ಬೆಂಗಳೂರು: ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂಬ ಲಿಂಗಾಯತ ಪಂಚಮಸಾಲಿ ಸಮುದಾಯ ಹಾಗೂ ಒಕ್ಕಲಿಗರ ಬೇಡಿಕೆಗೆ ಮನ್ನಣೆ ನೀಡಿರುವ ಸರ್ಕಾರ, ಈ ಎರಡೂ ಸಮುದಾಯಗಳಿಗೆ ಈಗ ಹೊಸ ಪ್ರವರ್ಗವನ್ನೇ ಸೃಷ್ಟಿಸಿದೆ.
ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳ (EWS) ಮೀಸಲಾತಿ ಪ್ರಮಾಣದಲ್ಲಿನ ಶೇ6 ಅಥವಾ 7ರಷ್ಟು ಮೀಸಲಾತಿಯನ್ನು ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತ ಸುಮದಾಯ, ಒಕ್ಕಲಿಗರಿಗೆ ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.
ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ, ಎರಡು ಪ್ರಬಲ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳ (EWS) ಶೇ 10 ಮೀಸಲಾತಿಯನ್ನು ವಿಭಜಿಸಿ ಹಂಚಿಕೆ ಮಾಡುವುದಕ್ಕೂ ಮೊದಲು ಯಾವುದೇ ಮೀಸಲಾತಿ ವರ್ಗದಲ್ಲಿ ಇಲ್ಲದ ಬ್ರಾಹ್ಮಣ, ವೈಶ್ಯ, ಜೈನ, ನಾಯರ್, ಮೊದಲಿಯಾರ್ ವರ್ಗದ ಜನಸಂಖ್ಯೆಯಲ್ಲಿ ಮೀಸಲಾತಿಗೆ ಅರ್ಹರಿರುವ ಆರೀಕವಾಗಿ ಬಡವರಾಗಿರುವವರ ಸಂಖ್ಯೆಯ ಅಧ್ಯಯನ ನಡೆಸಲಾಗುವುದು. ಎರಡು ತಿಂಗಳಲ್ಲಿ ವರದಿ ಪಡೆದು ಹಂಚಿಕೆಯನ್ನು ನಿರ್ಧರಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳ (EWS) ಶೇ. 10 ಮೀಸಲಾತಿಯನ್ನು ವಿಭಜಿಸಿ ಶೇ 4ನ್ನು ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಹಾಗೂ ಶೇ 3 ನ್ನು ಒಕ್ಕಲಿಗ ಸಮುದಾಯಕ್ಕೆ ಮತ್ತು ಉಳಿದ ಶೇ 3ರನ್ನು ಕೇಂದ್ರದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಜಾತಿ ಪಟ್ಟಿಯಲ್ಲಿ ಇಲ್ಲದ ಆರ್ಥಿಕವಾಗಿ ದುರ್ಬಲ ವರ್ಗದ ಸಮುದಾಯಕ್ಕೆ ನೀಡಲು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಮೀಸಲಾತಿ ಎರಡು ಪ್ರವರ್ಗ ರಚನೆ ಮಾಡಿದ್ದು, ‘ಪ್ರವರ್ಗ 3 ಎ’ನಲ್ಲಿದ್ದ ಒಕ್ಕಲಿಗ ಸಮುದಾಯವನ್ನು ಹೊಸದಾಗಿ ರೂಪಿಸಿರುವ ‘2 ಸಿ’ ಪ್ರವರ್ಗದಡಿ ತರಲಾಗಿದೆ. 3(B)ಯಲ್ಲಿದ್ದ ಲಿಂಗಾಯತರನ್ನು 2(D) ಪ್ರವರ್ಗಕ್ಕೆ ತರಲಾಗಿದೆ.
ರಾಜ್ಯ ಸರ್ಕಾರ ಮೇಲ್ವರ್ಗದ ಬಡವರ ಸಂಖ್ಯೆಯ ಸಮೀಕ್ಷೆ ನಡೆಸಿ ಅದಕ್ಕೆ ತಕ್ಕಂತೆ ಮೀಸಲಾತಿ ಕೊಟ್ಟು, ಶೇ.10ರಲ್ಲಿ ಉಳಿದುಕೊಳ್ಳುವ ಹೆಚ್ಚುವರಿ ಮೀಸಲಾತಿ ಪ್ರಮಾಣವನ್ನು ಹಿಂದುಳಿದ 2ಸಿ ಮತ್ತು 2ಡಿ ಪ್ರವರ್ಗಗಳಿಗೆ ಹಂಚುವ ಆಲೋಚನೆ ಮಾಡಿದೆ. ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಮೀಸಲಾತಿ ಪ್ರಮಾಣ ಯಾರಿಗೆ ಎಷ್ಟು ಎಂಬುದನ್ನುಸರ್ಕಾರ ಸ್ಪಷ್ಟವಾಗಿ ತಿಳಿಸಿಲ್ಲ. ಹಾಗೂ ಪಂಚಮಸಾಲಿ ಸಮುದಾಯಕ್ಕೆ ಇಂತಿಷ್ಟೇ ಮೀಸಲಾತಿ ಎಂಬುದರ ಬಗ್ಗೆಯೂ ಸ್ಪಷ್ಟ ಮಾಹಿತಿ ಕೊಟ್ಟಿಲ್ಲ
ನಿಮ್ಮ ಕಾಮೆಂಟ್ ಬರೆಯಿರಿ