ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಸ್ತಂಗತ: ಶ್ರೀಗಳ ಜೊತೆಗಿನ ಫೋಟೋ ಹಂಚಿಕೊಂಡು ಕಂಬನಿ ಮಿಡಿದ ಪ್ರಧಾನಿ ಮೋದಿ

ವಿಜಯಪುರ: ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಸೋಮವಾರ ಸಂಜೆ 6 ಗಂಟೆಗೆ ನಿಧನಾಗಿದ್ದಾರೆ. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ 3 ಗಂಟೆ ವರೆಗೆ ವಿಜಯಪುರದ ಸೈನಿಕ್ ಸ್ಕೂಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಕಳೆದ ಬಾರಿ ಕರ್ನಾಟಕ ಭೇಟಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿದ್ದೇಶ್ವರ ಶ್ರೀಗಳ ಭೇಟಿ ಮಾಡಿದ್ದರು. ಈ ವೇಳೆಯ ಫೋಟೋಗಳನ್ನು ಮೋದಿ ಹಂಚಿಕೊಂಡಿದ್ದಾರೆ.
ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಸಮಾಜಕ್ಕೆ ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಸ್ಮರಣೀಯರು. ಅವರು ಇತರರ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ ಸಂತ. ಅಪಾರ ಪಾಂಡಿತ್ಯದಿಂದಲೇ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ನೋವಿನ ಸಂದರ್ಭದಲ್ಲಿ ನನ್ನ ಸಂತಾಪಗಳು ಸಿದ್ದೇಶ್ವರ ಶ್ರೀಗಳ ಅಸಂಖ್ಯಾತ ಭಕ್ತರೊಂದಿಗಿದೆ. ಓಂ ಶಾಂತಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮೋದಿ ಟ್ವೀಟ್ ಮಾಡಿದ್ದಾರೆ.

ಭಾರತ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿಗೆ 2018ರಲ್ಲಿ ನರೇಂದ್ರ ಮೋದಿ ಸರ್ಕಾರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿ ಹೆಸರು ಘೋಷಿಸಿತ್ತು. ಆದರೆ ಸಿದ್ದೇಶ್ವರ ಸ್ವಾಮೀಜಿ ಅದನ್ನು ವಿನಮ್ರವಾಗಿ ನಿರಾಕರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಅವರು, ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ಅಪಾರ ಗೌರವವಿದೆ. ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು. ಆದರೆ ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ನನ್ನ ಉದ್ದೇಶ. ಎಲ್ಲ ಗೌರವಾದರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ಅನ್ಯಥಾ ಭಾವಿಸಬೇಡಿ ಎಂದು ಹೇಳಿ ಪ್ರಶಸ್ತಿಯನ್ನು ವಿಮ್ರವಾಗಿ ನಿರಾಕರಿಸಿದ್ದರು.

ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ತತ್ವಜ್ಞಾನಿ, ಅಧ್ಯಾತ್ಮ ಚಿಂತಕ ಪ್ರಪಂಚದಾದ್ಯಂತ ಸಾವಿರಾರು ಆಧ್ಯಾತ್ಮಿಕ ಪ್ರವಚನಗಳನ್ನು ನೀಡಿದ್ದಾರೆ. ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಭಾರತದ ಸಂತರು ಮತ್ತು ಅಧ್ಯಾತ್ಮದ ಮೇಲೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ವೇದಾಂತ, ಗೀತಾ, ಯೋಗಸೂತ್ರ, ವಚನಗಳ ಕುರಿತಾದ ಶ್ರೀ ಸ್ವಾಮಿಜಿಯವರ ಉಪನ್ಯಾಸಗಳು ಚಿಂತನೆ, ಅಭಿವ್ಯಕ್ತಿಗೆ ಹೆಸರುವಾಸಿಯಾಗಿದೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement