ಸಿದ್ದೇಶ್ವರ ಶ್ರೀಗಳು’ 2014ರಲ್ಲಿ ಬರೆದಿದ್ದ ಅಂತಿಮ ಅಭಿವಂದನ ಪತ್ರ (ವಿಲ್)ದಲ್ಲಿ ಏನಿದೆ ?

ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತರ ಸಾಗರವೇ ಹರಿದು ಬರುತ್ತಿದೆ. ಮಂಗಳವಾರ ಬೆಳಗ್ಗೆಯಿಂದ ವಿಜಯಪುರ ಶೈನಿಕ ಶಾಲೆಯಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5 ಗಂಟೆ ನಂತರ ಆಶ್ರಮದ ಆವರಣದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲು ಸರಕಾರ ಸಿದ್ಧತೆ ಕೈಗೊಂಡಿದೆ.
ಸಿದ್ಧೇಶ್ವರ ಸ್ವಾಮೀಜಿ ಅವರು 2014ರಲ್ಲಿ ಬರೆಸಿದ್ದ ಅಂತಿಮ ಅಭಿವಂದನ ಪತ್ರದ (ವಿಲ್‌) ನಲ್ಲಿ ಈ ಸಾಲುಗಳಿವೆ.
೧. ಬದುಕು ಅನುಭವಗಳ ಪ್ರವಾಹ.
೨. ಅದರ ಸಿರಿವಂತಿಕೆಯು ವಿಶ್ವ ಚಿಂತನೆ ಹಾಗೂ ಸತ್ಯ ಶೋಧನೆಗಳಿಂದ. ಅದರ ಸೌಂದರ್ಯವು ರಾಗ, ದ್ವೇಷ ರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ.
೩. ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ ಸಾಧನೆ.
೪. ಅಂತಹ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ಧರ್ಮ. ಅದು ಸ್ವ-ಪರ ನೆಮ್ಮದಿಗೆ ಕಾರಣ.
೫. ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು.
೬. ಅದನ್ನು ರೂಪಿಸಿದವರು ಗುರುದೇವರು. ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸಹ- ಹೃದಯರು, ಸಾಧಕರು ಹಾಗೂ ಶ್ರೀ ಸಾಮಾನ್ಯರು.
೭. ನಿಸರ್ಗವು ಮೈಮನಸ್ಸುಗಳಿಗೆ ತಂಪನ್ನಿತ್ತಿದೆ. ತಾತ್ವಿಕ ಚಿಂತನೆಗಳು ತಿಳಿ ಬೆಳಗ ಹರಡಿವೆ. ಜಾಗತಿಕ ತತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಠಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ.
೮. ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ ಉಪಕೃತ.
೯. ಬದುಕು ಮುಗಿಯುತ್ತಿದೆ. ದೀಪ ಆರಿದಂತೆ. ತೆರೆ ಅಡಗಿದಂತೆ. ಮೇಘ ಕರಗಿದಂತೆ.
೧೦. ಉಳಿಯುವುದು ಬರೀ ಬಯಲು. ಮಹಾಮೌನ, ಶೂನ್ಯ ಸತ್ಯ.
೧೧. ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ; ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು. ಅದಕ್ಕಾಗಿ ಈ ಅಂತಿಮ ಅಭಿವಂದನ ಪತ್ರ.
ದೇಹದ ವಿಷಯದಲ್ಲಿ ಒಂದೆರೆಡು ಆಶಯಗಳು:
೧. ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯರ್ಪಿತ ಮಾಡುವುದು
೨. ಶ್ರಾದ್ಧಿಕ ವಿಧಿ- ವಿಧಾನಗಳು ಅನಗತ್ಯ
೩. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು
೪. ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು.
ಅಂತಿಮ ನೆನಹು:
೧. ಸತ್ಯವೂ ಇಲ್ಲ, ಅಸತ್ಯವೂ ಇಲ್ಲ.
ಸಹಜವೂ ಇಲ್ಲ, ಅಸಹಜವೂ ಇಲ್ಲ.
ನಾನೂ ಇಲ್ಲ, ನೀನೂ ಇಲ್ಲ.
ಇಲ್ಲ, ಇಲ್ಲ ಎಂಬುದು ತಾನಿಲ್ಲ.
ಗುಹೇಶ್ವರನೆಂಬುದು ತಾ ಬಯಲು.
೨. ಅಂತ್ಯ ಪ್ರಣಾಮಾಂಜಲಿ !’

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement