿ ಸ್ಪರ್ಧಾತ್ಮಕ ವಿರೋಧಿ ಚಟುವಟಿಕೆ ನಡೆಸುತ್ತಿದೆ ಎಂದು ಹೇಳಿರುವ ಭಾರತ ಸರಕಾರದ ಸ್ಪರ್ಧಾತ್ಮಕ ಆಯೋಗ(Competition Commission of India)ವು, ಗೂಗಲ್‌ಗೆ ಭಾರಿ ಪ್ರಮಾಣದ ದಂಡ ವಿಧಿಸಿತ್ತು.
ಸ್ಮಾರ್ಟ್ ಫೋನ್ ಸಾಧನಗಳಿಗೆ ಪರವಾನಗಿ ನೀಡಬಹುದಾದ ಆಪರೇಟಿಂಗ್ ಸಿಸ್ಟಮ್‌ಗಳಿಗಾಗಿ ಮಾರುಕಟ್ಟೆಗಳಲ್ಲಿ ಗೂಗಲ್ ಪ್ರಮುಖ ಸ್ಥಾನದಲ್ಲಿದೆ. ಅಲ್ಲದೆ ಅದು ಗೂಗಲ್ ಪ್ಲೇ ಸ್ಟೋರ್ ನೀತಿಗಳಿಗೆ ವಿರುದ್ಧವಾಗಿ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಸ್ಪರ್ಧಾತ್ಮಕ ಆಯೋಗ ಆರೋಪಿಸಿತ್ತು.

ಆಂಡ್ರಾಯ್ಡ್‌ ಮೊಬೈಲ್‌ಗಳಲ್ಲಿ ಗ್ರಾಹಕರಿಗೆ ಆಯ್ಕೆಯ ಅವಕಾಶ ನೀಡದೆ, ಮೊದಲೇ ಒಂದಿಷ್ಟು ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಡುವುದು ಸೇರಿದಂತೆ ಹಲವು ಸ್ಪರ್ಧಾತ್ಮಕ ವಿರೋಧಿ ಚಟುವಟಿಕೆಯನ್ನು ಗೂಗಲ್‌ ಮಾಡುತ್ತಿದೆ ಎಂದು ಭಾರತ ಸರಕಾರದ ಸ್ಪರ್ಧಾತ್ಮಕ ಆಯೋಗ ತಿಳಿಸಿದೆ. ಅಂತಹ ಆಪ್‌ಗಳನ್ನು ಡಿಲೀಟ್‌ ಮಾಡಲು ಅವಕಾಶ ನೀಡದೆ ಇರುವುದು, ಗೂಗಲ್‌ ಕ್ರೋಮ್‌ ಬ್ರೌಸರ್‌ ಹೊರತುಪಡಿಸಿ ಬೇರೆ ಬ್ರೌಸರ್‌ಗಳ ಬಳಕೆಗೆ ನಿರ್ಬಂಧ ಹೇರುವುದು ಸೇರಿದಂತೆ ಹಲವು ವಿಧದಲ್ಲಿ ಗೂಗಲ್‌ ಕಂಪನಿಯು ಸ್ಪರ್ಧಾತ್ಮಕ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಸಿಸಿಐ ಹೇಳಿತ್ತು.
ಗೂಗಲ್‌ ಕಂಪನಿಗೆ ಭಾರಿ ದಂಡ ವಿಧಿಸಿದ ಕಾಂಪಿಟೇಷನ್‌ ಕಮಿಷನ್‌ ಆಫ್‌ ಇಂಡಿಯಾ(ಸಿಸಿಐ)ವು “ಅನ್ಯಾಯದ ವ್ಯಾಪಾರ ಅಭ್ಯಾಸಗಳನ್ನು ನಿಲ್ಲಿಸಲು ಸಲಹೆ ನೀಡಿತ್ತು. ಗೂಗಲ್‌ ಕಂಪನಿಯು ತನ್ನ ನಡವಳಿಕೆಗಳನ್ನು ಬದಲಿಸಿಕೊಳ್ಳುವಂತೆ ನಿರ್ದೇಶನ ನೀಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಗೂಗಲ್‌, ಆಂಡ್ರಾಯ್ಡ್ ಮತ್ತು ಗೂಗಲ್ ಪ್ಲೇ ಪರಿಸರ ವ್ಯವಸ್ಥೆಯ ಹಲವಾರು ಅಂಶಗಳಿಂದ ಭಾರತೀಯ ಡೆವಲಪರ್‌ಗಳು ಹೆಚ್ಚು ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದೆ. ಭಾರತ ಸರ್ಕಾರದ ನಿರ್ಧಾರದಿಂದ ಭಾರತೀಯ ಗ್ರಾಹಕರಿಗೆ ನಷ್ಟವಾಗಲಿದೆ. ಏನೇ ಇದ್ದರೂ ಗೂಗಲ್‌ ತನ್ನ ಬಳಕೆದಾರರು ಮತ್ತು ಡೆವಲಪರ್‌ಗಳಿಗೆ ಬದ್ಧವಾಗಿದೆ ಎಂದು ಹೇಳಿತ್ತು. ಈಗ ಗೂಗಲ್‌ ಕಂಪನಿಯು ಕೇಂದ್ರ ಸ್ಪರ್ಧಾ ಆಯೋಗದ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಮೊರೆ ಹೋಗಿದೆ.

ಪ್ರಮುಖ ಸುದ್ದಿ :-   ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ...!

3.5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement