ಮೂವರು ಹೆಣ್ಣುಮಕ್ಕಳಿಗೆ ವಿಷವುಣಿಸಿ ತಾನೂ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ಬಾಗಲಕೋಟೆ: ಮೂರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾಯಿಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮೃತರನ್ನು ತಾಯಿ ರೇಖಾ ಬಗಲಿ (28), ಮಕ್ಕಳಾದ ಸನ್ನಿಧಿ (7), ಸಮೃದ್ಧಿ(4), ಶ್ರೀನಿಧಿ(2) ಎಂದು ಗುರುತಿಸಲಾಗಿದೆ. ಈ ಹಿಂದೆಯೂ ತಾಯಿ ರೇಖಾ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ.
ತಾಯಿ ರೇಖಾ ಜ್ಯೂಸ್‌ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕುಡಿಸಿದ್ದು, ಬಳಿಕ ತಾನೂ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವರು ಹೆಣ್ಣು ಮಕ್ಕಳಾದ ಕಾರಣ ಮಾನಸಿಕವಾಗಿ ರೇಖಾ ನೊಂದಿದ್ದರು ಎನ್ನಲಾಗುತ್ತಿದೆ. ಜೊತೆಗೆ ಇತ್ತೀಚೆಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು. ಹಾಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ. ಮೃತ ಮಕ್ಕಳ ಹಾಗೂ ತಾಯಿಯ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement