ವಿಜಯಪುರ : ನಡೆದಾಡುವ ದೇವರು ಎಂದೇ ಕರೆಯಲ್ಡುತ್ತಿದ್ದ ಖ್ಯಾತ ಪ್ರವಚನಕಾರ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (82) ಸೋಮವಾರ ಸಂಜೆ 6.05 ಕ್ಕೆ ದೈವಾಧೀನರಾದರು. ಸಿದ್ದೇಶ್ವರ ಶ್ರೀಗಳ ಆಶಯದಂತೆ ಇಂದು, ಮಂಗಳವಾರ ಸಂಜೆ ಜ್ಞಾನಯೋಗಾಶ್ರಮದ ಆವರಣದಲ್ಲೇ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ.
ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಏರುಪೇರಾದ ನಂತರ ಶ್ರೀಗಳ ಇಚ್ಛೆಯಂತೆ ಅವರಿಗೆ ಆಶ್ರಮದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು.
ಶ್ರೀಗಳ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಸರ್ಕಾರಿ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಜಿಲ್ಲಾಡಳಿತವು ಪೂಜ್ಯರ ಪಾರ್ಥಿವ ಶರೀರವನ್ನು ಸೈನಿಕ ಶಾಲೆಯಲ್ಲಿ ಇಡಲಾಗಿದ್ದು, ಸಾರ್ವಜನಿಕರಿಗೆ ಶ್ರೀಗಳ ಅಂತಿಮ ದರ್ಶನವನ್ನು ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ.
ಭಕ್ತಾದಿಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸೈನಿಕ ಶಾಲೆಯ ಎದುರುಗಡೆ ಇರುವ ನೇತಾಜಿ ಸುಭಾಶ್ಚಂದ್ರ ಬೋಸ್ ರಸ್ತೆಯ ಮೂಲಕ ನಡೆದುಕೊಂಡು ಸೈನಿಕ ಶಾಲೆಯ ಮುಖ್ಯ ದ್ವಾರದ ಮೂಲಕ ಪ್ರವೇಶಿಸಬೇಕು.
. ಭಕ್ತರು ಕಣ್ಣೀರು ಸುರಿಸಿ ಶ್ರೀಗಳ ಅಗಲಿಕೆಗೆ ನೋವು ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ, ಹೊರರಾಜ್ಯದಿಂದಲೂ ಲಕ್ಷಲಕ್ಷ ಸಂಖ್ಯೆಯಲ್ಲಿ ಭಕ್ತರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಸಕಲ ಸರ್ಕಾರಿ ಗೌರವ ಸಲ್ಲಿಕೆ ಆಗಲಿದೆ. ಸೈನಿಕ ಶಾಲೆ ಆವರಣದಿಂದ ಆಶ್ರಮಕ್ಕೆ ದೇಹ ರವಾನಿಸಲಾಗುತ್ತದೆ. ನಂತರ ಸಂಜೆ 5 ಗಂಟೆಗೆ ಜ್ಞಾನಯೋಗಾಶ್ರಮದ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತ್ಯಕ್ರಿಯೆ ವೇಳೆಯಲ್ಲಿ ಭಾಗಿಯಾಗಲಿದ್ದಾರೆ. ಶ್ರೀಗಳು ಬರೆದಿಟ್ಟಿದ್ದ ವಿಲ್‌ನಂತೆ ಅಂತ್ಯಕ್ರಿಯೆ ನಡೆಯಲಿದ್ದು, ಹೂಳುವ ಬದಲು, ಯಾವುದೇ ವಿಧಿ ವಿಧಾನ ಇಲ್ಲದೆ ತಮ್ಮ ದೇಹಕ್ಕೆ ಅಗ್ನಿಸ್ಪರ್ಷ ಮಾಡುವಂತೆ 2014ರಲ್ಲೇ ಪತ್ರ ಬರೆದಿದ್ದಾರೆ. ಹಾಗೂ ತಮಗೆ ಯಾವುದೇ ಸ್ಮಾರಕ ನಿರ್ಮಿಸಬಾರದು ಎಂದು ಸೂಚಿಸಿದ್ದಾರೆ.
ಇಂದು ಮಂಗಳವಾರ ಬೆಳಗ್ಗೆ 11:30 ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳಿ ಅಂತಿಮ ದರ್ಶನದಲ್ಲಿ ಭಾಗಿಯಾಗಲಿದ್ದಾರೆ.
ಕಿಸೆಯಿಲ್ಲದ ಸಂತ…ಪ್ರಶಸ್ತಿ-ಪುರಸ್ಕಾರಗಳಿಂದ ದೂರ ದೂರ…
ಮಹಾನ್ ‘ಜ್ಞಾನಯೋಗಿ’, ತತ್ವಜ್ಞಾನಿ, ‘ಕಿಸೆ’ಯಿಲ್ಲದ ಶ್ವೇತ ವಸ್ತ್ರಧಾರಿ ಸಂತರಾಗಿದ್ದ ಸಿದ್ಧೇಶ್ವರ ಶ್ರೀಗಳು ಎಂಬ ಜ್ಞಾನ ಮತ್ತು ಯೋಗದ ಸಂಗಮವಾಗಿದ್ದರು.
ವಿಜಯಪುರ ಜಿಲ್ಲೆ ತಿಕೋಟಾ ತಾಲ್ಲೂಕಿನ ಬಿಜ್ಜರಗಿಯಲ್ಲಿ 1940ರ ಸೆಪ್ಟೆಂಬರ್ 5 ರಂದು ಕೃಷಿಕರಾದ ಓಗೆಪ್ಪ ಗೌಡ ಬಿರಾದಾರ, ಸಂಗವ್ವ ದಂಪತಿಯ ಆರು ಜನ ಮಕ್ಕಳಲ್ಲಿ ಹಿರಿಯರು. ಸಿದಗೊಂಡ ಓಗೆಪ್ಪ ಬಿರಾದಾರ ಅವರ ಪೂರ್ವಾಶ್ರಮದ ಹೆಸರು.
ಬಿಜ್ಜರಗಿಯ ಸರ್ಕಾರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆ ಯಲ್ಲಿ ಏಳನೇ ತರಗತಿಯವರೆಗೆ ಅಭ್ಯಾಸ. ವಿಜಯಪುರದ ಎಸ್.ಎಸ್. ಪ್ರೌಢಶಾಲೆಯಲ್ಲಿ 8ನೇ ತರಗತಿ, ನಂತರ ಚಡಚಣದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ ಕಲಿಕೆ, ವಿಜಯಪುರದ ವಿಜಯ ಕಾಲೇಜಿನಲ್ಲಿ ಪಿಯುಸಿ ಓದು ಮುಗಿಸಿದ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ನಂತರ ಮಹಾರಾಷ್ಟ್ರದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ವಿಜಯಪುರ ಜ್ಞಾನಯೋಗಾಶ್ರಮದ ಸಂಸ್ಥಾಪಕರಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರವಚನ ಕೇಳಿ ಆಕರ್ಷಿತರಾದ ಸಿದ್ಧೇಶ್ವರ ಶ್ರೀಗಳು, ಮುಂದೆ ಅದೇ ಆಶ್ರಮದ ಮುಖ್ಯಸ್ಥರಾದರು. ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಜ್ಞಾನಿಗಳು. ಅವರು ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಸಿದ್ಧೇಶ್ವರ ಸ್ವಾಮೀಜಿ, ಜ್ಞಾನಯೋಗಿಗಳಾಗಿದ್ದರು. ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಸ್ವಾಮೀಜಿ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಜನಮಾನಸದಲ್ಲಿ ಮಹತ್ವ ಪಡೆಯಿತು.
ಸಿದ್ಧೇಶ್ವರ ಸಾಮೀಜಿಗಳು ತಾವು ಅಧ್ಯಯನ ಮಾಡಿದ ಉಪನಿಷತ್ತುಗಳು, ಭಗವದ್ಗೀತೆ, ಯೋಗಸೂತ್ರ, ವಚನಶಾಸ್ತ್ರಗಳ ಜ್ಞಾನವನ್ನು ಪ್ರವಚನಗಳ ಮೂಲಕ ಜನಸಾಮಾನ್ಯರಿಗೆ ಉಣಬಡಿಸಿದರು. ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಹಾಗೂ ಮನಮುಟ್ಟುವಂತೆ ವಿವರಿಸುವುದು ಅವರ ಶ್ರೇಷ್ಠತೆಯಾಗಿತ್ತು.
ಶ್ವೇತವಸ್ತ್ರಧಾರಿ:
ಸದಾಕಾಲ ಶ್ವೇತವಸ್ತ್ರಧಾರಿಯಾಗಿರುತ್ತಿದ್ದ ಸಿದ್ಧೇಶ್ವರ ಶ್ರೀಗಳು ತಮ್ಮ ಹಣ, ಅಧಿಕಾರ, ಕೀರ್ತಿ, ಇದಯಾವುದೂ ತಮ್ಮ ಸುಳಿಯಯಲು ಬಿಡಲಿಲ್ಲ. ಅವರ ಅಂಗಿಗೆ ‘ಕಿಸೆ’ಯೇ ಇರಲಿಲ್ಲ. ಅವರ ಪ್ರವಚನಕ್ಕೆ ಬೆಳ್ಳಂಬೆಳಿಗ್ಗೆಯೇ ಧರ್ಮ, ಜಾತಿ ಭೇದವಿಲ್ಲದೇ ಸಹಸ್ರಾರು ಜನರು ನೆರೆಯುತ್ತಿದ್ದರು. ಜೊತೆಗೆ ನಿಶ್ಶಬ್ದ. ಭಕ್ತರು ಅಷ್ಟೊಂದು ಏಕಾಗ್ರತೆಯಿದ ಪ್ರವಚನ ಆಲಿಸುತ್ತಿದ್ದರು. ಸಕಾರಾತ್ಮಕ ಚಿಂತನೆಯೇ ಪ್ರವಚನದ ಸಾರವಾಗಿತ್ತು.
ಸಿದ್ಧಾಂತ ಶಿಖಾಮಣಿ, ಭಗವದ್ಗೀತೆಯನ್ನು ಕನ್ನಡಕ್ಕೆ ಸರಳೀಕರಿಸಿ, ಅನುವಾದ ಮಾಡಿದ್ದರು. ಅವರ ಪ್ರವಚನದ ನೂರಾರು ಪುಸ್ತಕಗಳು ಪ್ರಕಟವಾಗಿವೆ. ಆದರೆ, ತಾವು ಬದುಕಿರುವವರೆಗೂ ತಮ್ಮ ಬಗ್ಗೆ ಯಾರೊಬ್ಬರೂ ಬರೆಯಲು ಅವಕಾಶವನ್ನು ನೀಡಿರಲಿಲ್ಲ.
ಪ್ರಶಸ್ತಿ, ಪುರಸ್ಕಾರಗಳಿಂದ ದೂರ
ಸಿದ್ಧೇಶ್ವರ ಶ್ರೀಗಳು ತಮ್ಮ ನುಡಿದಂತೆ ನಡೆದವರು. ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಭಕ್ತರು ಹೂವು, ಫಲ ತಾಂಬೂಲ, ಕಾಣಿಕೆ ನೀಡಿದರೂ ಅವರು ಸ್ವೀಕರಿಸುತ್ತಿರಲಿಲ್ಲ. 2019ರಲ್ಲಿ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಗೌರವ ‘ಪದ್ಮಶ್ರೀ’ ಪ್ರಶಸ್ತಿಗೆ ಆಯ್ಕೆಯಾದಾಗ, ‘ನಾನೊಬ್ಬ ಸರಳ ಸನ್ಯಾಸಿ, ಪ್ರಶಸ್ತಿ, ಪುರಸ್ಕಾರಗಳ ಅಗತ್ಯ ನನಗಿಲ್ಲ’ ಎಂದು ವಿನಮ್ರರಾಗಿ ನಿರಾಕರಿಸಿದ್ದರು.
ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಕಟಿಸಿದಾಗಲೂ ಅದನ್ನೂ ಸ್ವೀಕರಿಸಲಿಲ್ಲ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಆಶ್ರಮದ ಅಭಿವೃದ್ಧಿಗಾಗಿ ₹25 ಲಕ್ಷ ಅನುದಾನ ನೀಡಿದಾಗಲೂ ಸ್ವೀಕರಿಸಲಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ