ಸಿದ್ಧೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ: ಶ್ರೀಗಳ ಇಚ್ಛೆಯಂತೆ ನಡೆದ ಅಂತ್ಯಕ್ರಿಯೆ

ವಿಜಯಪುರ:ಸೋಮವಾರ ಅಸ್ತಂಗತರಾದ ನಡೆದಾಡುವ ದೇವರು ಎಂದು ಕರೆಯಲ್ಪಡುತ್ತಿದ್ದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಶ್ರೀಗಳ ಅಂತ್ಯಸಂಸ್ಕಾರವನ್ನು ಜ್ಞಾನಯೋಗಾಶ್ರಮದಲ್ಲಿ ಅವರ ಇಚ್ಛೆಯಂತೆ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಷ ಮಾಡುವ ಮೂಲಕ ನೆರವೇರಿಸಲಾಯಿತು. ಯಾವುದೇ ಧಾರ್ಮಿಕ ವಿಧಿವಿಧಾನವಿಲ್ಲದೇ ಶ್ರೀಗಳು ಪಂಚಭೂತಗಳಲ್ಲಿ ಲೀನರಾದರು.
ಭಕ್ತರು ನೀಡಿದ ಶ್ರೀಗಂಧದ ತುಂಡುಗಳ ಮೇಲೆ ಪಾರ್ಥೀವ ಶರೀರವನ್ನು ಇರಿಸಿ, ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಬಸವಲಿಂಗ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಅಗ್ನಿಸ್ಪರ್ಶ ಮಾಡಿದರು. ಕೊಬ್ಬರಿಯೊಳಗೆ ದೇಶಿ ಹಸುವಿನ ತುಪ್ಪ ಹಾಕಿ ಅಗ್ನಿಸ್ಪರ್ಶ ಮಾಡಲಾಯಿತು. ಚಿತೆಗೆ ಶ್ರೀಗಂಧದ ಕಟ್ಟಿಗೆ, ಬೆರಣಿ, ದೇಶಿ ಹಸುವಿನ ತುಪ್ಪ ಬಳಸಲಾಗಿದೆ.
ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯಿಂದ ಸ್ಪರ್ಶ ಮಾಡುವುದು. ಶ್ರಾದ್ಧಿಕ ವಿಧಿ-ವಿಧಾನಕರ್ಮಗಳು ಅನಗತ್ಯ. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು. ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು ಎಂದು ಸ್ವಾಮೀಜಿ ತಮ್ಮ ಅಭಿವಂದನ ಪತ್ರದಲ್ಲಿ ಬರೆದಿಟ್ಟಿದ್ದರು. ಅವರ ಆಶಯದಂತೆ ಅಗ್ನಿಸ್ಪರ್ಶ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಂತ್ಯಕ್ರಿಯೆಗೂ ಮುನ್ನ ಶ್ರೀಗಳಿಗೆ ಸಾಯಂಕಾಲ 5:15ಕ್ಕೆ ಪೊಲೀಸರಿಂದ ಮೂರು ಸುತ್ತಿನ ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಶ್ರೀಗಳ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್​ ಯಡಿಯೂರಪ್ಪ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ ಉಪಸ್ಥಿತರಿದ್ದರು. ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ, ಎಂ.ಬಿ.ಪಾಟೀಲ​, ಶಾಸಕರಾದ ಸಿದ್ದು ಸವದಿ, ದೊಡ್ಡನಗೌಡ ಪಾಟೀಲ, ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಪ್ರಭಾಕರ ಕೋರೆ, ಮಾಜಿ ಸಚಿವ ಸವದಿ ಮೊದಲಾದವರು ಭಾಗಿಯಾಗಿದ್ದರು

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

ಅನಾರೋಗ್ಯದಿಂದಾಗಿ ಸೋಮವಾರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗಿದ್ದರು. ಇಂದು, ಮಂಗಳವಾರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವಿಜಯಪುರದ ಸೈನಿಕ ಶಾಲೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಶ್ರೀಗಳ ಅಂತಿಮ ದರ್ಶನ ಪಡೆಯಲು ನಗರದ ವಿಜಯಪುರದ ಸೈನಿಕ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಲಕ್ಷಾಂತರ ಭಕ್ತರು ದರ್ಶನ ಪಡೆದರು. ಅಂತ್ಯಸಂಸ್ಕಾರಕ್ಕೂ ಮುನ್ನ ಶ್ರೀಗಳ ಪಾರ್ಥಿವ ಶರೀರವನ್ನು ವಿಜಯಪುರದ ಸೈನಿಕ ಶಾಲೆಯಿಂದ ಅಪಾರ ಸಂಖ್ಯೆಯ ಭಕ್ತರ ನಡುವೆ ಜ್ಞಾನ ಯೋಗಾಶ್ರಮದ ಸ್ಥಳಕ್ಕೆ ತೆರೆದ ವಾಹನದಲ್ಲಿ ತರಲಾಯಿತು. ದಾರಿಯುದ್ದಕ್ಕೂ ಸಾವಿರಾರು ಜನರು ಪಾರ್ಥಿವ ಶರೀರವಿದ್ದ ವಾಹನದ ಮೇಲೆ ಹೂಗಳ ಮಳೆಯನ್ನುಸುರಿಸಿ ಶತಮಾನದ ಸಂತನಿಗೆ ಅಶ್ರುತರ್ಪಣ ನೀಡಿದರು.
ಶ್ರೀಗಳ ಇಚ್ಛೆಯಂತೆ ಆಶ್ರಮದ ಆವರಣದಲ್ಲಿ ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಷ ಮಾಡಲಾಯಿತು. ಸಿದ್ಧಪುರುಷ ಸಿದ್ದೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನರಾದರು

3.5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement