ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ​ ಜಾರಿ: ರಾಜ್ಯಾದ್ಯಂತ ಈ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ, ಹೊಸ ವರ್ಷಾಚರಣೆಗೆ ರಾತ್ರಿ 1ರ ಗಡುವು

ಬೆಳಗಾವಿ: ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ವೈರಸ್‌ನ ಹೊಸ ತಳಿಯ ಕಾರಣಕ್ಕೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಹಾಗೂ ಆರ್ಥಿಕ ಚಟುವಟಿಕೆಗೆ ಅಡ್ಡಿಯಾಗದಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲೂ ಮಾರ್ಗಸೂಚಿಗಳನ್ನು ಜಾರಿ ಮಾಡಲಾಗಿದೆ.
ಮಾರ್ಗಸೂಚಿಗೆ ಸಂಬಂಧಿಸಿದಂತೆ ಸೋಮವಾರ ನಡೆದ ಸರ್ಕಾರದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಆರೋಗ್ಯ ಸಚಿವ ಸುಧಾಕರ ಮತ್ತು ಕಂದಾಯ ಸಚಿವ ಆರ್‌.ಆಶೋಕ ಹೊಸ ನಿಯಮಗಳನ್ನು ಪ್ರಕಟಿಸಿದರು.
ಹೊಸ ವರ್ಷಾಚರಣೆ ಮಾಡುವವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಉಪಾಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಅಲ್ಲದೆ ಇದೇವೇಳೆ ರಾತ್ರಿ 1 ಗಂಟೆಗೆ ಹೊಸ ವರ್ಷಾಚರಣೆ ಮುಗಿಯಬೇಕು ಎಂದು ಹೇಳಿದ್ದಾರೆ.
ಶಾಲಾ – ಕಾಲೇಜುಗಳಲ್ಲಿ ಸ್ಯಾನಿಟೈಸೇಶನ್ ಹಾಗೂ ಮಕ್ಕಳು ಮಾಸ್ಕ್ ಹಾಕುವುದನ್ನು ಕಡ್ಡಾಯ ಮಾಡಲಾಗಿದೆ. ಈ ಬಗ್ಗೆ ಶಾಲೆಗಳಿಗೆ ಸೂಚನೆ ಕೊಡಲಾಗುವುದು. ಚಿತ್ರಮಂದಿರಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.

ರಾತ್ರಿ 1 ಗಂಟೆ ಒಳಗೆ ವರ್ಷಾಚರಣೆ ಮುಗಿಯಬೇಕು
ಬಾರ್, ಪಬ್ ಗಳಲ್ಲಿ ಸಪ್ಲೈಯರ್ ಹಾಗೂ ಗ್ರಾಹಕರಿಗೆ ಕೋವಿಡ್ ಲಸಿಕೆಯನ್ನು ಎರಡು ಡೋಸ್ ಕಡ್ಡಾಯ ಮಾಡಲಾಗಿದೆ. ಎಷ್ಟು ಟೇಬಲ್, ಕುರ್ಚಿಗಳಿದೆಯೋ ಇದೆಯೋ ಅಷ್ಟೇ ಗ್ರಾಹಕರಿಗೆ ಅವಕಾಶ ನೀಡಬೇಕು. ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುವವರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಹೊಸ ವರ್ಷದಂದು ರೆಸ್ಟೋರೆಂಟ್, ಬಾರ್, ಪಬ್‌ಗಳನ್ನು 1 ಗಂಟೆಗೆ ಬಂದ್ ಮಾಡಬೇಕು. ಈ ನಿಯಮರಾಜ್ಯಾದ್ಯಂತ ಅನ್ವಯ ಆಗಲಿದೆ. ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗಳು ಅನ್ವಯ ಆಗಲಿದೆ ಎಂದರು.
ಪಬ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಲ್ಲಿ ಹೊಸ ವರ್ಷ ಆಚರಿಸುವ ವೇಳೆ ಮಾಸ್ಕ್‌ ಧರಿಸಿರಲೇಬೇಕು. ಹೊಸ ವರ್ಷದ ಆಚರಣೆಗಳು ರಾತ್ರಿ 1ರ ಒಳಗೇ ಅಂತ್ಯವಾಗಬೇಕು. ಸಾರ್ವಜನಿಕವಾಗಿ ವರ್ಷಾಚರಣೆಗೆ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಅವಕಾಶ ಬೇಡ ಎಂದು ನಿರ್ಧರಿಸಲಾಗಿದೆ. ಕೋವಿಡ್‌ ಬಗ್ಗೆ ಯಾರೂ ಭಯಪಡಬೇಕಿಲ್ಲ, ಆದರೆ ಮುನ್ನೆಚ್ಚರಿಕೆ ಬೇಕು ಎಂದು ಹೇಳಿದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ಆಚರಣೆಗಳು ನಡೆಯುವ ಸ್ಥಳಗಳಲ್ಲಿ ಅನುಮತಿಸಲಾದ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಇರಬಾರದು ಎಂದು ಅವರು ತಿಳಿಸಿದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ ಮಾತನಾಡಿ, ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ತಾಂತ್ರಿಕ ಸಮಿತಿ, ವಿಪತ್ತು ನಿರ್ವಹಣಾ ಸಮಿತಿ ಅಧಿಕಾರಿಗಳ ಜೊತೆ ಚರ್ಚೆ‌ ನಡೆಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ರ್ಯಾಂಡಮ್ ಟೆಸ್ಟ್ ಮಾಡಿದ ನಂತರ ರೋಗದ ಲಕ್ಷಣಗಳಿದ್ದರೆ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೋವಿಡ್ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಜಾರಿ ಮಾಡಿದ್ದು, ಅದರಂತೆ ಬೂಸ್ಟರ್ ಡೋಸ್ ಅನ್ನು ತೆಗೆದುಕೊಳ್ಳುವಂತೆ ಜನರಿಗೆ ಪ್ರೇರೇಪಿಸಿ ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

4.5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement