ಹುಬ್ಬಳ್ಳಿ: ಬ್ಯಾರಿಕೇಡ್‌ ದಾಟಿ ಹಾರ ಹಿಡಿದು ಪ್ರಧಾನಿ ಮೋದಿಯತ್ತ ಓಡಿ ಬಂದಿದ್ಯಾಕೆ ಎಂಬುದಕ್ಕೆ ಕಾರಣ ಹೇಳಿದ 12ರ ಬಾಲಕ

ಹುಬ್ಬಳ್ಳಿ: ನಗರದಲ್ಲಿ ಜನವರಿ 12ರಂದು ನಡೆದ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ್ದಾಗ ರೋಡ್‌ ಶೋ ನಡೆಸಿದ್ದರು. ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆಯೇ ಬಾಲಕನೊಬ್ಬ ಬ್ಯಾರಿಕೇಡ್ ದಾಟಿ ಪ್ರಧಾನ ಮಂತ್ರಿಗೆ ಹೂವಿನ ಹಾರ ಹಾಕಲು ಓಡಿ ಬಂದು ದೇಶಾದ್ಯಂತ ಸುದ್ದಿಯಾಗಿದ್ದ. ಈಗ ಪೊಲೀಸರನ್ನು ದಾಟಿ ಆತ ಪ್ರಧಾನಿಗಳ ಬಳಿ ಬಂದಿರುವುದು ಯಾಕೆ ಎನ್ನುವ ಪ್ರಶ್ನೆಗೆ ಸ್ವತಃ 12 ವರ್ಷದ ಬಾಲಕನೇ ಉತ್ತರಿಸಿದ್ದಾನೆ.
ನನಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಂದ್ರೆ ಅಪಾರ ಪ್ರೀತಿ ಹಾಗೂ ಅಭಿಮಾನ, ಅವರನ್ನು ನೋಡಿ ಸಂತೋಷ ಉಂಟಾಯಿತು. ಹೀಗಾಗಿ ಅವರಿದ್ದಲ್ಲಿಗೇ ಹೋಗಿ ಹಾರ ಹಾಕಬೇಕು ಎಂಬ ಮನಸ್ಸಾಯಿತು. ಅದಕ್ಕೆ ಅವರ ಬಳಿ ಹೋಗಲು ಪ್ರಯತ್ನಿಸಿದೆ ಎಂದು ಎಸ್‍ಪಿಜಿ, ಪೊಲೀಸ್ ಸರ್ಪಗಾವಲನ್ನು ಭೇದಿಸಿ ಪ್ರಧಾನಿ ಮೋದಿಗೆ ಹೂ ಹಾರಹಾಕಿ ದೇಶಾದ್ಯಂತ ಸುದ್ದಿಯಲ್ಲಿರುವ ಬಾಲಕ ಕುನಾಲ್  ಧೋಂಗಡಿ ಹೇಳಿದ್ದಾನೆ.

ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕ ಕುನಾಲ್‌, ನನಗೆ ಪ್ರಧಾನಿ ಮೋದಿ ಅಂದರೆ ಬಹಳ ಪ್ರೀತಿ. ಈ ಹಿನ್ನೆಲೆ ಪ್ರಧಾನಿ ಮೋದಿಗೆ ಹಾರ ಹಾಕಬೇಕೆಂದು ಹೋಗಿದ್ದೆ. ಪ್ರಧಾನಿಗಳನ್ನು ಹತ್ತಿರದಿಂದ ನೋಡಬೇಕೆಂಬ ಆಸೆ ಇತ್ತು. ಅವರನ್ನು ಮನೆಗೆ ಕರೆಯಬೇಕು ಎನ್ನುವ ಆಸೆ ಇತ್ತು. ಮೋದಿಗೆ ನಾನೇ ಹಾರ ಹಾಕಬೇಕು ಎಂದುಕೊಂಡಿದ್ದೆ. ಅದು ಸಾಧ್ಯವಾಗಲಿಲ್ಲ. ಅವರಿಗೆ ಶೇಕ್​ ಹ್ಯಾಂಡ್​ ಮಾಡಬೇಕೆಂಬ ಆಸೆ ಇತ್ತು, ಆದರೆ ಪೊಲೀಸರು ನನ್ನನ್ನು ತಡೆದರು, ಆದರೂ ನನ್ನ ಕೈಯಿಂದ ಹಾರ ತೆಗೆದುಕೊಂಡರು ಎಂದು ಸಂತೋಷವಾಗಿದೆ. ನಾನು ಅವರ ಎಡಗೈ ಅನ್ನು ಸ್ಪರ್ಷ ಮಾಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾನೆ.
12 ವರ್ಷದ ಕುನಾಲ್ ದೊಂಗಡಿ ಹುಬ್ಬಳ್ಳಿಯ ತೊರವಿಹೆಕ್ಕಲದ ನಿವಾಸಿ. ಕುನಾಲ್ ಕುಟುಂಬ ರಾಷ್ಟ್ರೀಯತೆ, ಆರ್ ಎಸ್ ಎಸ್ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೀತಿ ಹೊಂದಿದೆ. ಬಾಲಕ ಕುನಾಲಗೆ ಪ್ರಧಾನಿಯ ಮೋದಿಯವರೆಂದರೆ ಅಚ್ಚುಮೆಚ್ಚು.
ಕುನಾಲ್ ಎಂಟು ವರ್ಷದವನಿದ್ದಾಗ ಪ್ರಧಾನಿ ಮೋದಿ ಹುಬ್ಬಳ್ಳಿಗೆ ಬಂದಿದ್ದರು. ಆಗ ಅವರನ್ನು ನೋಡಿದ್ದ. ಮೋದಿಯವರು ಹುಬ್ಬಳ್ಳಿ ಬರುತ್ತಿರುವ ಸುದ್ದಿ ತಿಳಿದ ಕುನಾಲ್ ತನ್ನ ಕುಟುಂಬದವರ ಜೊತೆ ಮೋದಿ ಅವರನ್ನು ನೋಡಲು ಆಗಮಿಸಿದ್ದ. ಗುರುವಾರ ಕುನಾಲ್, ಮಾವ ಷಣ್ಮುಖ, ತಾತ ಮೋಹನ ಅವರ ಜೊತೆಗೆ ತನ್ನ ಚಿಕ್ಕ ಸೊಸೆ ಬ್ರಾಹ್ಮಣಿಗೆ ಆರ್ ಎಸ್ ಎಸ್ (RSS) ಪೋಷಾಕು ಹಾಕಿಸಿಕೊಂಡು ಮೋದಿ ನೋಡಲು ಗೋಕುಲ ರಸ್ತೆಯ ವಾಯವ್ಯ ಸಾರಿಗೆ ಸಂಸ್ಥೆಯ ಸಾಮ್ರಾಟ್ ಕಲ್ಯಾಣ ಮಂಟಪದ ಬಳಿ ನಿಂತಿದ್ದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement