ಜನವರಿ 2ರಿಂದ 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಅಭಿಯಾನ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಳಗಾವಿ: ರಾಜ್ಯ ಬಿಜೆಪಿ ವತಿಯಿಂದ ಜನವರಿ 2ರಿಂದ ಜನವರಿ 12ರ ವರೆಗೆ ‘ಬೂತ್ ವಿಜಯ ಅಭಿಯಾನ’ ಆಯೋಜಿಸಲಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಬೆಳಗಾವಿ ಸುವರ್ಣ ಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಇಂದು, ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 58,156 ಬೂತ್‍ಗಳು, 11,642 ಶಕ್ತಿ ಕೇಂದ್ರಗಳು, 1,445 ಮಹಾ ಶಕ್ತಿ ಕೇಂದ್ರಗಳು, 312 ಮಂಡಲಗಳು, 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಯಲಿದೆ. ರಾಜ್ಯ, ಜಿಲ್ಲೆ, ತಾಲೂಕು ಮಾತ್ರವಲ್ಲದೆ ಎಲ್ಲ ಘಟಕಗಳು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿರುವ ಪಕ್ಷದ ಕಾರ್ಯಕರ್ತರ ಹಾಗೂ ಮತದಾರರ 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಯುವ ಅರ್ಹ ಮತದಾರರನ್ನು ಮತಪಟ್ಟಿಯಲ್ಲಿ ಸೇರಿಸಲಾಗುವುದು, ಪ್ರತಿ ಬೂತ್‍ಗಳಲ್ಲಿ ಶೇ.100 ಮತದಾನ ಆಗುವ ರೀತಿಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. 20 ಲಕ್ಷ ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌: ವೀಡಿಯೊ ನೀಡಿದ್ದು ನಾನೇ ಎಂದಿದ್ದ ಮಾಜಿ ಕಾರು ಚಾಲಕ ಕಾರ್ತಿಕ್ ನಾಪತ್ತೆ...!?

ಪ್ರಧಾನಿಯವರ “ಮನ್ ಕೀ ಬಾತ್” ವೆಬ್ ಲಿಂಕನ್ನು 60 ಸಾವಿರ ಗುಂಪುಗಳು ಡೌನ್‍ಲೋಡ್ ಮಾಡಿಸುವಂತೆ ಪ್ರೇರೇಪಿಸಿ ಕಾರ್ಯಾನುಷ್ಠಾನ ಮಾಡಲಾಗುವುದು. ಪ್ರತಿ ಬೂತ್‍ನಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಸಭೆ ಮಾಡಲಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನಕುಮಾರ ಕಟೀಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಲ್ಲ ಸಚಿವರು, ಬಿಜೆಪಿಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ, ಜಿಲ್ಲೆ, ಮಂಡಲ ಪದಾಧಿಕಾರಿಗಳು ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.

ಈ ಅಭಿಯಾನದ ಯಶಸ್ಸಿಗಾಗಿ ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದೆ. ಸಂಚಾಲಕರಾಗಿ ಕೋಟ ಶ್ರೀನಿವಾಸ ಪೂಜಾರಿ, ಸಹ ಸಂಚಾಲಕರಾಗಿ ಮಹೇಶ ಟೆಂಗಿನಕಾಯಿ, ಸದಸ್ಯರಾಗಿ ಹೇಮಲತಾ ನಾಯಕ್, ಅರುಣ ಶಹಾಪುರ, ರಾಜೇಂದ್ರ ಮೈಸೂರು, ಕೇಶವ ಪ್ರಸಾದ ಅವರನ್ನು ನೇಮಿಸಿದ್ದಾರೆ. ಅಭಿಯಾನದ ಮೂಲಕ ರಾಜ್ಯದಲ್ಲಿ ಸಂಘಟನೆ ಬಲಪಡಿಸಲಿದ್ದೇವೆ. ಇದು ಬಿಜೆಪಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಬಿಜೆಪಿ ಕೇವಲ ಚುನಾವಣೆ ಬಂದಾಗ ಸಕ್ರಿಯವಾಗುವ ಪಕ್ಷವಲ್ಲ; ಅದು ನಿರಂತರ ಚಟುವಟಿಕೆಯಿಂದ ಕೂಡಿರುವ ಪಕ್ಷ. ಕಳೆದ ಎರಡು ಚುನಾವಣೆಗಳಿಂದ ಪೇಜ್ ಪ್ರಮುಖರನ್ನು ನಿಯೋಜಿಸಿ ಕಾರ್ಯ ಮಾಡಿದ್ದು, ಈ ಬಾರಿ ಅದಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ. ಬಹುದೊಡ್ಡ ಅಭಿಯಾನ ಇದಾಗಲಿದೆ ಎಂದು ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ, ರಾಜ್ಯ ವಕ್ತಾರ ಮತ್ತು ಶಾಸಕ ಪಿ.ರಾಜೀವ, ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಮುಖ ಸುದ್ದಿ :-   ರಾಜ್ಯದ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement