ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಖಾಸಗಿ ಬಸ್: ಹೊಸ ವರ್ಷದ ಬಟ್ಟೆ ಖರೀದಿಗೆ ತಂದೆಯೊಂದಿಗೆ ಹೊರಟಿದ್ದ ಬಾಲಕಿ ಸಾವು

ಕಾರವಾರ: ಸ್ಕೂಟಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟು ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಬಿಣಗಾ ಬಳಿ ಶನಿವಾರ ನಡೆದಿದೆ.
ಬಿಣಗಾದ ಲವಿಟಾ ಜಾರ್ಜ್ ಫರ್ನಾಂಡೀಸ್ (೧೩) ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಬಾಲಕಿ ತಂದೆ ಜಾರ್ಜ್ ಫರ್ನಾಂಡೀಸ್ (೪೧) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸ ವರ್ಷದ ಹಿನ್ನಲೆಯಲ್ಲಿ ಬಟ್ಟೆ ಖರೀದಿಗೆಂದು ಸ್ಕೂಟಿ ಮೇಲೆ ಕಾರವಾರ ನಗರಕ್ಕೆ ತೆರಳಲು ಮುಖ್ಯ ರಸ್ತೆ ದಾಟಿ ಮುಂದೆ ಚಲಿಸುತ್ತಿದ್ದಾಗ ಬೆಂಗಳೂರಿನಿಂದ ಕಾರವಾರಕ್ಕೆ ವೇಗವಾಗಿ ಬರುತ್ತಿದ್ದ ಸೀಬರ್ಡ್ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಾಲಕಿಯ ತಲೆ ರಸ್ತೆಗೆ ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಂಭೀರ ಗಾಯಗೊಂಡಿದ್ದ ಬಾಲಕಿ ತಂದೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಕೆಲಕಾಲ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಅರೆಬರೆ ಕಾಮಗಾರಿ ಮುಗಿದ ಬಗ್ಗೆ ಅರಿವಿದ್ದರೂ ಬಸ್‌ ಚಾಲಕರು ವೇಗವಾಗಿ ಚಲಿಸುತ್ತಾರೆ. ಇದರಿಂದ ಈ ಭಾಗದಲ್ಲಿ ಪದೇ ಪದೇ ಅಪಘಾತವಾಗುತ್ತಿದೆ. ಈಗ ಬಾಳಿ ಬದುಕಬೇಕಾದ ಬಾಲಕಿ ಸಾವಿಗೀಡಾಗಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಅಲ್ಲದೆ ಸೀಬರ್ಡ್ ಬಸ್ ಮಾಲಕರು ಸ್ಥಳಕ್ಕೆ ಆಗಮಿಸಿ ಅಪಘಾತಗೊಂಡ ಜಾರ್ಜ್ ಫರ್ನಾಂಡಿಸ್ ಅವರಿಗೆ ಸೂಕ್ತ ಚಿಕತ್ಸೆ ಕೊಡಿಸಬೇಕು. ಹಾಗೂ ಮೃತ ಬಾಲಕಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಅವರು ಪ್ರತಿಭಟನಾಕಾರರ ಮನವೊಲಿಸಿ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂದೆ ಪಡೆಯಲಾಗಿದೆ.

ಪ್ರಮುಖ ಸುದ್ದಿ :-   ಕೊನೆಗೂ 44 ನಿಗಮ/ಮಂಡಳಿಗಳಿಗೆ ಅಧ್ಯಕ್ಷರ ನೇಮಕ : ಯಾರಿಗೆ ಯಾವ ನಿಗಮ ಮಂಡಳಿ; ಪಟ್ಟಿ ಇಲ್ಲಿದೆ..

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement