ಮುನಿರತ್ನರಿಂದ ಕ್ರಿಮಿನಲ್‌ ಮಾನಹಾನಿ ಮೊಕದ್ದಮೆ : ಕೆಂಪಣ್ಣ ಸೇರಿ 19 ಮಂದಿಗೆ ಜಾಮೀನುರಹಿತ ವಾರೆಂಟ್‌

ಬೆಂಗಳೂರು: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ತೋಟಗಾರಿಕೆ ಮತ್ತು ಯೋಜನಾ ಸಚಿವ ವಿ.ಮುನಿರತ್ನ ಅವರು ಹೂಡಿರುವ ಕ್ರಿಮಿನಲ್‌ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಸೇರಿದಂತೆ 19 ಮಂದಿ ವಿರುದ್ಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಜಾಮೀನುರಹಿತ ವಾರೆಂಟ್‌ ಹೊರಡಿಸಿದೆ.
ವಕೀಲ ವಿವೇಕ ಸುಬ್ಬಾರೆಡ್ಡಿ ಅವರ ಮೂಲಕ ಸಲ್ಲಿಸಿರುವ ಕ್ರಿಮಿನಲ್‌ ಮಾನಹಾನಿ ದಾವೆಯ ವಿಚಾರಣೆ ನಡೆಸಿರುವ 8ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರಾದ ಕೆ. ಎನ್‌. ಶಿವಕುಮಾರ್‌ ಆದೇಶ ಮಾಡಿದ್ದಾರೆ.
ಫಿರ್ಯಾದಿಯಾಗಿರುವ ಸಚಿವ ಮುನಿರತ್ನ ಅವರ ವಿರುದ್ಧ ಪ್ರತಿವಾದಿಗಳಾದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಸೇರಿದಂತೆ ಇತರರು ನೀಡಿದ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಕಟ, ಪ್ರಸಾರವಾಗಿದ್ದು, ಇದು ಫಿರ್ಯಾದಿಯ ವರ್ಚಸ್ಸಿಗೆ ಮೇಲ್ನೋಟಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ಕಳೆದ ವಿಚಾರಣೆಯಲ್ಲಿ ನ್ಯಾಯಾಲಯ ಆದೇಶ ಮಾಡಿತ್ತು.
ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶಿಸಿದ್ದ ನ್ಯಾಯಾಲಯವು ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿತ್ತು. ಗುರುವಾರ ಪ್ರತಿವಾದಿಗಳು ನ್ಯಾಯಾಲಯದ ಆದೇಶ ಪಾಲಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಾಮೀನುರಹಿತ ವಾರೆಂಟ್‌ ಜಾರಿ ಮಾಡಿದೆ. ವಿಚಾರಣೆಯನ್ನು ಜನವರಿ 19ಕ್ಕೆ ಮುಂದೂಡಲಾಗಿದೆ.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement